ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮಣ್ಣಗೆ ಬಯಸದೆ ಬಂದ ಭಾಗ್ಯ

ಸೋಮಣ್ಣಗೆ ಒಲಿದ ಕೇಂದ್ರ ಸಚಿವ ಸ್ಥಾನ, ತುಮಕೂರು ಲೋಕಸಭಾ ಕ್ಷೇತ್ರದ ಮೊದಲ ಮಂತ್ರಿ
Published 10 ಜೂನ್ 2024, 4:19 IST
Last Updated 10 ಜೂನ್ 2024, 4:19 IST
ಅಕ್ಷರ ಗಾತ್ರ

ತುಮಕೂರು: ಸಂಸದ ವಿ.ಸೋಮಣ್ಣ ಅವರ ಚುನಾವಣೆಯ ಗೆಲುವಿನ ಖುಷಿಯನ್ನು ಬಿಜೆಪಿ ಹೈಕಮಾಂಡ್‌ ಇಮ್ಮಡಿಗೊಳಿಸಿದ್ದು, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮೊದಲ ಬಾರಿಗೆ ಕೇಂದ್ರ ಸಚಿವ ಸ್ಥಾನ ಒಲಿದಿದೆ.

ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಗೆಲುವು ಸಾಧಿಸಿದ ಸೋಮಣ್ಣ ಮಂತ್ರಿ ಸ್ಥಾನ ಬಯಸಿರಲಿಲ್ಲ. ಹೈಕಮಾಂಡ್‌ ನಾಯಕರೊಂದಿಗಿನ ಉತ್ತಮ ಒಡನಾಟ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿದೆ.

ಸೋಮಣ್ಣ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ಕೇಂದ್ರ ಸರ್ಕಾರದ ಸಚಿವ ಸಂಪುಟದ ವರೆಗೆ ಹೆಜ್ಜೆ ಹಾಕಿದ್ದಾರೆ. ಬಿಬಿಎಂಪಿ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿ, ಸಂಸದರಾದ ಮೊದಲ ಅವಧಿಯಲ್ಲಿಯೇ ಕೇಂದ್ರದ ಮಂತ್ರಿಯಾಗಿದ್ದಾರೆ.

ಹೊರ ಜಿಲ್ಲೆಯಿಂದ ಬಂದು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದ ಸೋಮಣ್ಣ, ಇದೀಗ ಕೇಂದ್ರದ ಸಚಿವ ಸಂಪುಟ ಸೇರಿ ಹೊಸ ದಾಖಲೆ ಬರೆದಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವರ ಪೈಕಿ ಸಚಿವರಾದ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೋಮಣ್ಣ 2023ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಮತ್ತು ಮೈಸೂರಿನ ವರುಣಾ ಸೇರಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದಾದ ನಂತರ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನ, ರಾಜ್ಯಸಭೆಗೆ ಆಯ್ಕೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಹೈಕಮಾಂಡ್‌ ನಾಯಕರು ಇದಕ್ಕೆ ಸೊಪ್ಪು ಹಾಕಲಿಲ್ಲ. ‘ಎರಡು ಕಡೆ ನಿಲ್ಲಿಸಿ ನನ್ನ ಜೀವ ತೆಗೆದರು’ ಎಂದು ಸೋಮಣ್ಣ ಪ್ರಧಾನಿ ಮೋದಿ, ಅಮಿತ್‌ ಶಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರಾದ ಬಿ.ಎಸ್‌.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರನ್ನೂ ಟೀಕಿಸಿದ್ದರು. ತುಮಕೂರಿನಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಕೇಂದ್ರದ ನಾಯಕರ ದುಂಬಾಲು ಬಿದ್ದಿದ್ದರು.

ಸೋಮಣ್ಣಗೆ ಜಿಲ್ಲೆಯ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಸೋಮಣ್ಣ ಸ್ಪರ್ಧಿಸಲು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸುತಾರಾಂ ಒಪ್ಪಿರಲಿಲ್ಲ. ‘ಹೊರಗಿನವರಿಗೆ ಟಿಕೆಟ್‌ ಕೊಡುವುದು ಬೇಡ’ ಎಂದು ಹೇಳಿದ್ದರು. ಇದೆಲ್ಲದರ ಮಧ್ಯೆ ಟಿಕೆಟ್‌ ಗಿಟ್ಟಿಸಿಕೊಂಡ ಸೋಮಣ್ಣ 1.75 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಸೋಮಣ್ಣ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ದೊಡ್ಡಮರಳವಾಡಿಯವರು. ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದವರನ್ನು ರಾಜಕೀಯ ಕ್ಷೇತ್ರ ಆಕರ್ಷಿಸಿತು. ನಿರಂತರ ಪ್ರಯತ್ನ ಅವರ ಕೈ ಹಿಡಿಯಿತು. ಮೊದಲಿಗೆ 1983ರಲ್ಲಿ ಬಿಬಿಎಂಪಿ ಸದಸ್ಯರಾಗಿ ಚುನಾಯಿತರಾದರು. 1994ರಲ್ಲಿ ಬೆಂಗಳೂರಿನ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರದಿಂದ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆಯ ಮೆಟ್ಟಿಲು ಹತ್ತಿದರು. ನಂತರ 1999ರಲ್ಲಿ ಪಕ್ಷೇತರರಾಗಿ, 2004ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿ ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿದರು.

2008ರಲ್ಲಿ ಕ್ಷೇತ್ರ ವಿಂಗಡಣೆಯ ಬಳಿಕ ಗೋವಿಂದರಾಜ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು. ನಂತರ ವಿಧಾನ ಪರಿಷತ್‌ ಸದಸ್ಯರಾಗಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದರು. 2013ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಿಂದ ಮತ್ತೆ ಸೋಲನ್ನನುಭವಿಸಿದರು. 2018ರ ಚುನಾವಣೆಯಲ್ಲಿ ಗೆದ್ದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಯಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT