ತುಮಕೂರು: ಪರಿಶಿಷ್ಟರ ಸವಲತ್ತಿಗೆ ಹಿಂದುಳಿದವರ ಬೇಡಿಕೆ

ತುಮಕೂರು: ಹಿಂದುಳಿದ ಪ್ರವರ್ಗ 1ರಲ್ಲಿ ಬರುವ ಎಲ್ಲಾ 95 ಜಾತಿಗಳ ಜನರಿಗೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಕೊಡುತ್ತಿರುವ ಸವಲತ್ತುಗಳನ್ನು ನೀಡುವಂತೆ ಪ್ರವರ್ಗ 1ರಲ್ಲಿ ಬರುವ ಸಮುದಾಯಗಳ ಮುಖಂಡರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಪ್ರವರ್ಗ 1ರ ಜಾತಿ, ಜನಾಂಗಗಳ ಒಕ್ಕೂಟ ಹಾಗೂ ಪ್ರವರ್ಗ 1ರ ವ್ಯಾಪ್ತಿಯಲ್ಲಿ ಬರುವ ಸಮುದಾಯಗಳ ಪ್ರಮುಖರ ನೇತೃತ್ವದಲ್ಲಿ ಭಾನುವಾರ ನಡೆದ ಚಿಂತನ– ಮಂಥನ ಸಭೆಯಲ್ಲಿ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು. ಪರಿಶಿಷ್ಟರಿಗೆ ನೀಡುತ್ತಿದ್ದ ಎಲ್ಲಾ ಸೌಲಭ್ಯಗಳನ್ನು ಈ ಹಿಂದಿನಂತೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಒಕ್ಕೂಟದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್, ‘ಈ ಹಿಂದೆ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನೀಡುತ್ತಿದ್ದ ಎಲ್ಲಾ ರೀತಿಯ ಶೈಕ್ಷಣಿಕ ಸವಲತ್ತುಗಳನ್ನು ಪ್ರವರ್ಗ 1ಕ್ಕೂ ನೀಡಲಾಗುತ್ತಿತ್ತು. ಆದರೆ ಕೆಲ ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿದೆ. ಈಗಷ್ಟೇ ಶಿಕ್ಷಣಕ್ಕೆ ತೆರೆದುಕೊಂಡಿರುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರಿಗೆ ಸೌಲಭ್ಯಗಳು ಸಿಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ಪ್ರವರ್ಗ 1ರ ಅಡಿಯಲ್ಲಿ ಬರುವ 95 ಜಾತಿಗಳು ಹಾಗೂ 388 ಉಪ ಪಂಗಡಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ₹5 ಕೋಟಿ ಮೀಸಲಿಡಬೇಕು. 95 ಜಾತಿಗಳಲ್ಲಿ 46 ಜಾತಿಗಳು ಅತ್ಯಂತ ನಿಕೃಷ್ಟವಾದ ಬದುಕು ನಡೆಸುತ್ತಿವೆ. ಈ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅರ್ಹವಾಗಿದ್ದು, ಆ ಕಾರಣಕ್ಕೆ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು. ಈ ಅಧ್ಯಯನದ ವರದಿಯನ್ನು ಆಧರಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪ್ರವರ್ಗ 1ರಲ್ಲಿನ ಜಾತಿಗಳ ನಿರಂತರ ಹೋರಾಟದ ಫಲವಾಗಿ ಶೇ 3ರಷ್ಟಿದ್ದ ಮೀಸಲಾತಿಯನ್ನು ಶೇ 4ಕ್ಕೆ ಹೆಚ್ಚಿಸಲಾಗಿದೆ. ಆದರೆ ಈಗ ಕೆಲವು ಪ್ರಬಲ ಜಾತಿಗಳನ್ನು ಪ್ರವರ್ಗ 1ಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಈಗಾಗಲೇ ಎಲ್ಲವನ್ನು ಕಳೆದುಕೊಂಡಿರುವ ಹಿಂದುಳಿದ ಜಾತಿಯವರು ಬಲಾಢ್ಯರ ಜತೆ ಪೈಪೋಟಿ ನಡೆಸಲಾಗದೆ ಬೀದಿಗೆ ಬೀಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಬಲ ಜಾತಿಗಳನ್ನು ಹೊಸದಾಗಿ ಪ್ರವರ್ಗ–1ಕ್ಕೆ ಸೇರಿಸಲು ಅವಕಾಶ ನೀಡದಂತೆ ಹೋರಾಟ ನಡೆಸಬೇಕು. ಅಪ್ಪನ ಆಸ್ತಿ ಹಂಚಿಕೆಗಷ್ಟೇ ಹೋರಾಟಕ್ಕೆ ಇಳಿಯದೆ, ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು, ನಮ್ಮ ಸವಲತ್ತುಗಳನ್ನು ಬೇರೆಯವರು ಕಸಿದುಕೊಳ್ಳದಂತೆ ಎಚ್ಚರವಹಿಸಿ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಪ್ರವರ್ಗ 1ರ ಜಾತಿಗಳಲ್ಲಿರುವ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡಬೇಕು ಹಾಗೂ ಇನ್ನಿತರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಖ್ಯಮಂತ್ರಿ ಗಮನ ಸೆಳೆಯಲಾಗಿದೆ. ಶೀಘ್ರದಲ್ಲೇ ಒಂದು ಒಳ್ಳೆಯ ನಿರ್ಧಾರ ಪ್ರಕಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಂಗಾವರ ಕರಿಯಪ್ಪ, ಮುಖಂಡರಾದ ಹನುಮಂತರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಕೇಶ್, ಜೋಗಿ ಸಮಾಜದ ಪೂರ್ಣಿಮಾ ಜೋಗಿ ಮಾತನಾಡಿದರು. ವಿವಿಧ ಸಮುದಾಯಗಳ ಮುಖಂಡರಾದ ಚಂದ್ರಕಲಾ, ಪುಟ್ಟರಾಜು, ಶ್ರೀನಿವಾಸ್, ಬೆಟ್ಟಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.