ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | 2 ವರ್ಷದಲ್ಲಿ ನಾಲ್ಕು ಮದುವೆ: ವಂಚಕರ ಗ್ಯಾಂಗ್‌ ಬಂಧನ

ಅವಿವಾಹಿತ ಯುವಕರೊಂದಿಗೆ ಮದುವೆ ನಾಟಕ: ಹಣ, ಒಡವೆಯೊಂದಿಗೆ ಪರಾರಿ
Published 13 ಆಗಸ್ಟ್ 2024, 16:16 IST
Last Updated 13 ಆಗಸ್ಟ್ 2024, 16:16 IST
ಅಕ್ಷರ ಗಾತ್ರ

ತುಮಕೂರು: ಮದುವೆಯ ನಾಟಕವಾಡಿ ವಂಚಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು, ಎರಡು ವರ್ಷದಲ್ಲಿ ನಾಲ್ಕು ಮದುವೆಯಾಗಿದ್ದ ವಂಚಕಿ ಹಾಗೂ ಆಕೆಯ ತಂಡವನ್ನು ಗುಬ್ಬಿ ಪೊಲೀಸರು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ.

ನಾಲ್ಕು ಮದುವೆಯಾಗಿ ವಂಚಿಸಿದ್ದ ಕೋಮಲಾ (38) ಹಾಗೂ ಆಕೆಯ ತಂಡದ ಲಕ್ಷ್ಮಿ (50), ಸಿದ್ಧಪ್ಪ (50), ಲಕ್ಷ್ಮಿಬಾಯಿ (48) ಬಂಧಿತರು. ಮತ್ತೊಬ್ಬ ಆರೋಪಿ ವಿಜಯ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದ ಯುವಕನನ್ನು ಮದುವೆಯಾಗಿ ವಂಚಿಸಿದ್ದ ಕೋಮಲಾ ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಇದೇ ರೀತಿ ಮದುವೆಯಾಗಿ ವಂಚಿಸಿರುವುದು ತನಿಖೆಯ ವೇಳೆ ಗೊತ್ತಾಗಿದೆ.

ಬೆಳಗಾವಿ, ಹುಬ್ಬಳ್ಳಿ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆ ವಾಸಿಸುತ್ತಿದ್ದ ತಂಡ ಪದೇಪದೇ ವಾಸಸ್ಥಳ ಬದಲಿಸುತ್ತಿತ್ತು. ಮಧ್ಯವರ್ತಿ ಮೂಲಕ ಮದುವೆ ವಯಸ್ಸು ಮೀರಿದ ಯುವಕರನ್ನು ಪತ್ತೆ ಹಚ್ಚಿ ವಿವಾಹಕ್ಕೆ ಸಂಚು ರೂಪಿಸುತ್ತಿದ್ದರು.

ಗಂಡಿನ ಮನೆಗೆ ಬಂದು ರಾತ್ರೋರಾತ್ರಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿ, ‘ನಮ್ಮ ಕಡೆ ಹೀಗೆ ನಡೆಯುತ್ತದೆ’ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದರು.

ಕೋಮಲಾ ಮದುವೆ ಹುಡುಗಿ ಎಂದು ಪರಿಚಯಿಸುತ್ತಿದ್ದ ಈ ತಂಡವು ಸಿದ್ಧಪ್ಪ ಮತ್ತು ಲಕ್ಷ್ಮಿಬಾಯಿಯನ್ನು ವಧುವಿನ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ವಿಜಯ್‌ ಎಂಬಾತನನ್ನು ಅಣ್ಣ ಎಂದು ಪರಿಚಯ ಮಾಡಿಸುತ್ತಿತ್ತು. ಲಕ್ಷ್ಮಿ ಎಂಬಾಕೆ ಮದುವೆ ಬ್ರೋಕರ್‌ ಪಾತ್ರ ನಿರ್ವಹಿಸುತ್ತಿದ್ದಳು. ಈಕೆಯೇ ಮದುವೆ ನಾಟಕದ ಪ್ರಮುಖ ಸೂತ್ರಧಾರಿಣಿ.

ಮದುವೆಗೂ ಮುನ್ನವೇ ₹2 ಲಕ್ಷದಿಂದ ₹3 ಲಕ್ಷ ಪಡೆಯುತ್ತಿದ್ದ ತಂಡ ಮದುವೆ ನಂತರ ವರನ ಮನೆಯಿಂದ ಹಣ, ಒಡವೆ ತೆಗೆದುಕೊಂಡು ಜಾಗ ಖಾಲಿ ಮಾಡುತ್ತಿದ್ದರು.

‘ಎರಡು ವರ್ಷದಲ್ಲಿ ನಾಲ್ಕು ಮದುವೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರ, ಬೆಳಗಾವಿಯ ವಿವಿಧ ಕಡೆ ಯುವಕರನ್ನು ವಂಚಿಸಿದ್ದಾರೆ. ಆದರೆ, ಎಲ್ಲಿಯೂ ಇವರ ವಿರುದ್ಧ ಪ್ರಕರಣ ದಾಖಲಾಗಿಲ್ಲ’ ಎಂದು ಗುಬ್ಬಿ ಪೊಲೀಸರು ತಿಳಿಸಿದ್ದಾರೆ.

ಕೋಮಲಾ
ಕೋಮಲಾ
ಸಿದ್ಧಪ್ಪ
ಸಿದ್ಧಪ್ಪ
ಲಕ್ಷ್ಮಿಬಾಯಿ
ಲಕ್ಷ್ಮಿಬಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT