ಮಂಗಳವಾರ, ಮಾರ್ಚ್ 9, 2021
31 °C
ಪ್ರತಿಭಟನೆಗೆ ಅವಕಾಶ ನಿರಾಕರಣೆ: ಕೆಆರ್‌ಎಸ್‌ ಕಾರ್ಯಕರ್ತರ ಆಕ್ರೋಶ

ಪೊಲೀಸರೊಂದಿಗೆ ಜಟಾ‍ಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್) ಯುವ ಘಟಕದ ಅಧ್ಯಕ್ಷರ ಮೇಲಿನ ಹಲ್ಲೆ ಖಂಡಿಸಿ ಪಕ್ಷದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಇಲ್ಲಿನ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಿದ್ದರಿಂದ ಕಾರ್ಯ
ಕರ್ತರು ಪೊಲೀಸರ ನಡುವೆ ಬುಧವಾರ ವಾಗ್ವಾದ ನಡೆಯಿತು.

ಚುನಾವಣೆ ಕರ್ತವ್ಯಕ್ಕೆಂದು ಹೊರಠಾಣೆಗಳಿಂದ ಬಂದಿದ್ದ ಮೂವರು ಪೊಲೀಸ್ ಸಿಬ್ಬಂದಿ ಮಂಗಳವಾರ ರಾತ್ರಿ ಸಮವಸ್ತ್ರದಲ್ಲಿಯೇ ಮದ್ಯಸೇವಿಸಿದ್ದಾರೆ ಎಂದು ಆರೋಪಿಸಿದ ಕೆಆರ್‌ಎಸ್‌ ಯುವಘಟಕದ ಅಧ್ಯಕ್ಷ ಜಾಣಗೆರೆರಘು ಅವರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ವಿಡಿಯೊ ಮಾಡಲು ಆರಂಭಿಸಿದಾಗ ಪೊಲೀಸರು ಓಡಿಹೋಗುತ್ತಿದ್ದ ದೃಶ್ಯವನ್ನು ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು.

ಮಂಗಳವಾರ ರಾತ್ರಿ ಜಾಣಗೆರೆ ರಘು ಮತ್ತು ಬೆಂಬಲಿಗರನ್ನು ವಶಕ್ಕೆ ಪಡೆದು, ಡಿವೈಎಸ್‌ಪಿ ಜಗದೀಶ್ ಸಮ್ಮುಖದಲ್ಲಿ ವಿಚಾರಣೆ ಮಾಡಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ವಶಕ್ಕೆ ಪಡೆದ ಪೊಲೀಸರು ಥಳಿಸಿದ್ದಾರೆ ಎಂದು ಜಾಣಗೆರೆರಘು ಆರೋಪಿಸಿದ್ದರು. ಘಟನೆ ಖಂಡಿಸಿ ಬುಧವಾರ ಬೆಳಗ್ಗೆ ಕುಣಿಗಲ್ ಪೊಲೀಸ್ ಠಾಣೆ ಎದುರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣರೆಡ್ಡಿ ಮತ್ತು ಪದಾಧಿಕಾರಿಗಳು ಪ್ರತಿಭಟನೆಗೆ ಮುಂದಾದಾಗ ಸಿಪಿಐ ಗುರುಪ್ರಸಾದ್‌, ಪಿಎಸ್ಐ ವಿಕಾಸ್ ಗೌಡ ಮತ್ತು ಸಿಬ್ಬಂದಿ ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆಗೆ ಸಜ್ಜಾದ ಪದಾಧಿಕಾರಿಗಳನ್ನು ತಡೆದರು.

ಈ ವೇಳೆ ರವಿಕೃಷ್ಣರೆಡ್ಡಿ, ಪೊಲೀಸರ ವರ್ತನೆಯನ್ನು ಖಂಡಿಸುವ ಬರದಲ್ಲಿ ‘ಅಧಿಕಾರಿಯಾಗಲು ನಾಲಾಯಕ್ ಮತ್ತು ಅನ್‌ಪಿಟ್’ ಎಂದಾಗ ಪೊಲೀಸರು ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ವಾದಕ್ಕಿಳಿದರು. ಪ್ರಮುಖರನ್ನು ವಶಕ್ಕೆ ಪಡೆದು. ಮೊಬೈಲ್ ಬಳಸಿ ಲೈವ್ ಮಾಡುತ್ತಿದ್ದನ್ನು ಕಂಡ ಪೊಲೀಸರು ಮೊಬೈಲ್‌ಗಳನ್ನು ವಶಕ್ಕೆ ಪಡೆದರು.

ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ಸಭೆ ನಡೆದು ಸಮವಸ್ತ್ರದಲ್ಲಿ ಮದ್ಯಸೇವಿಸಿದ್ದ ಮೂವರು ಪೊಲೀಸರನ್ನು ಅಮಾನತು ಮಾಡಲಾಯಿತು. ಜಾಣಗೆರೆರಘು ಮೇಲೆ ಹಲ್ಲೆ ಮಾಡಿದ್ದ ಪೊಲೀಸರ ವಿರುದ್ಧ ಕ್ರಮತೆಗೆದುಕೊಳ್ಳುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಕೆಆರ್‌ಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ನಿಂಗೆಗೌಡ, ಪದಾಧಿಕಾರಿಗಳಾದ ದೀಪಲ್, ಮಲ್ಲಿಕಾರ್ಜುನ್, ಗಜೇಂದ್ರ ಕುಮಾರ್ ಗೌಡ, ರಘುಪತಿ ಭಟ್, ಎಚ್.ಜಿ.ರಮೇಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು