ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ | ಸಮಸ್ಯೆಯ ಸುಳಿಯಲ್ಲಿ ಸರ್ಕಾರಿ ಶಾಲೆ

Published 1 ಆಗಸ್ಟ್ 2023, 7:22 IST
Last Updated 1 ಆಗಸ್ಟ್ 2023, 7:22 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಆಲಪ್ಪನಗುಡ್ಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದೇ ಕೊಠಡಿ, ಐದು ತರಗತಿ, ಒಬ್ಬರೆ ಶಿಕ್ಷಕರು ಮತ್ತು ವಿವಾದಕ್ಕೀಡಾಗಿರುವ ಅಕ್ಷರದಾಸೋಹ ಅಡುಗೆ ಸಹಾಯಕಿ ಹುದ್ದೆ ಇವೆಲ್ಲದರಿಂದ ಪೋಷಕರು ಬೇಸತ್ತಿದ್ದಾರೆ.

ಆಲಪ್ಪನಗುಡ್ಡೆ ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ 18 ವಿದ್ಯಾರ್ಥಿಗಳು ಇದ್ದಾರೆ. ಆಲಪ್ಪನಗುಡ್ಡೆಗಿಂತಲೂ ಸಮೀಪದ ನಾಗೇಗೌಡನಪಾಳ್ಯ, ನಂಜಿಚನ್ನಯ್ಯನ ಪಾಳ್ಯ ಮತ್ತು ಗೌಸ್ಮುದ್ದೀನ್ ಪಾಳ್ಯದಿಂದ ವಿದ್ಯಾರ್ಥಿಗಳು ಬರುತ್ತಾರೆ.

ಶಾಲೆಯಲ್ಲಿ ಕಳೆದ 2022ರ ಜುಲೈ ತಿಂಗಳಿಂದಲೂ ಒಬ್ಬರೆ ಶಿಕ್ಷಕಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪ್ರಸ್ತುತ ವರ್ಷದಲ್ಲಿ ನಿಯೋಜನೆ ಮಾಡುವುದಾಗಿ ಭರವಸೆ ನೀಡಿದ್ದರೂ, ಭರವಸೆಯಾಗಿಯೇ ಉಳಿದಿದೆ ಎಂದು ಶಾಲಾಭಿವೃದ್ಧಿ ಸಮಿತಿಯ ಸದಸ್ಯ ನಯಾಜ್ ತಿಳಿಸಿದ್ದಾರೆ.

ಕಾನೂನು ತೊಡಕಿನಲ್ಲಿರುವ ಅಡುಗೆ ಸಹಾಯಕಿ ಹುದ್ದೆ: ಅಡುಗೆ ಸಹಾಯಕಿಯಾಗಿ ಕಳೆದ 20 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಶೋಭಾ ಕಳೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸದಸ್ಯೆಯಾಗಿ ಆಯ್ಕೆಯಾಗಿರುವ ಕಾರಣ ಸರ್ಕಾರಿ ನಿಯಮಗಳು ಅಡ್ಡಿಯಾಗಿದೆ. ಕಾರಣ ಜನಪ್ರತಿನಿಧಿಗಳು ಅಡುಗೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕಳೆದ ಎರಡುವರೆ ವರ್ಷಗಳಿಂದಲೂ ತಾತ್ಕಾಲಿಕವಾಗಿ ಮುಂದುವರೆಸಿಕೊಂಡು ಬಂದಿದ್ದು, ಗ್ರಾಮದ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಜಾರಿಮಾಡಿದ್ದರು. ಹೀಗಾಗಿ ಅಧಿಕಾರಿಗಳ ಸೂಚನೆ ಮೇರೆಗೆ ಶಿಕ್ಷಕಿ ಅಡುಗೆ ಸಹಾಯಕಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಲ್ಮಾ ಭಾನು ಮಾತನಾಡಿ, ಕಳೆದ 20 ವರ್ಷದಿಂದ ಯಾವುದೇ ಲೋಪವಿಲ್ಲದೆ ಅಡುಗೆ ಸಹಾಯಕಿ ಕಾರ್ಯನಿರ್ವಹಿಸಿದ್ದಾರೆ. ಕಾನೂನಿನಲ್ಲಿ ತೊಡಕಿದ್ದರೂ ಹಲವು ಬಾರಿ ಪ್ರಚಾರ ನೀಡಿದ್ದರೂ ಬೇರೆ ಯಾರು ಬಾರದ ಕಾರಣ ಗ್ರಾಮ ಪಂಚಾಯಿತಿ ಸದಸ್ಯೆಯನ್ನೆ ಮುಂದುವರೆಸಲಾಗಿದೆ. ಅಧಿಕಾರಿಗಳ ಸೂಚನೆ ಮೇರೆಗೆ ಕರ್ತವ್ಯದಿಂದ ಬಿಡುಗಡೆ ಮಾಡಿರುವುದರಿಂದ ಸಮಸ್ಯೆ ಸೃಷ್ಠಿಯಾಗಿದೆ ಎಂದರು.

ಸೋಮವಾರ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಿದಾನಂದಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಹೊಸ ಅಡುಗೆ ಸಹಾಯಕಿ ನೇಮಕವಾಗುವವರೆಗೂ ಮತ್ತೆ ಶೋಭಾ ಅವರನ್ನೆ ತಾತ್ಕಾಲಿಕವಾಗಿ ಮುಂದುವರೆಸಲು ಮತ್ತು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಸುವ ನಿರ್ಣಯ ಕೈಗೊಳ್ಳಲಾಯಿತು.

ಸಮಿತಿಯ ಸದಸ್ಯರಾದ ಕಾವ್ಯಾ, ಖೈರುನ್ನೀಸಾ, ಪುಟ್ಟಮ್ಮ, ರಾಧಾ, ಸುನೀತಾ, ಮುಕ್ತಿಯಾರ್ ಇದ್ದರು.

ಕುಣಿಗಲ್ ತಾಲ್ಲೂಕು ಆಲಪ್ಪನಗುಡ್ಡೆ ಸರ್ಕಾರಿ ಶಾಲೆಯ ಒಂದೇ ಕೊಠಡಿಯಲ್ಲಿ ಒಬ್ಬರೆ ಶಿಕ್ಷಕಿ ಐದು ತರಗತಿಗಳ 18 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ
ಕುಣಿಗಲ್ ತಾಲ್ಲೂಕು ಆಲಪ್ಪನಗುಡ್ಡೆ ಸರ್ಕಾರಿ ಶಾಲೆಯ ಒಂದೇ ಕೊಠಡಿಯಲ್ಲಿ ಒಬ್ಬರೆ ಶಿಕ್ಷಕಿ ಐದು ತರಗತಿಗಳ 18 ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT