ತುಮಕೂರು: ಜಲ ಜೀವನ್ ಮಿಷನ್ ಯೋಜನೆ (ಜೆಜೆಎಂ) ಕಾಮಗಾರಿಯ ಬಿಲ್ ಹಣ ಬಿಡುಗಡೆ ಮಾಡಲು ₹1.51 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಎಂಜಿನಿಯರ್‌ಗಳು ಸೋಮವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚಿಕ್ಕನಾಯಕನಹಳ್ಳಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮಾಮಹೇಶ್, ಎಂಜಿನಿಯರ್ ಶಶಿಕುಮಾರ್ (ಹೊರಗುತ್ತಿಗೆ) ಹಾಗೂ ಸಹಾಯಕ ಎಂಜಿನಿಯರ್ ಕಿರಣ್ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಗುತ್ತಿಗೆ ಕಾಮಗಾರಿಯ ಒಟ್ಟು ಮೊತ್ತದಲ್ಲಿ ಶೇ 6.5ರಷ್ಟು ಲಂಚ ನೀಡುವಂತೆ ಗುತ್ತಿಗೆದಾರರನ್ನು ಒತ್ತಾಯಿಸಿದ್ದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನವಿಲೆ ಗ್ರಾಮದ ಗುತ್ತಿಗೆದಾರ ಎನ್.ಸಿ.ಚಿಕ್ಕೇಗೌಡ ಅವರು ಕಾರೇಹಳ್ಳಿ, ಅಣ್ಣೆಕಟ್ಟೆ, ಕ್ಯಾತನಾಯಕನಹಳ್ಳಿ ಗ್ರಾಮಗಳಲ್ಲಿ ಜೆಜೆಎಂ ಯೋಜನೆಯಡಿ ನಲ್ಲಿ ಸಂಪರ್ಕ, ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಇತರೆ ಕಾಮಗಾರಿ ಮಾಡಿಸಿದ್ದರು. ಕಾಮಗಾರಿಯ ಹಣ ಅವರ ಖಾತೆಗೆ ಜಮೆಯಾಗಿತ್ತು. ಈ ಹಣದಲ್ಲಿ ಉಮಾಮೇಶ್ ಶೇ 3ರಷ್ಟು, ಶಶಿಕುಮಾರ್ ಶೇ 2ರಷ್ಟು, ಕಿರಣ್ ಶೇ 1.5ರಷ್ಟು ಪಾಲು ಕೇಳಿದ್ದರು. ಒಟ್ಟು ₹1.51 ಲಕ್ಷ ಲಂಚ ನೀಡುವಂತೆ ಒತ್ತಡ ಹಾಕಿದ್ದರು.
ಈ ಸಂಬಂಧ ಚಿಕ್ಕೇಗೌಡ, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಚಿಕ್ಕನಾಯಕನಹಳ್ಳಿ ಕಚೇರಿಯಲ್ಲಿ ಹಣ ತೆಗೆದುಕೊಳ್ಳುವಾಗ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
‘ಡಿವೈಎಸ್‌ಪಿಗಳಾದ ಕೆ.ಜಿ.ರಾಮಕೃಷ್ಣ, ಬಿ.ಉಮಾಶಂಕರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಬಿ.ಮೊಹ್ಮದ್ ಸಲೀಂ, ಕೆ.ಸುರೇಶ್, ಶಿವರುದ್ರಪ್ಪ ಮೇಟಿ, ಸಿಬ್ಬಂದಿಗಳಾದ ಆಲಂಪಾಷ, ಯತೀಗೌಡ, ಪ್ರಕಾಶ್, ರಾಘವೇಂದ್ರ, ಬಸವರಾಜು, ಮಹಾಲಿಂಗಪ್ಪ, ಸಂತೋಷ್, ಕರಿಯಪ್ಪ, ಗಿರೀಶ್‌ಕುಮಾರ್, ಯಶೊದ, ರವೀಶ್, ಎಂ.ಭಾಸ್ಕರ್, ರಂಗಸ್ವಾಮಿ ಅವರ ತಂಡ ಕಾರ್ಯಾಚರಣೆ ನಡೆಸಿತ್ತು’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.