ಬುಧವಾರ, ನವೆಂಬರ್ 25, 2020
19 °C
ಹೂಳು ತುಂಬಿದ ಚರಂಡಿಯಲ್ಲಿ ಸೊಳ್ಳೆಗಳ ಸಂತತಿ

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಮಧುಗಿರಿ

ಟಿ.ಪ್ರಸನ್ನಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮಧುಗಿರಿ: ಪಟ್ಟಣದ ಬಹುತೇಕ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯದೇ ಇರುವುದರಿಂದ ವಾಸನೆ ಹಾಗೂ ಸೊಳ್ಳೆಗಳ ಹಾವಳಿಯಿಂದ ಜನರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಪಟ್ಟಣದ ಡಿವೈಎಸ್‌ಪಿ ಕಚೇರಿ, ಡಿಡಿಪಿಐ ಕಚೇರಿ, ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗ, ಪುರಸಭೆ ಕಚೇರಿ ಆವರಣ, ಕೆ.ಆರ್.ಬಡಾವಣೆಯ 16, 17, 18 ಮತ್ತು 19ನೇ ವಾರ್ಡ್‌ಗಳಲ್ಲಿ ದೊಡ್ಡ ಚರಂಡಿಗಳು ಹಾದು ಹೋಗಿವೆ. ಈ ಭಾಗದ ಚರಂಡಿಗಳಲ್ಲಿ ಹೂಳು ತುಂಬಿ, ಗಬ್ಬು ನಾರುತ್ತಿವೆ. ಚರಂಡಿ ಸ್ವಚ್ಛ ಮಾಡಿ ಹಲವು ವರ್ಷಗಳು ಕಳೆದಿವೆ. ಸ್ವಚ್ಛ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಜನರ ದೂರು.

‘ಕಿಟಕಿ ಹಾಗೂ ಬಾಗಿಲು ತೆರೆದರೆ ದುರ್ವಾಸನೆ, ಸೊಳ್ಳೆಗಳ ಹಾವಳಿ ಅತಿಯಾಗಿದ್ದು, ಮಲೇರಿಯಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಈಗಾಗಲೇ ಕೊರೊನಾ ಸೋಂಕಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸೊಳ್ಳೆಗಳ ಕಾಟದಿಂದ ಮಲೇರಿಯಾ ಮತ್ತು ಡೆಂಗಿ ಜ್ವರದ ಪ್ರಕರಣಗಳು ಹೆಚ್ಚಾದರೆ, ಜನರು ಬದುಕುವುದೇ ಕಷ್ಟವಾಗುತ್ತದೆ’ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸರ್ಕಾರಿ ಸ್ಥಳ, ಪಾದಚಾರಿ ರಸ್ತೆಗಳಲ್ಲಿ ಹಾಗೂ ಖಾಸಗಿ ನಿವೇಶನಗಳಲ್ಲಿ ಪಾರ್ಥೇನಿಯಂ ಹಾಗೂ ಇತರೆ ಗಿಡ-ಗಂಟೆಗಳು ಎತ್ತರಕ್ಕೆ ಬೆಳೆದು ಹಂದಿ, ಹಾವು ಮತ್ತು ಕ್ರಿಮಿಕೀಟಗಳ ಆವಾಸ ಕೇಂದ್ರಗಳಾಗಿವೆ.

‘ತಾಲ್ಲೂಕು ಕಚೇರಿ, ಪುರಸಭೆ ಆವರಣ, ಡಿಡಿಪಿಐ ಕಚೇರಿ, ಡಿವೈಎಸ್‌ಪಿ ಕಚೇರಿ, ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಶಿರಾ ಗೇಟ್, ಪ್ರವಾಸಿ ಮಂದಿರ, ಕೆ.ಆರ್.ಬಡಾವಣೆ, ರಾಘವೇಂದ್ರ ಕಾಲೊನಿ, ಕರಡಿಪುರ, ಲಿಂಗೇನಹಳ್ಳಿ ಸೇರಿದಂತೆ ಬಹುತೇಕ ಭಾಗಗಳಲ್ಲಿ ಸೊಳ್ಳೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖಾಲಿ ನಿವೇಶನಗಳಲ್ಲಿ ಅನುಪಯುಕ್ತ ಗಿಡಗಳು ಬೆಳೆದಿರುವುದರಿಂದ ಸೊಳ್ಳೆಗಳ ಉತ್ಪಾದನಾ ತಾಣಗಳಾಗಿವೆ. ಅನುಪಯುಕ್ತ ಗಿಡಗಳನ್ನು ತೆರವುಗೊಳಿಸುವಂತೆ‌ ನಿವೇಶನ ಮಾಲೀಕರಿಗೆ ಪುರಸಭೆ ಅಧಿಕಾರಿಗಳು ನೋಟಿಸ್ ನೀಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಪುರಸಭೆ ವ್ಯಾಪ್ತಿಯಲ್ಲಿರುವ ದೊಡ್ಡ ಚರಂಡಿಗಳ ಸ್ವಚ್ಛತೆಗೆ ಪುರಸಭೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡಬೇಕು. ಸಾರ್ವಜನಿಕ ಸ್ಥಳ ಹಾಗೂ ಪಾದಚಾರಿ ರಸ್ತೆಗಳಲ್ಲಿ ಬೆಳೆದಿರುವ ಅನುಪಯುಕ್ತ ಗಿಡಗಳನ್ನು ತೆರವುಗೊಳಿಸಬೇಕು’ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.