ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳೊಂದಿಗೆ ಸಭ್ಯತೆಯ ವರ್ತನೆ ಬಾಂಧವ್ಯ ವೃದ್ಧಿ ಸಾಧ್ಯ

ಐಎಂಎ ತುಮಕೂರು ಜಿಲ್ಲಾ ಘಟಕ ಕಚೇರಿಗೆ ಭೇಟಿ: ವೈದ್ಯರಿಗೆ ರಾಜ್ಯ ಘಟಕ ಅಧ್ಯಕ್ಷ ಡಾ.ಅನ್ನದಾನಿ ಮೇಟಿ ಸಲಹೆ
Last Updated 20 ಜುಲೈ 2019, 14:52 IST
ಅಕ್ಷರ ಗಾತ್ರ

ತುಮಕೂರು: ‘ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಸಭ್ಯತೆಯಿಂದ ವರ್ತಿಸಿ ಚಿಕಿತ್ಸೆ ನೀಡಿದರೆ ವೈದ್ಯರು ಮತ್ತು ರೋಗಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ’ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಅನ್ನದಾನಿ ಮೇಟಿ ಹೇಳಿದರು.

ಶನಿವಾರ ನಗರದ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಜಿಲ್ಲಾ ಶಾಖೆ ಕಚೇರಿಗೆ ಭೇಟಿ ನೀಡಿ ಮಾತನಾಡಿದರು.

‘ವೈದ್ಯರು ರೋಗಿಗಳ ಜತೆ ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳಬೇಕು. ಆ ಮೂಲಕ ಆಸ್ಪತ್ರೆಗೆ ಬರುವ ರೋಗಿಗಳ ರೋಗ ಪತ್ತೆ ಹಚ್ಚಿ ರೋಗದ ಬಗ್ಗೆ ಅವರಿಗೆ ಸವಿಸ್ತಾರವಾಗಿ ತಿಳಿಸಿದರೆ ಚಿಕಿತ್ಸೆ ಪಡೆಯುವ ತೀರ್ಮಾನ ಕೈಗೊಳ್ಳುತ್ತಾರೆ. ಅದರಿಂದ ವೈದ್ಯರಿಗೂ ಚಿಕಿತ್ಸೆ ನೀಡಲು ಸುಲಭವಾಗುತ್ತದೆ. ರೋಗಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರೆ ವಿನಾ ಕಾರಣ ನಡೆಯುವ ಸಂಘರ್ಷಗಳಿಗೆ ಆಸ್ಪದ ಇಲ್ಲದಂತಾಗುತ್ತದೆ’ ಎಂದು ಹೇಳಿದರು.

ವೈದ್ಯಕೀಯ ಸೇವೆಗೆಳಿಗೆ ಸಂಬಂಧಿಸಿದಂತೆ ಈ ಹಿಂದೆ ಇದ್ದ ಎಂಸಿಎಯನ್ನು ತೆಗೆದು ಹಾಕಿ ಎನ್‌ಎನ್‌ಸಿ ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಸರ್ಕಾರದ ಈ ಕ್ರಮದ ವಿರುದ್ಧ ನಮ್ಮ ಹೋರಾಟ ನಿರಂತವಾಗಿರುತ್ತದೆ ಎಂದರು.

ಐಎಂಎ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಅದರಂತೆ ತುಮಕೂರಿಗೂ ಭೇಟಿ ನೀಡಿ ಐಎಂಎ ಜಿಲ್ಲಾ ಶಾಖೆಯ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಮಸ್ಯೆಗಳ ಪರಿಹರಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಸ್.ಜಿ.ಪರಮೇಶ್ವರಪ್ಪ ಮಾತನಾಡಿ, ‘ಯುವ ವೈದ್ಯರು ಹಿರಿಯ ವೈದ್ಯರ ಮಾರ್ಗದರ್ಶನದಲ್ಲಿ ವೈದ್ಯಕೀಯ ಸೇವೆಯ ಜತೆಗೆ ಸಮಾಜಮುಖಿ ಕಾರ್ಯಗಳಲ್ಲೂ ಮುಂಚೂಣಿಯಲ್ಲಿರಬೇಕು’ ಎಂದರು.

ಐಎಂಎ ರಾಜ್ಯ ಘಟಕ ಉಪಾಧ್ಯಕ್ಷ ಡಾ.ಲಕ್ಷ್ಮೀಕಾಂತ್, ಜಿಲ್ಲಾ ಘಟಕ ಉಪಾಧ್ಯಕ್ಷ ಡಾ.ಜಿ. ಮಹೇಶ್, ಜಿಲ್ಲಾ ಕಾರ್ಯದರ್ಶಿ ಡಾ. ಎಚ್.ಎಂ.ರಾಜೇಂದ್ರಪ್ರಸಾದ್, ನಿರ್ದೇಶಕರಾದ ಡಾ.ಎಂ.ಸಿ.ಕೃಷ್ಣ, ವೈದ್ಯರಾದ ಡಾ.ಸುರೇಶ್‌ಬಾಬು, ಡಾ.ವಿಜಯಕುಮಾರ್, ಡಾ. ಭೂಷಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT