ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಲಕ್ಷ ಟನ್ ರಾಗಿ ಖರೀದಿ: ಸಚಿವ ಕೆ.ಗೋಪಾಲಯ್ಯ

ಅಸಮರ್ಪಕ ಪಡಿತರ ವಿತರಣೆ; 150 ಅಂಗಡಿಗಳ ಪರವಾನಗಿ ರದ್ದು
Last Updated 9 ಮೇ 2020, 15:44 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದು ರೈತರಿಂದ 2 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿದೆ. 96 ಸಾವಿರ ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಹೆಚ್ಚುವರಿಯಾಗಿ ಒಂದು ಲಕ್ಷ ಟನ್ ರಾಗಿ ಖರೀದಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ತಾಲ್ಲೂಕಿನ ಬುಗುಡನಹಳ್ಳಿ ಗ್ರಾಮದಲ್ಲಿ ಕೊರೊನಾ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಪಡಿತರ ವಿತರಿಸಿ ಮಾತನಾಡಿದರು.

ರಾಜ್ಯದಲ್ಲಿ ಪಡಿತರವನ್ನು ಸಮರ್ಪಕವಾಗಿ ಪೂರೈಸದ 150 ಅಂಗಡಿಗಳನ್ನು ಅಮಾನತು ಮಾಡಲಾಗಿದೆ. ಅಂಗಡಿ ಮಾಲೀಕರು ಗ್ರಾಹಕರಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿದೆ. ಇಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೀಡುವ ಪಡಿತರವನ್ನು 4.65 ಕೋಟಿ ಮಂದಿ ಪಡೆದಿದ್ದಾರೆ. ಯಾವುದೇ ಕಾರಣಕ್ಕೂ ಕಳಪೆ ಪಡಿತರ ವಿತರಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವಲಸೆ ಕಾರ್ಮಿಕರು ಎಲ್ಲಿಯೇ ಇದ್ದರು ಪಡಿತರ ವಿತರಿಸಬೇಕು. ಈ ನಿಟ್ಟಿನಲ್ಲಿ ಅಂಗಡಿ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಬಿ.ಸುರೇಶ್ ಗೌಡ, ಲಾಕ್‌ಡೌನ್‌ನಿಂದ ಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು, ಪಡಿತರ ಹೊಂದಿಲ್ಲದವರಿಗೆ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಪಡಿತರ ವಿತರಿಸುತ್ತಿದ್ದಾರೆ ಎಂದರು.

ಜಿ.ಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯರಾದ ವೈ.ಎಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ರಾಜೇಗೌಡ, ಮುಖಂಡ ಸಿದ್ದೇಗೌಡ, ತಾ.ಪಂ ಅಧ್ಯಕ್ಷ ಗಂಗಾಂಜನೇಯ, ಉಪಾಧ್ಯಕ್ಷೆ ಶಾಂತಣ್ಣ, ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಶಂಕರಣ್ಣ, ಉಪಾಧ್ಯಕ್ಷ ರಘುನಾಥ್ ಇದ್ದರು.

ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶುಶ್ರೂಷಕಿಯರು, ಪೊಲೀಸರ ಮೇಲೆ ಪುಷ್ಪವೃಷ್ಟಿಗರೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT