ಮಂಗಳವಾರ, ನವೆಂಬರ್ 19, 2019
29 °C

ಪಾವಗಡ ನ್ಯಾಯಾಲಯಕ್ಕೆ ಗದ್ದರ್ ಹಾಜರು

Published:
Updated:

ಪಾವಗಡ (ತುಮಕೂರು ಜಿಲ್ಲೆ): ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡದ 11ನೇ ಆರೋಪಿ ತೆಲುಗು ಗಾಯಕ ಗದ್ದರ್ ಅವರು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಕ್ಕೆ ಬುಧವಾರ ಮಧ್ಯಾಹ್ನ ಹಾಜರಾದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚಿಗೆ ಹೈಕೋರ್ಟ್ ಗದ್ದರ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಪ್ರಕರಣವು ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ, ನಿಯಮದಂತೆ ಗದ್ದರ್ ಜಾಮೀನು ಪ್ರತಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದಾರೆ.

2005 ಫೆಬ್ರುವರಿಯಲ್ಲಿ ಕೊಪ್ಪ ತಾಲ್ಲೂಕು ಮೆಣಸಿನಹಾಡ್ಯದಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸರ ಎನ್‌ಕೌಂಟರ್‌ಗೆ ಬಲಿ ಆಗಿದ್ದರು. ಅದಕ್ಕೆ ಪ್ರತೀಕಾರವಾಗಿ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಪೊಲೀಸ್ ಕ್ಯಾಂಪ್ ಮೇಲೆ ನಕ್ಸಲರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 7 ಪೊಲೀಸರು ಒಬ್ಬ ನಾಗರಿಕರು ಮೃತಪಟ್ಟಿದ್ದರು.

ಇದನ್ನೂ ಓದಿ: ನಕ್ಸಲರ ದಾಳಿ ಪ್ರಕರಣ:219 ಆರೋಪಿಗಳ ಗುರುತೇ ಸಿಕ್ಕಿಲ್ಲ!


ಪಾವಗಡ ನ್ಯಾಯಾಲಯ ಆವರಣದಲ್ಲಿ ಗದ್ದರ್ (ಪ್ರಜಾವಾಣಿ ಚಿತ್ರ: ಕೆ.ಆರ್.ಜಯಸಿಂಹ)

ಪ್ರಕರಣದಲ್ಲಿ ಗದ್ದರ್ 11ನೇ ಮತ್ತು ತೆಲುಗು ಕವಿ ವರವರರಾವ್ 12ನೇ ಆರೋಪಿ ಆಗಿದ್ದರು. ಎರಡು ತಿಂಗಳ ಹಿಂದೆ ವರವರರಾವ್ ಪಾವಗಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈಗ ಗದ್ದರ್ ಹಾಜರಾಗಿದ್ದಾರೆ. 2018ರಲ್ಲಿ ಸಲ್ಲಿಸಲಾದ ಹೊಸ ಆರೋಪಪಟ್ಟಿಯ ಪ್ರಕಾರ ಗದ್ದರ್ 4ನೇ ಆರೋಪಿಯಾಗಿದ್ದಾರೆ.

ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ವರವರರಾವ್‌ ಅವರನ್ನು ತಿರುಮಣಿ ಪೊಲೀಸರು ಬಾಡಿ ವಾರಂಟ್ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರ. ಆದರೆ ಗದ್ದರ್ ತಾವೇ ಹಾಜರಾಗಿದ್ದಾರೆ. ಹೈಕೋರ್ಟ್‌ನಲ್ಲಿ ಮಂಜೂರಾದ ನಿರೀಕ್ಷಣಾ ಜಾಮೀನನ್ನು ವಿಚಾರಣ ನ್ಯಾಯಾಲಯಕ್ಕೆ ಸಲ್ಲಿಸಿ, ಮುಂದಿನ ಪ್ರಕ್ರಿಯೆಗಳನ್ನು ನಡೆಸಬೇಕಾಗಿದೆ.

ಇದನ್ನೂ ಓದಿ: ನೆತ್ತರು ಹರಿದ ನೆಲದಲ್ಲಿ ಚಿಗುರಲಿಲ್ಲ ಹಸಿರು!

ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಮಂಗಳವಾರ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮತ್ತು ಮಧುಗಿರಿ ಡಿವೈಎಸ್‌ಪಿ ಕಚೇರಿಯಲ್ಲಿ ಗದ್ದರ್ ಅವರ ವಿಚಾರಣೆ ನಡೆದಿತ್ತು.

ಪಟ್ಟಣದ ಕೆಲ ಸಂಘಟನೆಗಳ ಮುಖಂಡರು ಗದ್ದರ್ ಅವರನ್ನು ಭೇಟಿಯಾಗಿ ಮಾತನಾಡಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳೇ ವಕೀಲರ ಭವನದಲ್ಲಿ ಊಟ ತಂದುಕೊಟ್ಟರು. ಪಟ್ಟಣದ ಪೊಲೀಸರು ನ್ಯಾಯಾಲಯ ಸಂಕೀರ್ಣಕ್ಕೆ ಬಂದೋಬಸ್ತ್ ಒದಗಿಸಿದ್ದಾರೆ. ತೆಲಂಗಾಣ ಸರ್ಕಾರ ಗದ್ದರ್ ಅವರ ರಕ್ಷಣೆಗೆ ಇಬ್ಬರು ಗನ್‌ಮನ್‌ಗಳನ್ನು ನಿಯೋಜಿಸಿದೆ.

ಪ್ರತಿಕ್ರಿಯಿಸಿ (+)