ಶನಿವಾರ, ಮಾರ್ಚ್ 6, 2021
18 °C
ಮುಳ್ಳು ಗಿಡ ಬೆಳೆದಿದ್ದ, ಕಟ್ಟಡ ತ್ಯಾಜ್ಯ ಸುರಿದು ಒತ್ತುವರಿಯಾಗುತ್ತಿದ್ದ ಸ್ಥಳದಲ್ಲಿ ಖರ್ಚುವೆಚ್ಚವಿಲ್ಲದೇ ರೂಪುಗೊಂಡ ಉದ್ಯಾನ

ಗಾರೆ ನರಸಯ್ಯನಕಟ್ಟೆ ಅಂಗಳಕ್ಕೆ ಉದ್ಯಾನ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಒತ್ತುವರಿ ಭೀತಿ, ಕಟ್ಟಡ ತ್ಯಾಜ್ಯ, ಕಸ ಸುರಿಯುವ ಸ್ಥಳವಾಗಿ ಪರಿವರ್ತನೆಯಾಗುತ್ತಿದ್ದ ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಗಾರೆ ನರಸಯ್ಯನಕಟ್ಟೆ ರಕ್ಷಣೆಗೆ ಮಹಾನಗರ ಪಾಲಿಕೆಯು ಮುಂದಾಗಿದೆ.

ಕೆರೆಗೆ ತಂತಿ ಬೇಲಿ ರಕ್ಷಣೆ ಗೋಡೆ ಇದ್ದರೂ ಒತ್ತುವರಿ, ಕಟ್ಟಡ ತ್ಯಾಜ್ಯ ಸುರಿಯುವ ಕೆಲಸ ನಡೆಯುತ್ತಲೇ ಇತ್ತು. ಪರಿಸರ ಪ್ರೇಮಿಗಳ ಮನವಿ, ಕೆರೆ ಸಂರಕ್ಷಣೆ ಉದ್ದೇಶದಿಂದ ಈ ಕೆರೆ ರಕ್ಷಣೆಗೆ ಪಾಲಿಕೆಯು ಹೆಜ್ಜೆ ಇರಿಸಿದೆ.

ಮೊದಲ ಹೆಜ್ಜೆಯಾಗಿ ಈಚೆಗೆ ವಿಶ್ವ ಪರಿಸರ ದಿನದಂದು ಕೆರೆ ಅಂಗಳದಲ್ಲಿ ಎಲ್ಲಿ ಹೆಚ್ಚು ಕಸ ಬಿದ್ದಿತ್ತೊ ಆ ಕಸ ತೆರವುಗೊಳಿಸಿ, ಮುಳ್ಳಿನ ಗಿಡ, ಕಂಟೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಸ್ವಚ್ಛಗೊಳಿಸಿದ ಈ ಸ್ಥಳದಲ್ಲಿ ಒಂದು ಚಿಕ್ಕ ‘ಉದ್ಯಾನವನ ನಿರ್ಮಾಣ’ ಪ್ರಕ್ರಿಯೆ ನಡೆದಿದೆ.

ಕೆರೆ ರಕ್ಷಣಾ ಗೋಡೆಯ ಎರಡು ಮೀಟರ್‌ನಷ್ಟು ಕಡಿತ ಮಾಡಿ ಅದರ ಒಳಭಾಗದಲ್ಲಿ ಈ ಪುಟ್ಟ ಉದ್ಯಾನ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಉದ್ಯಾನವೆಂದರೆ ಸಾಕಷ್ಟು ಖರ್ಚು ಮಾಡಿ ಏನೂ ನಿರ್ಮಿಸುತ್ತಿಲ್ಲ. ಅಲ್ಲಿಯೇ ಕಲ್ಲು ಗುಂಡುಗಳು, ಮಣ್ಣು ಬಳಸಿ ರೂಪಿಸಲಾಗಿದೆ. ಕಲ್ಲಿನ ಬಂಡೆಗಳ ಗುಡ್ಡೆ ಮಾಡಿ ಅದರ ಮೇಲೆ ತುಳಸಿ ಕಟ್ಟೆ ನಿರ್ಮಿಸಲಾಗಿದೆ.ಉಳಿದ ಕಡೆ ಮೂರ್ನಾಲ್ಕು ಕಾಂಕ್ರೀಟ್ ಬೆಂಚ್‌ಗಳನ್ನು ಹಾಕಲಾಗಿದೆ.

‘ಕಡಿದು ಹಾಕಿದ್ದ ತೆಂಗಿನ ಗಿಡದ ತುಂಡುಗಳನ್ನೇ ಬಳಸಿಕೊಂಡು ಆಸನಗಳನ್ನಾಗಿ ರೂಪಿಸಲಾಗಿದೆ. ಇವುಗಳಿಗೆ ಹಳದಿ, ತಿಳಿ ಗುಲಾಬಿ ಬಣ್ಣ ಹಚ್ಚಿ ಅಂದಗಾಣಿಸಲಾಗಿದೆ. ಅಲ್ಲದೇ ಹೂ ಕುಂಡ, ಅಲಂಕಾರಿಕ ಗಿಡಗಳ ಕುಂಡಗಳನ್ನು ಇಡಲಾಗುತ್ತಿದೆ. ಆವರಣದಲ್ಲಿ ಹುಲ್ಲು ಬೆಳೆಸಿ ಲಾನ್ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ನೈರ್ಮಲ್ಯ ವಿಭಾಗದ ಎಂಜಿನಿಯರ್ ಮೃತ್ಯಂಜಯ್ ಮಾಹಿತಿ ನೀಡಿದರು.

‘ಪಾಲಿಕೆ ಸದಸ್ಯರಾದ ವಿಷ್ಣುವರ್ಧನ್ ಆಸಕ್ತಿ, ಪೌರ ಕಾರ್ಮಿಕರ ಶ್ರಮ, ಪರಿಸರ ಪ್ರಿಯರು ಕಾಳಜಿ ಮತ್ತು ಆಯುಕ್ತರ ಮಾರ್ಗದರ್ಶನದಲ್ಲಿ ಈ ಪುಟ್ಟ ಉದ್ಯಾನ ಯಾವುದೇ ಖರ್ಚು ವೆಚ್ಚವಿಲ್ಲದೇ ರೂಪಿಸಲಾಗಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.