ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಣದ ಬದಲು ಅಕ್ಕಿಗೆ ಬೇಡಿಕೆ: ₹18 ಕೋಟಿ ಬಾಕಿ ಹಣ ಪಾವತಿಗೆ ಒತ್ತಾಯ

Published 4 ಜುಲೈ 2024, 5:12 IST
Last Updated 4 ಜುಲೈ 2024, 5:12 IST
ಅಕ್ಷರ ಗಾತ್ರ

ತುಮಕೂರು: ‘ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ ಡಿಬಿಟಿ ಮೂಲಕ ನೀಡುವ ಹಣ ಕಳೆದ ನಾಲ್ಕು ತಿಂಗಳಿನಿಂದ ಪಾವತಿಯಾಗಿಲ್ಲ. ಹಣದ ಬದಲಾಗಿ ಅಗತ್ಯ ಆಹಾರ ಸಾಮಗ್ರಿ ಪೂರೈಸಬೇಕು’ ಎಂದು ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಇಲ್ಲಿ ಬುಧವಾರ ಒತ್ತಾಯಿಸಿದರು.

‘ಚುನಾವಣೆಗೂ ಮುನ್ನ 10 ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಿದ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದ ನಂತರ ಕೇವಲ 5 ಕೆ.ಜಿ ವಿತರಿಸಿತು. ಉಳಿದ 5 ಕೆ.ಜಿ ಅಕ್ಕಿ ಬದಲಾಗಿ ಹಣ ನೀಡಲಾಗುವುದು ಎಂದು ಹೇಳಿತ್ತು. ಈಗ ಆ ಹಣವೂ ಸಿಗುತ್ತಿಲ್ಲ. ಹಣ ಕೊಡುವುದು ಬಿಟ್ಟು ಬೇಳೆ, ಸಕ್ಕರೆ, ಅಡುಗೆ ಎಣ್ಣೆ ವಿತರಣೆ ಮಾಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

2017ರಲ್ಲಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರದಾರರ ಇ-ಕೆವೈಸಿ ಮಾಡಿಸುವಂತೆ ಸರ್ಕಾರ ತಿಳಿಸಿತ್ತು. ಒಬ್ಬರಿಗೆ ₹5 ಕೊಡುತ್ತೇವೆ ಎಂದು ಹೇಳಿದ್ದರು. ಶೇ 95ರಷ್ಟು ಜನರ ಇ–ಕೆವೈಸಿ ಮುಕ್ತಾಯವಾಗಿದೆ. ಎಂಟು ವರ್ಷ ಕಳೆದರೂ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಈ ಹಣ ಬಂದಿಲ್ಲ. ₹18 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಸರ್ಕಾರ ಇತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡುವ ಕಮಿಷನ್‌ ಹಣ ಕೂಡ ಕಡಿಮೆ ಇದೆ. ಸದ್ಯ ಒಂದು ಕ್ವಿಂಟಲ್‌ ಅಕ್ಕಿಗೆ ₹124 ಕಮಿಷನ್‌ ಸಿಗುತ್ತಿದೆ. ಇದನ್ನು ₹150ಗೆ ಹೆಚ್ಚಿಸಿದ್ದು, ಇದುವರೆಗೆ ಅದು ಜಾರಿಯಾಗಿಲ್ಲ. ಕಮಿಷನ್‌ ಹಣ ₹200ಗೆ ಹೆಚ್ಚಿಸಬೇಕು. ಆಹಾರ ಪದಾರ್ಥ ಸಂಗ್ರಹಿಸುವ ಗೋದಾಮು, ನ್ಯಾಯಬೆಲೆ ಅಂಗಡಿಗಳಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆಗೆ ಹಣ ಮೀಸಲಿಟ್ಟಿದ್ದರೂ ಇನ್ನೂ ಬಿಡುಗಡೆಯಾಗಿಲ್ಲ. ಸರ್ಕಾರ ಶೀಘ್ರವೇ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯದರ್ಶಿ ಚನ್ನಕೇಶವೇಗೌಡ, ಉಪಾಧ್ಯಕ್ಷರಾದ ಕೆ.ಎಲ್.ರಾಮಚಂದ್ರ, ಕೆ.ಬಿ.ಉಮೇಶಚಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ನಟರಾಜ್, ಪದಾಧಿಕಾರಿಗಳಾದ ಬೀರಲಿಂಗಯ್ಯ, ಕೆ.ನಾಗರಾಜ್, ಪಿ.ಆರ್.ವಿ.ಪ್ರಸಾದ್, ಲಕ್ಷ್ಮಣ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT