ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ನಿರ್ವಹಣೆ ಇಲ್ಲದೆ ಸೊರಗಿದ ಉದ್ಯಾನ

Published 11 ಮೇ 2024, 14:11 IST
Last Updated 11 ಮೇ 2024, 14:11 IST
ಅಕ್ಷರ ಗಾತ್ರ

ಶಿರಾ: ನಗರದ ಪ್ರತಿಷ್ಠಿತ ಬಡಾವಣೆಯಾದ ವಿದ್ಯಾನಗರದಲ್ಲಿರುವ ಉದ್ಯಾನವು ನಿರ್ವಹಣೆಯಿಲ್ಲದೆ ಸೊರಗಿದೆ.

ಮಕ್ಕಳು, ಮಹಿಳೆಯರು, ಹಿರಿಯ ನಾಗರೀಕರ ವಿಶ್ರಾಂತಿ ತಾಣವಾಗಬೇಕಿದ್ದ ಉದ್ಯಾನ ಇಂದು ಒಂದು ಕಡೆ ನೀರಿಲ್ಲದೆ ಒಣಗುತ್ತಿದ್ದರೆ, ಮತ್ತೊಂದು ಕಡೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಮಾಜಿ ಸಚಿವ ಬಿ.ಸತ್ಯನಾರಾಯಣ ಅವರು ಶಾಸಕರಾಗಿದ್ದ ಸಮಯದಲ್ಲಿ 2018-19ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ವ್ಯಾಯಾಮದ ಸಲಕರಣೆ ಮತ್ತು ಮಕ್ಕಳ ಆಟದ ಸಲಕರಣೆ ಅಳವಡಿಸಿ ಉದ್ಯಾನವನ್ನು ಅಭಿವೃದ್ಧಿಸಿ ಅದಕ್ಕೆ ಹೊಸ ರೂಪ ನೀಡಿದ್ದರು. ನಗರದ ವಿವಿಧ ವಾರ್ಡ್‌ಗಳಿಂದ ಬೆಳಿಗ್ಗೆ ಮತ್ತು ಸಂಜೆ ವ್ಯಾಯಾಮ ಮಾಡಲು ಮತ್ತು ಮಕ್ಕಳನ್ನು ಆಟವಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಇಲ್ಲಿಗೆ ಬರುವ ಮೂಲಕ ಉದ್ಯಾನ ಜನಜಂಗುಳಿಯಿಂದ ತುಂಬಿರುತ್ತಿತ್ತು.

ದಿನಕಳೆದಂತೆ ಉದ್ಯಾನದ ನಿರ್ವಹಣೆ ಇಲ್ಲದಂತಾಗಿ ಎಲ್ಲಿ ನೋಡಿದರು ಕಸದ ರಾಶಿ ಬೀಳುವಂತಾಗಿದೆ. ಬೆಂಚ್‌ಗಳು ಮುರಿದು ಬಿದ್ದಿದ್ದರೆ ಮಕ್ಕಳ ಆಟದ ಸಾಮಗ್ರಿಗಳು ಕಿತ್ತು ಹೋಗಿವೆ. ಕುಡಿದು ಎಸೆದ ಮದ್ಯದ ಬಾಟಲ್‌, ನೀರಿನ ಖಾಲಿ ಬಾಟಲ್‌ಗಳು ಎಲ್ಲೆಂದರಲ್ಲಿ ಬಿದ್ದಿವೆ. ಕೆಲವರು ಕಸವನ್ನು ತಂದು ಉದ್ಯಾನದಲ್ಲಿ ಎಸೆದು ಕಸದ ತೊಟ್ಟಿಯನ್ನಾಗಿ ಪರಿವರ್ತಿಸಿದ್ದಾರೆ. ಈ ಬಗ್ಗೆ ನಗರಸಭೆಗೆ ಎಷ್ಟೇ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ದೂರು.

ಉದ್ಯಾನದ ನಿರ್ವಹಣೆಗೆಂದು ನಗರಸಭೆಯಿಂದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ ತಿಂಗಳುಗಳೇ ಕಳೆದರೂ ಸಿಬ್ಬಂದಿ ಪಾರ್ಕ್ ಕಡೆ ಬಂದಿಲ್ಲ.

ಶಿರಾದ ವಿದ್ಯಾನಗರದಲ್ಲಿರುವ ಉದ್ಯಾನದಲ್ಲಿ ಮುರಿದು ಬಿದ್ದಿರುವ ಮಕ್ಕಳ ಆಟದ ಸಲಕರಣೆಗಳು
ಶಿರಾದ ವಿದ್ಯಾನಗರದಲ್ಲಿರುವ ಉದ್ಯಾನದಲ್ಲಿ ಮುರಿದು ಬಿದ್ದಿರುವ ಮಕ್ಕಳ ಆಟದ ಸಲಕರಣೆಗಳು

ಉದ್ಯಾನಕ್ಕೆ ಹಿಂದೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಈಗ ಅದನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ನೀರಿಲ್ಲದೆ ಗಿಡ, ಮರಗಳು ಒಣಗುತ್ತಿವೆ. ಬಿಸಿಲಿನ ತಾಪಕ್ಕೆ ಪ್ರಾಣಿ, ಪಕ್ಷಿಗಳು, ಜನರು ಹೈರಾಣಗುತ್ತಿದ್ದಾರೆ. ನಗರಸಭೆಯಿಂದ ಗಿಡಗಳು, ಪಕ್ಷಿಗಳಿಗೆ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಿಲ್ಲ.

ಉದ್ಯಾನದಲ್ಲಿ ನೀರಿಲ್ಲದೆ ಒಣಗಿರುವ ಗಿಡಗಳು
ಉದ್ಯಾನದಲ್ಲಿ ನೀರಿಲ್ಲದೆ ಒಣಗಿರುವ ಗಿಡಗಳು

ನಗರದಲ್ಲಿರುವ ಬಹುತೇಕ ಉದ್ಯಾನಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈಗಲಾದರೂ ನಗರಸಭೆ ಎಚ್ಚೆತ್ತು ಉದ್ಯಾನ ಉಳಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT