ಬುಧವಾರ, ಜೂನ್ 16, 2021
26 °C
ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ

‘ಸಮಸಮಾಜ ನಿರ್ಮಿಸಿದ ಬಸವಣ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬಸವಣ್ಣನವರು ಕನ್ನಡ ನಾಡಿನಲ್ಲಿ ವಚನ ಕ್ರಾಂತಿ ನಡೆಸಿದರು. ಆರ್ಥಿಕ, ಧಾರ್ಮಿಕ, ಸಾಹಿತ್ಯ ಕ್ರಾಂತಿ ಮೂಲಕ ಜಡ್ಡುಗಟ್ಟಿದ ಸಮಾಜವನ್ನು ಬಡಿದೆಬ್ಬಿಸಿದ ಮಹಾನ್ ಕ್ರಾಂತಿ ಪುರುಷ ಎಂದು ಬಿಜೆಪಿ ಮುಖಂಡ ಡಾ.ಹಾಲನೂರು ಲೇಪಾಕ್ಷ್ ಅಭಿಪ್ರಾಯಪಟ್ಟರು.

ನಗರದ ವೀರಶೈವ ಗುರುಕುಲದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಬಸವಣ್ಣನ ಸಮನ್ವಯ ಸಿದ್ಧಾಂತ’ ಕುರಿತು ಉಪನ್ಯಾಸ ನೀಡಿದರು.

‘ಬಸವಣ್ಣನವರು ಒಂಬತ್ತು ಶತಮಾನಗಳ ಹಿಂದೆ ಇದ್ದ ಅನಿಷ್ಟ ಪದ್ಧತಿಗಳನ್ನು ಬುಡಸಮೇತ ಕಿತ್ತು ಬಿಸಾಡಿದರು. ಮೌಢ್ಯದಿಂದ ಜನರನ್ನು ಪಾರುಮಾಡಿದರು. ಜಾತಿ, ಮತ, ಸ್ತ್ರೀ, ಪುರುಷ ಭೇದ ಎಣಿಸದೆ ಸರ್ವರಿಗೂ ಇಷ್ಟಲಿಂಗದ ಪರಿಕಲ್ಪನೆ ಭಿತ್ತಿ, ನವಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದವರು’ ಎಂದು ಸ್ಮರಿಸಿದರು.

ಕಾಯಕ ದಾಸೋಹದ ಮೂಲಕ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ ಬೆಳೆದರು. ಅವರ ವಚನಗಳ ಮೌಲ್ಯಗಳು ಹಿಂದೆಂದಿಗಿಂತ ಇಂದು ಅಗತ್ಯ, ಅನಿವಾರ್ಯವಾಗಿವೆ ಎಂದರು.

ದತ್ತಿ ದಾನಿ ಹಾಗೂ ವೀರಶೈವ ಗುರುಕುಲ ವಿದ್ಯಾರ್ಥಿನಿಲಯದ ಅಧ್ಯಕ್ಷ ಜಿ.ಎನ್.ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ‘ತಂದೆ, ತಾಯಿಗಳ ನಿಸ್ವಾರ್ಥ ಬದುಕು ನಮಗೆ ಪ್ರೇರಣೆಯಾಗಿದೆ. ರೈತರಾಗಿ ಹಗಲಿರುಳು ದುಡಿದು ಶರಣರ ಕಾಯಕ, ದಾಸೋಹ ತತ್ವಗಳನ್ನು ಮೈಗೂಡಿಸಿಕೊಂಡಿದ್ದರು. ಇಂತಹ ದತ್ತಿ ಕಾರ್ಯಕ್ರಮಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ, ‘ಆಧುನಿಕತೆ ಬೆಳೆದಂತೆ ಮನುಷ್ಯ ಸ್ವಾರ್ಥಿಯಾಗಿ ಹೆತ್ತ ತಂದೆ, ತಾಯಿಗಳನ್ನು ಕೊನೆಗಾಲದಲ್ಲಿ ಸಾಕದೆ ದೂಡುವ ಸಮಾಜದಲ್ಲಿ ಪೂಜಿಸಿ ಆರಾಧಿಸುವ ಶರಣರ ಬದುಕು ಆದರ್ಶಮಯ’ ಎಂದು ನುಡಿದರು.

ಮುಖಂಡ ಬಿ.ರಾಜಶೇಖರಯ್ಯ ಮಾತನಾಡಿದರು. ಹಂ.ಸಿ.ಕುಮಾರ ಸ್ವಾಮಿ ವಚನಗಾಯನ ಮಾಡಿದರು. ಮಿಮಿಕ್ರಿ ಈಶ್ವರಯ್ಯ ಸ್ವಾಗತಿಸಿದರು. ಆರ್.ಎಸ್.ಸಿದ್ಧೇಶ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.