ಭಾನುವಾರ, ಡಿಸೆಂಬರ್ 6, 2020
22 °C
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ

ದೂರು ಹೇಳಿಕೊಳ್ಳದ ಜಿಲ್ಲೆ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ರಾಜ್ಯದಲ್ಲಿ ನೌಕರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಗೆಹರಿಸಿಕೊಂಡರೆ, ಜಿಲ್ಲೆ ನೌಕರರು ಮಾತ್ರ ಸಮಸ್ಯೆ ಹೇಳಿಕೊಂಡು ಬಗೆಹರಿಸಿಕೊಳ್ಳುತ್ತಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಮತ್ತು ನೌಕರರ ಸಂಘ, ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರು ತಮ್ಮ ಸಮಸ್ಯೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿಸುತ್ತಿಲ್ಲ. ಅವರು ಹೇಳಿದ್ದೇ ಕಾನೂನು ಎಂಬಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಯಿಂದ ಶೋಷಣೆ: ಗ್ರಾಮೀಣಾಭಿವೃದ್ಧಿ ಇಲಾಖೆ ನೌಕರರು ಮದೋನ್ನತಿಗಾಗಿ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಿದರೂ ಜಿಲ್ಲೆಯ ಅಧಿಕಾರಿ ಇದಾವುದಕ್ಕೂ ತಲೆಕೆಸಿಕೊಂಡಿಲ್ಲ. ಇಲಾಖೆ ನೌಕರರನ್ನು ರಕ್ಷಿಸಬೇಕಾದ ಅಧಿಕಾರಿಯಿಂದಲೇ ರಕ್ಷಣೆ ಇಲ್ಲವಾಗಿದೆ. ಅವರೇ ಶೋಷಣೆ ಮಾಡಲು ಆರಂಭಿಸಿದರು. ಮುಖ್ಯ ಕಾರ್ಯದರ್ಶಿ, ಸಚಿವರ ಗಮನಕ್ಕೆ ತಂದರೂ ಅದಕ್ಕೆ ಜಿಲ್ಲೆಯ ಅಧಿಕಾರಿ ಸೊಪ್ಪು ಹಾಕಲಿಲ್ಲ. ಕೊನೆಗೆ ಮುಖ್ಯಮಂತ್ರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಬೇಕಾಯಿತು ಎಂದರು.

ನೌಕರರ ಸಂಘವು 78 ಇಲಾಖೆಗಳ ಸುಮಾರು 6 ಲಕ್ಷ ನೌಕರರನ್ನು ಒಳಗೊಂಡಿದೆ. ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಸಂಘ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡಪ್ಪ ಪಾಟೀಲ, ಖಜಾಂಚಿ ಆರ್.ಶ್ರೀನಿವಾಸ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್‍ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಸಂಸ್ಥೆ ಮಾಜಿ ಅಧ್ಯಕ್ಷ ಟಿ.ವಿ.ಎನ್.ಮೂರ್ತಿ ಅವರು ವೃತ್ತಿಪರ ಶ್ರೇಷ್ಠತೆ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನರಸಿಂಹರಾಜು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ, ಮೈಸೂರು ವಿ.ವಿ ಕುಲಸಚಿವ ಆರ್.ಶಿವಪ್ಪ,
ದಾವಣಗೆರೆ ವಿ.ವಿಯ ಶರಣಪ್ಪ ವಿ.ಹಲಸಿ, ನಿವೃತ್ತ ಐಎಎಸ್ ಅಧಿಕಾರಿ ಶ್ರೀರಂಗಯ್ಯ, ಹನುಮನರಸಯ್ಯ, ಕೃಷ್ಣಪ್ಪ, ಡಿ.ಕೆ.ರಮೇಶ್, ಬೋರೇಗೌಡ, ರಾಘವೇಂದ್ರ ಕಾಕರ್ಲ, ಉತ್ತಮ್, ನಾಗಭೂಷಣ್, ಮಂಜುನಾಥ್, ರಾಜೇಶ್, ನಾಗರಾಜು,
ಗುರುಮೂರ್ತಿ, ಸುರೇಶ್, ಪದ್ಮನಾಭ್ ಉಪಸ್ಥಿತರಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು