ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಗೃಹರಕ್ಷಕ ಹುದ್ದೆಗೆ ಪದವೀಧರರು ಅರ್ಜಿ!

93 ಹುದ್ದೆಗಳಿಗೆ ಅರ್ಜಿ, 8 ಮಂದಿ ಪದವೀಧರರು ಆಯ್ಕೆ
Published 18 ಮಾರ್ಚ್ 2024, 6:06 IST
Last Updated 18 ಮಾರ್ಚ್ 2024, 6:06 IST
ಅಕ್ಷರ ಗಾತ್ರ

ತುಮಕೂರು: ಗೃಹರಕ್ಷಕ ದಳದ ಹುದ್ದೆಗಳಿಗೆ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಜಿಲ್ಲೆಯ ನಿರುದ್ಯೋಗದ ಸಮಸ್ಯೆಗೆ ಕನ್ನಡಿ ಹಿಡಿದಿದೆ.

ಸ್ವಯಂ ಸೇವಾ ಗೃಹರಕ್ಷಕ, ಗೃಹರಕ್ಷಕಿಯರ ಹುದ್ದೆಗಳಿಗೆ ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಆದರೆ, ಪಿಯುಸಿ ಮುಗಿಸಿದವರು, ಪದವೀಧರರು ಅರ್ಜಿ ಸಲ್ಲಿಸಿ, ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 900 ಗೃಹರಕ್ಷಕ, ಗೃಹರಕ್ಷಕಿಯರು ಕೆಲಸ ಮಾಡುತ್ತಿದ್ದಾರೆ.

ಗೃಹರಕ್ಷಕ ದಳದಿಂದ ಈಚೆಗೆ ವಿವಿಧ ಘಟಕಗಳಲ್ಲಿ ಖಾಲಿ ಇರುವ 93 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 159 ಅರ್ಜಿಗಳು ಸ್ವೀಕೃತಗೊಂಡಿದ್ದವು. ಇದರಲ್ಲಿ ಕೆಲವು ಅರ್ಜಿಗಳು ತಿರಸ್ಕೃತಗೊಂಡಿದ್ದು, ಇನ್ನೂ ಕೆಲವರು ಸಂದರ್ಶನಕ್ಕೆ ಗೈರಾಗಿದ್ದರು. ಮಾರ್ಚ್‌ 14ರಂದು ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ನೇರ ಸಂದರ್ಶನದಲ್ಲಿ 85 ಜನ ಭಾಗವಹಿಸಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

85 ಜನರಲ್ಲಿ 49 ಮಂದಿ ಎಸ್ಸೆಸ್ಸೆಲ್ಸಿ, 28 ಜನ ಪಿಯುಸಿ ಹಾಗೂ 8 ಮಂದಿ ಪದವೀಧರರು ಇದ್ದಾರೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿ ಅರ್ಧಕ್ಕೆ ವಿದ್ಯಾಭ್ಯಾಸ ಬಿಟ್ಟವರಿಗೆ ಪದವೀಧರರು ಸ್ಪರ್ಧೆ ನೀಡುತ್ತಿದ್ದಾರೆ. ಯಾವುದಾದರು ಕೆಲಸ ಸಿಕ್ಕರೆ ಸಾಕು ಎಂದುಕೊಂಡು ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ತುಮಕೂರು ಘಟಕದ 6 ಹುದ್ದೆ, ಕೊರಟಗೆರೆ-4, ಮಧುಗಿರಿ-3, ಪಾವಗಡ-6, ಶಿರಾ-4, ಚಿಕ್ಕನಾಯಕನಹಳ್ಳಿ-5, ತಿಪಟೂರು-5, ತುರುವೇಕೆರೆ-4, ಕುಣಿಗಲ್-9, ಗುಬ್ಬಿ-7, ಊರ್ಡಿಗೆರೆ-5, ನೊಣವಿನಕೆರೆ-4, ಹೊನ್ನವಳ್ಳಿ-11, ಅಮೃತೂರು-5, ಮಿಡಿಗೇಶಿ-4, ತಾವರೆಕೆರೆ-5, ಕಳ್ಳಂಬೆಳ್ಳ-3, ವೈ.ಎನ್.ಹೊಸಕೋಟೆ-3 ಸೇರಿದಂತೆ ಒಟ್ಟು 93 ಹುದ್ದೆಗಳ ಭರ್ತಿಗೆ ಅರ್ಜಿ ಕರೆಯಲಾಗಿತ್ತು.

