ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಬ್ಬರಿ ಖರೀದಿ ಮತ್ತೆ ಮುಂದಕ್ಕೆ

Published 1 ಫೆಬ್ರುವರಿ 2024, 6:39 IST
Last Updated 1 ಫೆಬ್ರುವರಿ 2024, 6:39 IST
ಅಕ್ಷರ ಗಾತ್ರ

ತುಮಕೂರು: ಬೆಂಬಲ ಬೆಲೆಯಲ್ಲಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಯನ್ನು ಮತ್ತೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಅದಕ್ಕೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಯಾವುದೇ ಕಾರಣ ನೀಡಿಲ್ಲ.

ಫೆ. 1ರಿಂದ ನಾಫೆಡ್ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿತ್ತು. ಇದಕ್ಕೂ ಮುನ್ನ ಜ. 20ರಿಂದ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ ಎರಡನೇ ಬಾರಿಗೆ ಮುಂದೂಡಿದ್ದು, ಕೊಬ್ಬರಿ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.

ಮಧ್ಯವರ್ತಿಗಳು, ವರ್ತಕರ ಹಾವಳಿ ತಪ್ಪಿಸುವ ಸಲುವಾಗಿ ತೆಂಗು ಬೆಳೆಯುವ ರೈತರಿಂದ ಬಯೋ ಮೆಟ್ರಿಕ್ ಪಡೆದು ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ತಂತ್ರಾಂಶ ಅಭಿವೃದ್ಧಿಪಡಿಸುವ ಪ್ರಯತ್ನ ನಡೆದಿತ್ತು. ಆದರೆ ಈವರೆಗೂ ಆ ಕೆಲಸ ಪೂರ್ಣಗೊಂಡಿಲ್ಲ. ಹಾಗಾಗಿ ಖರೀದಿ ಮತ್ತಷ್ಟು ತಡವಾಗಬಹುದು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜ. 24ರಂದು ನಗರದ ಎಪಿಎಂಸಿ ಪ್ರಾಂಗಣದಲ್ಲಿ ತರಾತುರಿಯಲ್ಲಿ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಫೆ. 1ರಿಂದ ಕೊಬ್ಬರಿ ಖರೀದಿ ಆರಂಭವಾಗಲಿದೆ. ಮತ್ತೆ ಮುಂದೂಡುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದ್ದರು. ಆದರೂ ಖರೀದಿ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಮುಂದಿನ ಖರೀದಿ ದಿನಾಂಕ ನೀಡದೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಮಹಾಮಂಡಳದ ಅಧಿಕಾರಿಗಳು ಹೇಳುತ್ತಿದ್ದಾರೆ. ದಿನಾಂಕ ನೀಡದೆ ಮುಂದೂಡಿರುವುದನ್ನು ಗಮನಿಸಿದರೆ ಇನ್ನೂ ಎಷ್ಟು ದಿನಗಳು ಬೇಕಾಗುತ್ತದೆ. ಅಲ್ಲಿಯವರೆಗೂ ರೈತರು ಏನು ಮಾಡಬೇಕು. ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತಡ ಮಾಡುತ್ತಿದ್ದಾರೆ. ತಂತ್ರಾಂಶ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತಿಲ್ಲ. ಹಿಂದಿನಂತೆ ಬಯೋ ಮೆಟ್ರಿಲ್ ಇಲ್ಲದೆ ಖರೀದಿ ಮಾಡಿ ರೈತರನ್ನು ವಂಚಿಸಲು ಮತ್ತೊಂದು ಸೂತ್ರ ರೂಪಿಸಿದಂತೆ ಕಾಣುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT