ಸೋಮವಾರ, ಜೂನ್ 14, 2021
26 °C
ಕಾರೇಹಳ್ಳಿ ದನಗಳ ಜಾತ್ರೆಯಲ್ಲಿ ಗಮನಸೆಳೆದ ವಿವಿಧ ತಳಿಯ ರಾಸುಗಳು

ಹುಳಿಯಾರು: ಜಾತ್ರೆಯಲ್ಲಿ ರಾಸುಗಳ ವ್ಯಾಪಾರ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಹೋಬಳಿಯ ಇತಿಹಾಸ ಪ್ರಸಿದ್ಧ ಕಾರೇಹಳ್ಳಿ ರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ರಾಸುಗಳು ಗಮನ ಸೆಳೆಯುತ್ತಿವೆ. ಬ್ರಹ್ಮರಥೋತ್ಸವಕ್ಕೆ ಮುನ್ನವೇ ನಾನಾ ಕಡೆಯಿಂದ ಬಂದಿದ್ದ ರೈತರು ಜಾತ್ರೆಯಲ್ಲಿ ಕೊಡು, ಕೊಳ್ಳುವಿಕೆಗೆ ಮುಂದಾಗಿದ್ದಾರೆ.

ಕಾರೇಹಳ್ಳಿ ರಂಗನಾಥಸ್ವಾಮಿ ದನಗಳ ಜಾತ್ರೆ ಶಿವರಾತ್ರಿ ಹಬ್ಬದ ತರುವಾಯ ಆರಂಭವಾಗಿ ಯುಗಾದಿ ಹಬ್ಬಕ್ಕೆ ಮೊದಲು ಮುಗಿಯುತ್ತದೆ. ಸಾಮಾನ್ಯವಾಗಿ ಯುಗಾದಿ ಹಬ್ಬದ ಹೊಸ ವರ್ಷದ ನಂತರ ಏಪ್ರಿಲ್ ತಿಂಗಳಿನಲ್ಲಿ ಪೂರ್ವ ಮುಂಗಾರಿನ ಹೊಸ ಮಳೆ ಅಶ್ವಿನಿ ಆರಂಭವಾಗುತ್ತದೆ. ಪ್ರತಿ ವರ್ಷ ಪೂರ್ವ ಮುಂಗಾರು ಆರಂಭಕ್ಕೆ ಮುನ್ನ ಹಿಂಗಾರಿನ ಕೊನೆ ಮಳೆಗಳಾದ ಪೂರ್ವ ಭಾದ್ರಪದ ಹಾಗೂ ರೇವತಿ ಸಿಂಚನವಾಗುವ ಪರಿಪಾಠವಿದೆ.

ಮಳೆ ಬಂದರೆ ಪೂರ್ವ ಮುಂಗಾರು ಬಿತ್ತನೆಗೆ ಭೂಮಿಯನ್ನು ಅಣಿಗೊಳಿಸಲು ಜಾತ್ರೆಯಿಂದ ರಾಸುಗಳನ್ನು
ಕೊಳ್ಳಲು ಸಹಾಯವಾಗುತ್ತದೆ ಎಂಬ ಭಾವನೆ ರೈತರಲ್ಲಿದೆ. ಹತ್ತು ದಿವಸಗಳ ಕಾಲ ನಡೆಯುವ ಜಾತ್ರೆಯಲ್ಲಿ ವಿವಿಧ ಜಿಲ್ಲೆಗಳಿಂದ ರೈತರು, ದಲ್ಲಾಳಿಗಳು ರಾಸುಗಳನ್ನು ಕೊಳ್ಳಲು ಬರುತ್ತಾರೆ. ಹೆಚ್ಚಾಗಿ ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಗದಗ, ಆಂಧ್ರದ ಅನಂತಪುರದ ಜಿಲ್ಲೆಯ ಕೆಲ ತಾಲ್ಲೂಕುಗಳಿಂದಲೂ ರೈತರು ಜಾತ್ರೆಗೆ ಬರುತ್ತಾರೆ.