ಮಧುಗಿರಿ, ಪಾವಗಡ, ಶಿರಾ ಮತ್ತು ಕೊರಟಗೆರೆ ವ್ಯಾಪ್ತಿಯ ಘಟಕಗಳಿಗೆ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ತಿಪಟೂರು, ಗುಬ್ಬಿ ಭಾಗದ ಕಡೆ ಕೆಲಸ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಹಿಂದುಳಿದ ತಾಲ್ಲೂಕುಗಳ ಯುವಕ, ಯುವತಿಯರು ಕೆಲಸ ದೊರೆತರೆ ಸಾಕು ಎಂದು ಅರ್ಜಿ ಸಲ್ಲಿಸುತ್ತಿದ್ದಾರೆ.

‘ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಸರಿಯಾಗಿ ಆಗುತ್ತಿಲ್ಲ. ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೂ ಪ್ರಯೋಜನ ಇಲ್ಲದಂತಾಗಿದೆ. ಸರ್ಕಾರ ಸಹ ಕಾಲ ಕಾಲಕ್ಕೆ ಪರೀಕ್ಷೆ ನಡೆಸಿ, ಫಲಿತಾಂಶ ನೀಡುತ್ತಿಲ್ಲ. ಪರೀಕ್ಷೆ ಬರೆದು ತಿಂಗಳುಗಟ್ಟಲೆ ಫಲಿತಾಂಶಕ್ಕಾಗಿ ಕಾಯುತ್ತಾ ಇರಲು ಆಗುವುದಿಲ್ಲ. ಜೀವನಕ್ಕಾಗಿ ಏನಾದರೂ ಮಾಡಲೇಬೇಕು. ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಗೃಹರಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ’ ಎಂದು ಸಂದರ್ಶನಕ್ಕೆ ಬಂದಿದ್ದ ಅಭ್ಯರ್ಥಿಯೊಬ್ಬರು ಪ್ರತಿಕ್ರಿಯಿಸಿದರು.

900 ಗೃಹರಕ್ಷಕ ದಳದ ಸಿಬ್ಬಂದಿ ಕೆಲಸ 85 ಮಂದಿ ಹೊಸದಾಗಿ ಆಯ್ಕೆ ಹೆಚ್ಚಿದ ನಿರುದ್ಯೋಗದ ಸಮಸ್ಯೆ

ಹೆಸರಿಗಷ್ಟೇ ಉದ್ಯೋಗ ಮೇಳ

ಜಿಲ್ಲೆಯಲ್ಲಿ ನಡೆಯುವ ಉದ್ಯೋಗ ಮೇಳಗಳು ಕೇವಲ ಹೆಸರಿಗಷ್ಟೇ ಸೀಮಿತವಾಗಿವೆ. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಇದ್ದೂ ಇಲ್ಲದಂತಾಗಿದೆ. ಉದ್ಯೋಗ ವಿನಿಮಯ ಕಚೇರಿಯಿಂದ ಇದುವರೆಗೆ ಬೃಹತ್‌ ಉದ್ಯೋಗ ಮೇಳ ಏರ್ಪಡಿಸಿಲ್ಲ ಎಂದು ಪಾವಗಡದ ರಮೇಶ್‌ ದೂರಿದರು. ಕಾಟಾಚಾರಕ್ಕೆ ಉದ್ಯೋಗ ಮೇಳಗಳು ನಡೆಯುತ್ತವೆ. ಹೆಚ್ಚಿನ ಯುವಕರಿಗೆ ಉದ್ಯೋಗವೇ ಸಿಗುವುದಿಲ್ಲ. ಉದ್ಯೋಗ ಮೇಳಕ್ಕೆ ದೂರದ ಊರುಗಳಿಂದ ಬಂದವರು ಬರಿಗೈಯಲ್ಲಿ ವಾಪಸ್‌ ಹೋಗುತ್ತಿದ್ದಾರೆ. ಉದ್ಯೋಗ ವಿನಿಮಯ ಕಚೇರಿ ಅಧಿಕಾರಿಗಳು ನಿರುದ್ಯೋಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT