ಬುಧವಾರ, ಮಾರ್ಚ್ 29, 2023
23 °C

ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶ ಮಾರಾಟ ಮಾಡುತ್ತಿದೆ; ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಸೈಕಲ್ ಜಾಥಾ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ, ಕಾರ್ಮಿಕ, ಎಸ್ಸಿ ಘಟಕ, ಕಿಸಾನ್ ಘಟಕ ಸೇರಿದಂತೆ ವಿವಿಧ ಮಂಚೂಣಿ ಘಟಕಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳದ ವಿರುದ್ಧ ಘೋಷಣೆ ಕೂಗಿದರು.

‘ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಕಟ್ಟಿ ಬೆಳೆಸಿದ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮಾರಾಟ ಮಾಡುತ್ತಿದೆ. ಕೇಂದ್ರ ಸ್ವಾಮ್ಯದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಹೈರಾಣಾಗಿದ್ದಾರೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಶಫೀವುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.

ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಮಾಡಿ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಕಿತ್ತುಕೊಂಡಿದೆ. ತೈಲದ ಮೇಲಿನ ತೆರಿಗೆಯನ್ನು ದುಪ್ಪಟ್ಟು ಮಾಡುವ ಮೂಲಕ ಜನರ ಜೇಬು ಲೂಟಿ ಮಾಡುತ್ತಿದೆ. ವಿವಿಧೆಡೆ ಅದಾನಿ, ಅಂಬಾನಿ ಉದ್ಯಮಿಗಳು ಪಡೆದಿರುವ ₹1.5 ಲಕ್ಷ ಕೋಟಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪಡೆದಿದ್ದ ₹96 ಸಾವಿರ ಕೋಟಿ ಸಾಲಮನ್ನಾ ಮಾಡಲಾಗಿದೆ. ಆದರೆ ಅಗತ್ಯ
ವಸ್ತುಗಳ ಬೆಲೆ ಏರಿಕೆಮಾಡಿ ಜನಸಾಮಾನ್ಯರಿಗೆ ಬರೆ ಹಾಕುತ್ತಿದೆ ಎಂದು ಟೀಕಿಸಿದರು.

ಮುಖಂಡ ಎಂ.ಡಿ.ಲಕ್ಷ್ಮಿನಾರಾಯಣ್, ‘ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಲಾಗಿದೆ. ಬ್ಯಾಂಕ್‍ಗಳನ್ನು ವಿಲೀನ ಮಾಡುವ ಮೂಲಕ ಗೌತಮ್ ಅದಾನಿಗೆ ಮಾರಾಟ ಮಾಡಲಿದ್ದಾರೆ. ಜನರ ಆಸ್ತಿಯಾಗಿದ್ದ ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡಲಾಯಿತು. ಎಲ್ಲವನ್ನೂ ಮಾರಾಟಮಾಡಿದ ನಂತರ ಕೊನೆಗೆ ದೇಶವನ್ನು ಮಾರಾಟ ಮಾಡಲು ಬಿಜೆಪಿ ಅಧಿಕಾರಕ್ಕೆ ಬಂದಂತಿದೆ ಎಂದು ಲೇವಡಿ ಮಾಡಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ತೊಗರಿ ಬೇಳೆ ಬೆಲೆ ಕೆ.ಜಿ ₹70 ಆಗಿದ್ದಕ್ಕೆ ಬೀದಿಗೆ ಇಳಿದಿದ್ದ ಬಿಜೆಪಿ ಮುಖಂಡರು, ಈಗ ₹170ಕ್ಕೆ ಹೆಚ್ಚಳವಾಗಿದ್ದರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಘಟಕದ ಅಧ್ಯಕ್ಷ ಅತೀಕ್ ಅಹಮದ್, ‘ಕೋವಿಡ್‌ ಮೂರನೇ ಅಲೆಯ ಆತಂಕಕ್ಕೆ ಜನರನ್ನು ದೂಡಿ ಭಯ ಹುಟ್ಟಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಲಸಿಕೆ ನೀಡುತ್ತಿಲ್ಲ. ಬಿಜೆಪಿ ಸರ್ಕಾರ ಕೊಡುತ್ತಿರುವ ಪುಡಿಗಾಸಿನ ಪರಿಹಾರದಿಂದ ಕುಟುಂಬ
ನಿರ್ವಹಣೆ ಕಷ್ಟಕರವಾಗಿದೆ’ ಎಂದು ದೂರಿದರು.

ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ಜಕ್ಕಪ್ಪನವರ್, ಮುಖಂಡರಾದ ಚಾಂದ್‍ಪಾಷ, ಗುಬ್ಬಿ ಶ್ರೀನಿವಾಸ್, ವೀರಣ್ಣಗೌಡ, ಶಬ್ಬು, ಭರತ್, ದಾದಾಪೀರ್, ಥಾಮ್ಸನ್, ಮಹಮ್ಮದ್ ಶಫೀಕ್, ಸಂಜೀವ್‍ಕುಮಾರ್, ಗುರುಪ್ರಸಾದ್, ಶಿವಾಜಿ, ಸಿದ್ದಲಿಂಗೇಗೌಡ, ಪ್ರಕಾಶ್, ನಿಂಗರಾಜು, ಷಾಬಾಬು, ಅನಿಲ್, ಜಿ.ಎನ್.ಗೌಡ, ಹರೀಶ್, ಶಿವಪ್ರಸಾದ್, ಕೃಷ್ಣ, ಗೀತಾ ರುದ್ರೇಶ್, ಗೀತಾ ನಾಗೇಶ್, ನಾಗಮಣಿ, ಯಶೋದ, ಮುಬೀನಾ, ಲಕ್ಷ್ಮಿ, ಎಸ್.ವಿ.ಗೀತಾ, ಅರುಂಧತಿ, ರೂಪಶ್ರೀ, ಭಾಗ್ಯ, ಲಕ್ಷ್ಮಿದೇವಿ ಇತರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು