ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಇಬ್ಬರು ಯುವಕರಿಗೆ ₹66 ಲಕ್ಷ ವಂಚನೆ

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಗಳಿಸುವ ಆಮಿಷ
Published 2 ಮೇ 2024, 0:19 IST
Last Updated 2 ಮೇ 2024, 0:19 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಇಬ್ಬರು ಯುವಕರು ಸೈಬರ್‌ ವಂಚಕರು ಬೀಸಿದ ಬಲೆಗೆ ಬಿದ್ದು ಬರೋಬ್ಬರಿ ₹66.30 ಲಕ್ಷ ಕಳೆದುಕೊಂಡಿದ್ದಾರೆ.

ನಗರದ ಸಪ್ತಗಿರಿ ಬಡಾವಣೆಯ ನಿವಾಸಿ ಎಲ್‌.ಶ್ರೀಧರ್‌ ಎಂಬುವರು ‘ಷೇರು ಮಾರುಕಟ್ಟೆಯಲ್ಲಿ ₹10 ಲಕ್ಷ ಹೂಡಿಕೆ ಮಾಡಿದರೆ ದಿನಕ್ಕೆ ಶೇ20 ರಷ್ಟು ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ₹35 ಲಕ್ಷ ಮೋಸ ಹೋಗಿದ್ದಾರೆ.

ಸೈಬರ್‌ ಆರೋಪಿಗಳು ವಾಟ್ಸ್‌ಆ್ಯಪ್‌ ಮುಖಾಂತರ ಪರಿಚಯಿಸಿಕೊಂಡು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಧರ್‌ ಈ ಬಗ್ಗೆ ಆಸಕ್ತಿ ತೋರಿದ ನಂತರ ‘ವಿಐಪಿ ಗ್ರೂಪ್‌ 100’ ಎಂಬ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅವರನ್ನು ಸೇರಿಸಿದ್ದಾರೆ.

ಏ.18ರಂದು ಮೊದಲ ಬಾರಿಗೆ ಸೈಬರ್‌ ಕಳ್ಳರು ತಿಳಿಸಿದ ಖಾತೆಗೆ ಶ್ರೀಧರ್‌ ₹5 ಲಕ್ಷ ವರ್ಗಾವಣೆ ಮಾಡಿದ್ದಾರೆ. 19ರಂದು ₹1 ಲಕ್ಷ, 20 ರಂದು ₹4 ಲಕ್ಷ, 24ರಂದು ₹10 ಲಕ್ಷ ಹೀಗೆ ಹಂತ ಹಂತವಾಗಿ ಒಟ್ಟು ₹35 ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ಹಾಕಿದ್ದಾರೆ. ಏ.30ರಂದು ಸೈಬರ್‌ ಆರೋಪಿಗಳು ಮೆಸೇಜ್‌ ಮಾಡಿ, ‘ನಿಮಗೆ ₹49.16 ಲಕ್ಷ ಲಾಭ ಬಂದಿದ್ದು, ಇದನ್ನು ಪಡೆಯಲು ₹54.53 ಲಕ್ಷ ವರ್ಗಾವಣೆ ಮಾಡುವಂತೆ ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಶ್ರೀಧರ್‌ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

₹31 ಲಕ್ಷ ಮೋಸ

ತಿಪಟೂರು ತಾಲ್ಲೂಕಿನ ಬೈರನಾಯಕನಹಳ್ಳಿಯ ನಿವಾಸಿ ಬಿ.ಆರ್‌.ವಿನಯ್‌ ಎಂಬುವರಿಗೆ ‘ಟಾಸ್ಕ್‌ಗಳಲ್ಲಿ ಬಂಡವಾಳ ಹೂಡಿದರೆ ಅಧಿಕ ಲಾಭ ಗಳಿಸಬಹುದು’ ಎಂಬ ಆಸೆ ತೋರಿಸಿ ₹31 ಲಕ್ಷ ವಂಚಿಸಲಾಗಿದೆ. ಸೈಬರ್‌ ಆರೋಪಿಗಳು ಏ.14ರಂದು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಮಾಡಿ ‘ಎಚ್‌ಸಿಎಲ್‌ ಸಾಫ್ಟ್‌ವೇರ್‌ ಟಾಸ್ಕ್‌ ಗ್ರೂಪ್‌’ಗೆ ಸೇರಿಕೊಂಡು ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಟಾಸ್ಕ್‌ಗಳ ಪಟ್ಟಿ ನೀಡಿದ್ದಾರೆ. ಇದನ್ನು ನಂಬಿದ ವಿನಯ್‌ ಮೊದಲಿಗೆ ಒಂದು ಯುಪಿಐ ಐ.ಡಿಗೆ ₹2 ಸಾವಿರ ವರ್ಗಾವಣೆ ಮಾಡಿದ್ದಾರೆ. ನಂತರ ಅವರ ಬ್ಯಾಂಕ್‌ ಖಾತೆಗೆ ₹2800 ವಾಪಸ್‌ ಹಾಕಿದ್ದಾರೆ. ಮತ್ತೆ ಹಣ ಹೂಡಿಕೆ ಮಾಡಿ ಹೆಚ್ಚು ಹೆಚ್ಚು ಲಾಭ ಪಡೆಯುವಂತೆ ಪ್ರೇರೇಪಿಸಿದ್ದಾರೆ. ಏ.11ರಿಂದ 17ರ ವರೆಗೆ ಹಂತ ಹಂತವಾಗಿ ₹31.44 ಲಕ್ಷ ಹಣವನ್ನು ವಿವಿಧ ಯುಪಿಐ ಐ.ಡಿ ಮತ್ತು ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವರ ಖಾತೆಗೆ ₹13300 ಮಾತ್ರ ವಾಪಸ್‌ ಹಾಕಿದ್ದಾರೆ. ‘ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂದು ನಂಬಿಸಿ ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ವಿನಯ್‌ ಠಾಣೆಯ ಮೆಟ್ಟಿಲು ಹತ್ತಿದ್ದು ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT