ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಚುರುಕುಗೊಂಡ ಬಿತ್ತನೆ ಕಾರ್ಯ

ಕೊರಟಗೆರೆ: ರೈತರಲ್ಲಿ ಹರ್ಷ ತಂದ ಆರಿದ್ರಾ ವರ್ಷಧಾರೆ
Last Updated 7 ಜುಲೈ 2020, 5:27 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ಬಿದ್ದ ಮಳೆಯಿಂದಾಗಿ ಕೃಷಿ ಚಟುವಟಿಕೆ ಚಿರುಕುಗೊಂಡಿದೆ. ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.

ಜೂನ್ ಅಂತ್ಯಕ್ಕೆ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಮುಗಿಯಬೇಕಿತ್ತು. ಆದರೆ ಮುಂಗಾರು ತಡವಾಗಿದ್ದರಿಂದ ಕೆಲವೆಡೆ ಈಗ ಬಿತ್ತನೆ ಪ್ರಾರಂಭವಾಗಿದೆ. ಕೋಳಾಲ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿರುವುದರಿಂದ ಆ ಭಾಗದಲ್ಲಿ ಬಿತ್ತನೆ ಭಾಗಶಃ ಮುಗಿದಿದೆ.

ತಾಲ್ಲೂಕಿನಲ್ಲಿ ಜೂನ್ ಅಂತ್ಯಕ್ಕೆ 230 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, ಈವರೆಗೆ 217 ಮಿ.ಮೀ ಮಳೆಯಾಗಿದ್ದು, ಶೇ 6ರಷ್ಟು ಮಳೆ ಕೊರತೆ ಇದೆ. ಕೋಳಾಲ ಹೋಬಳಿಯಲ್ಲಿ 38ರಷ್ಟು, ಚನ್ನರಾಯನದುರ್ಗಾ ಶೇ 19ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕಸಬಾ, ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ.

ಕೋಳಾಲ ಹೋಬಳಿಯಲ್ಲಿ ಶೇ 35ರಿಂದ 40ರಷ್ಟು ಬಿತ್ತನೆಯಾಗಿದೆ. ತೊಗರಿ, ಮುಸುಕಿನ ಜೋಳ, ರಾಗಿ, ಔಡಲ ಎಣ್ಣೆ ಬೀಜ ಬಿತ್ತನೆ ಮಾಡಲಾಗಿದೆ.

ತಾಲ್ಲೂಕಿನಲ್ಲಿ ಮುಸಕಿನಜೋಳ ಅತಿ ಹೆಚ್ಚು ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಮುಸುಕಿನ ಜೋಳ, ತೊಗರಿಕಾಳು ಬಿತ್ತನೆ ಬೀಜದ ಕೊರತೆ ಇದೆ. ತಾಲ್ಲೂಕಿನ 5 ರೈತ ಸಂಪರ್ಕ ಕೇಂದ್ರಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಈಗಾಗಲೇ 632 ಕ್ವಿಂಟಲ್‌ ಶೇಂಗಾ, 248 ಕ್ವಿಂಟಲ್‌ ಮುಸುಕಿನ ಜೋಳ, 121 ಕ್ವಿಂಟಲ್‌ ರಾಗಿ, 23 ಕ್ವಿಂಟಲ್‌ ತೊಗರಿ, 8 ಕ್ವಿಂಟಲ್‌ ಭತ್ತ ಸರಬರಾಜು ಮಾಡಲಾಗಿದೆ. ಈವರೆಗೆ ಸುಮಾರು 700ರಿಂದ 750 ಕ್ವಿಂಟಲ್‌ ಬಿತ್ತನೆ ಬೀಜ ಮಾರಾಟವಾಗಿದೆ.

ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಮಳೆ ಕೊರತೆ ಕಂಡು ಬಂದರೆ ಪರ್ಯಾಯ ಬೆಳೆಯಾಗಿ ಅಲಸಂದೆ, ರಾಗಿ, ಆರ್ಕಾ, ನವಣೆಯಂತಹ ಸಿರಿ ಧಾನ್ಯಗಳ ಬಿತ್ತನೆಗೆ ಯೋಜನೆ ರೂಪಿಸಿಕೊಳ್ಳಬಹುದಾಗಿದೆ. ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವುದು ಉತ್ತಮ. ಕಳೆದ ವರ್ಷ ತಾಲ್ಲೂಕಿನಲ್ಲಿ ₹ 12 ಕೋಟಿಯಷ್ಟು ಬೆಳೆ ವಿಮೆ ಹಣ ರೈತರಿಗೆ ಬಂದಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಮುಖ್ಯ ಬೆಳೆಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ಉಳಿದ ಬೆಳೆಗಳಿಗೆ ಹೋಬಳಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗಿದೆ. ರೈತರು ವಿಮಾ ಮೊತ್ತ, ಕಂತಿನ ವಿವರಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ಅಥವಾ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕಟ್ಟಬಹುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT