ಪಾಲಿಕೆ ಹಿಡಿತವೂ...ನಾಯಕರ ಪ್ರತಿಷ್ಠೆಯೂ

7
ಸಮ್ಮಿಶ್ರ ಸರ್ಕಾರದ ಇಬ್ಬರು ಸಚಿವರಿಗೆ, ಮೊದಲ ಬಾರಿ ಶಾಸಕರಾದ ಜ್ಯೋತಿ ಗಣೇಶ್ ಅವರಿಗೆ ಬೆಂಬಲಿಗರ ಗೆಲ್ಲಿಸಿಕೊಳ್ಳುವ ಹೊಣೆ

ಪಾಲಿಕೆ ಹಿಡಿತವೂ...ನಾಯಕರ ಪ್ರತಿಷ್ಠೆಯೂ

Published:
Updated:
Deccan Herald

ತುಮಕೂರು: ತುಮಕೂರು ಮಹಾನಗರ ಪಾಲಿಕೆ ಜಿಲ್ಲೆಯ ಮುಕುಟಮಣಿ. 35 ಸದಸ್ಯ ಬಲದ ಈ ಮುಕುಟಮಣಿಯನ್ನು ತಮ್ಮ ಪಾಲಾಗಿಸಿಕೊಳ್ಳುವುದನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರತಿಷ್ಠೆಯನ್ನಾಗಿಸಿಕೊಂಡಿದ್ದಾರೆ.

ಪಕ್ಷ, ಸ್ಥಳೀಯ ರಾಜಕಾರಣ, ಅಭ್ಯರ್ಥಿಗಳ ಪಕ್ಷ ಮೀರಿದ ಜನಪ್ರಿಯತೆ, ಜನರೊಂದಿಗಿನ ಒಡನಾಟ, ಸ್ಪಂದನೆ, ಹೀಗೆ ಹಲವು ವಿಚಾರಗಳು ಇಲ್ಲಿ ಪ್ರಮುಖವಾಗಿ ಪಾತ್ರವಹಿಸುತ್ತವೆ. ಈ ‘ಸ್ಥಳೀಯ ರಾಜಕಾರಣ’ವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಮೂರು ಪಕ್ಷಗಳ ಅಗ್ರ ನಾಯಕರು ತೀವ್ರವಾದ ಕಸರತ್ತು ನಡೆಸಿದ್ದಾರೆ. ಆಯಾ ಪಕ್ಷಗಳ ಗೆಲುವಿನ ಕ್ರೆಡಿಟ್ ಸಲ್ಲುವುದು ಸಹ ಈ ನಾಯಕರಿಗೇ. ಪಾಲಿಕೆಯ ಮತ ಗಳಿಕೆ ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಮೇಲೂ ಪ್ರಭಾವ ಬೀರುವುದು ಸತ್ಯ.

ಈ ಹಿಂದಿನ ಪಾಲಿಕೆಯ ಚುನಾವಣೆಗಳನ್ನು ಬಿಜೆಪಿ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಎದುರಿಸಿತ್ತು. ಈಗ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಶಾಸಕ ಬಿ.ಜಿ.ಜ್ಯೋತಿ ಗಣೇಶ್ ಆ ಪಕ್ಷದ ನಾವಿಕರು. ಶಾಸಕರಾಗಿ ಆಯ್ಕೆಯಾದ ಮೂರೇ ತಿಂಗಳಿಗೆ ಎದುರಾಗಿರುವ ಈ ಚುನಾವಣೆ ಅವರ ಪಾಲಿಗೆ ಪ್ರಮುಖವಾದುದು. ಶಾಸಕ ವಿ.ಸೋಮಣ್ಣ ಅವರಿಗೆ ಆ ಪಕ್ಷ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಉಸ್ತುವಾರಿ ಸಹ ವಹಿಸಿದೆ. ಈ ಹಿಂದಿನ ಪಾಲಿಕೆಯ ಆಡಳಿತ ವೈಫಲ್ಯಗಳು, ಶಾಸಕರ ಬಲ, ಅಭಿವೃದ್ಧಿಯ ನಿರೀಕ್ಷೆಗಳು ಹಾಗೂ ಸ್ಮಾರ್ಟ್‌ ಸಿಟಿಯ ಅಭಿವೃದ್ಧಿಯ ನಕ್ಷೆಗಳು ಗೆಲುವಿಗೆ ಬಿಜೆಪಿ, ನೆಚ್ಚಿರುವ ಪ್ರಮುಖ ಅಂಶಗಳು. ಕಳೆದ ಬಾರಿ ಕೆಜೆಪಿ ಮತ್ತು ಬಿಜೆಪಿಯ ಒಡಕುಗಳು ಬಿಜೆಪಿಯ ಓಟಕ್ಕೆ ಅಡ್ಡಿಯಾಗಿತ್ತು.