ಸಾಮಾನ್ಯವಾಗಿ ಎಲ್ಲ ಜಾತ್ರೆಗಳಲ್ಲಿ ಬ್ರಹ್ಮರಥೋತ್ಸವ ಮುಗಿದ ಮೇಲೆ ರಾಸುಗಳು ಸೇರುವ ಪರಿಪಾಠವಿದೆ. ಆದರೆ ಈ ಬಾರಿಯ ಜಾತ್ರೆಯಲ್ಲಿ ಬ್ರಹ್ಮರಥೋತ್ಸವಕ್ಕೆ ಮುನ್ನವೇ ರಾಸುಗಳು ಸೇರಿವೆ. ಜಾತ್ರೆ ಆರಂಭವಾಗಿ ಎರಡು-ಮೂರು ದಿನವಾದರೂ ಉತ್ತಮ ವ್ಯಾಪಾರ ನಡೆಯುತ್ತಿದೆ. ಕೆಲ ಉತ್ತಮ ರಾಸುಗಳು ವಾಹನಗಳಿಂದ ಇಳಿಸಿದ ತಕ್ಷಣವೇ ವ್ಯಾಪಾರ ಆಗುತ್ತಿವೆ. ಸತತ ಬರ, ಅಂತರ್ಜಲ ಕುಸಿತದಿಂದ ಕಂಗಾಲಾಗಿ ರಾಸುಕಳೆದುಕೊಂಡರೆ ಮತ್ತೆ ಕೆಲವರು ಆಧುನಿಕ ಜಗತ್ತಿಗೆ ಜೋತು ಬಿದ್ದು ಕೃಷಿ ತ್ಯಜಿಸಿ ರಾಸುಗಳನ್ನು ಕಳೆದು ಕೊಂಡಿದ್ದಾರೆ. ಇನ್ನೂ ಕೆಲವರು ತಮ್ಮಲ್ಲಿದ್ದ ದೇಸಿ ತಳಿಗಳನ್ನು ಮಾರಾಟ ಮಾಡಿ ಕೇವಲ ಹೈನುಗಾರಿಕೆಗೆ ಮಾತ್ರವೇ ಬಳಕೆಯಾಗುವ ಸೀಮೆ ತಳಿಗಳನ್ನು ಇಟ್ಟುಕೊಂಡಿರುವ ನಡುವೆಯೂ ನಡುವೆಯೂ ಜಾತ್ರೆಯಲ್ಲಿ ಸಾವಿರಾರು ರಾಸುಗಳು ಜಾತ್ರೆಗೆ ಸೇರಿರುವುದು ಸಂತೋಷದ ವಿಷಯವಾಗಿದೆ.

ರಾಸುಗಳ ಸಂಖ್ಯೆ ಕ್ಷೀಣಿಸುತ್ತಿರುವ ಪರಿಣಾಮ ಕೃಷಿ ಚಟುವಟಿಕೆಗಳಿಗೆ ರಾಸುಗಳನ್ನು ಕೊಳ್ಳುವುದು ದುಸ್ತರವಾಗಿದೆ. ಕೇವಲ ಬೇಸಾಯಕ್ಕೆ ಬಳಸುವ ರಾಸುಗಳ ಬೆಲೆ ₹45 ಸಾವಿರಕ್ಕೆ ಕಡಿಮೆಯಿಲ್ಲ ಎಂದು ಚಿತ್ರದುರ್ಗ ಜಿಲ್ಲೆಯಿಂದ ಆಗಮಿಸಿದ್ದ ರೈತರೊಬ್ಬರು ಹೇಳಿದರು. ಇನ್ನೂ ಉತ್ತಮ ದೇಸಿ ತಳಿಗಳ ರಾಸುಗಳು ಸಹ ಸೇರಿವೆ.

ಇನ್ನೂ ದೇಸಿ ತಳಿಯ ಎಳೆ ಪ್ರಾಯದ ಕರುಗಳಿಗೆ ಉತ್ತಮ ಬೆಲೆಯಿದ್ದು, ಅದರಲ್ಲೂ ಮುಂದಿನ ವರ್ಷದ ಕೃಷಿ ಚಟುವಟಿಕೆಗೆ ಪೂರಕವಾಗಿರುವ ಒಂದು ಜತೆ ರಾಸುಗಳಿಗೆ ₹80 ಸಾವಿರದಿಂದ ₹1ಲಕ್ಷದವರೆಗೆ ಬೆಲೆಯಿದೆ. ಸಾಮಾನ್ಯವಾಗಿ ಬ್ರಹ್ಮರಥೋತ್ಸವದ ನಂತರ ದನಗಳು ಜಾತ್ರೆಗೆ ಸೇರುತ್ತಿದ್ದವು ಆದರೆ ಇತ್ತೀಚಿನ ವರ್ಷಗಳಲ್ಲಿ ಮೊದಲೇ ಜಾತ್ರೆಗೆ ಜಾನುವಾರು ಸೇರುತ್ತವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.