ಇನ್ನು ಜೆಡಿಎಸ್‌ ನಾಯಕತ್ವವನ್ನು ಸಚಿವ ಎಸ್‌.ಆರ್.ಶ್ರೀನಿವಾಸ್ ವಹಿಸಿದ್ದಾರೆ. ಈ ಹಿಂದಿನಿಂದಲೂ ಶ್ರೀನಿವಾಸ್ ಅವರಿಗೆ ಪಾಲಿಕೆಯ ಮೇಲೆ ತಮ್ಮದೇ ಆದ ಹಿಡಿತ ಮತ್ತು ಪ್ರಭಾವ ಇದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತರಾದ ಗೋವಿಂದರಾಜು ಸಹ ಬೆಂಬಲಿಗರನ್ನು ಕಾರ್ಪೊರೇಟರ್‌ಗಳನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ.

ಕಾಂಗ್ರೆಸ್ ಪಾಲಿಗೆ ಪಾಲಿಕೆಯ ಚುಕ್ಕಾಣಿ ಹಿಡಿಯುವುದು ಅತ್ಯಂತ ಪ್ರತಿಷ್ಠೆ ಆಗಿದೆ. ಉಪಮುಖ್ಯಮಂತ್ರಿ ಪರಮೇಶ್ವರ ಸ್ಥಳೀಯ ರಾಜಕಾರಣವನ್ನು ತಮ್ಮ ಬೆಂಬಲಿಗರ ಮೂಲಕ ನಿಭಾಯಿಸಿದರೂ ಕಾಂಗ್ರೆಸ್ ‘ಸೋಲು–ಗೆಲುವಿನೊಂದಿಗೆ ಅವರ ಹೆಸರು ತಳುಕು ಹಾಕಿಕೊಳ್ಳುತ್ತದೆ. ತವರು ಜಿಲ್ಲೆಯ ಅಧಿಕಾರ ಪಡೆಯುವುದು ಅವರ ಇಮೇಜಿಗೆ ಮತ್ತೊಂದಿಷ್ಟು ಬಲ ತರುವುದು ದಿಟ. ಮಾಜಿ ಶಾಸಕ ರಫೀಕ್ ಅಹಮ್ಮದ್ ಅವರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿವಹಿಸಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಬಾರಿ ಸಮಾನಾಂತರವಾಗಿಯೇ ಸ್ಥಾನಗಳನ್ನು ಗೆದ್ದಿದ್ದವು. 

‘ವಾರ್ಡ್‌ವಾರು ಮೀಸಲಾತಿಯ ಕಾರಣಕ್ಕೆ ಕಾಂಗ್ರೆಸ್‌ನ 11 ಹಾಲಿ ಸದಸ್ಯರು ಮತ್ತೆ ಸ್ಪರ್ಧೆ ಮಾಡಬಹುದು. ವಾರ್ಡ್‌ವಾರು ಮೀಸಲಾತಿ ನಮಗೆ ಅನುಕೂಲವಾಗಲಿದೆ. ಯಾವುದೇ ಸರ್ಕಾರ ಇದ್ದರೂ ಮೀಸಲಾತಿಯನ್ನು ತಮ್ಮ ಅನುಕೂಲಕ್ಕೆ ಮಾಡಿಕೊಳ್ಳುತ್ತವೆ. ಪಕ್ಷದಿಂದ ಎಲ್ಲ ವರ್ಗದವರಿಗೂ ಟಿಕೆಟ್ ನೀಡಿದ್ದೇವೆ’ ಎನ್ನುವರು ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರೊಬ್ಬರು.

‘ಜೆಡಿಎಸ್‌ನ ಆರು ಸದಸ್ಯರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು’ ಎನ್ನುವ ಅವರ ಮಾತುಗಳಲ್ಲಿ ಅತಂತ್ರ ಸ್ಥಿತಿ ಎದುರಾದರೆ ಮತ್ತೆ ಕಾಂಗ್ರೆಸ್–ಜೆಡಿಎಸ್ ಅಧಿಕಾರ ಹಂಚಿಕೊಳ್ಳುತ್ತವೆ ಎನ್ನುವುದು ಇಣುಕುತ್ತದೆ.

ಪಕ್ಷಕ್ಕೆ ಅನುಕೂಲವಾಗುವಂತೆ ವಾರ್ಡ್‌ವಾರು ಮೀಸಲಾತಿಯನ್ನು ಕಾಂಗ್ರೆಸ್ ರೂಪಿಸಿದೆ ಎನ್ನುವ ಮಾತುಗಳು ಪ್ರಬಲವಾಗಿಯೇ ಕೇಳುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ವಾರ್ಡ್‌ವಾರು ಪ್ರಾತಿನಿಧ್ಯದ ಪಟ್ಟಿ ಹೊರಬಿದ್ದಾಗ ಜ್ಯೋತಿ ಗಣೇಶ್ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ ವರ್ಗದ ಮತದಾರರ ಒಲವು ಗಳಿಸಿಕೊಂಡಿತು. ಅದು ಪಾಲಿಕೆಯಲ್ಲಿಯೂ ಪುನರಾವರ್ತನೆ ಆಗುತ್ತದೆ ಎನ್ನುವ ವಿಶ್ವಾಸ ಆ ಪಕ್ಷದಲ್ಲಿ ಇದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !