ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳಲ್ಲಿ ಸೂಕ್ತ ಕ್ರಮ

ಗುಬ್ಬಿ ತಾಲ್ಲೂಕಿನ ತಿಪ್ಪೂರಿನಲ್ಲಿ ತೆಂಗು, ಅಡಿಕೆ ಮರಗಳ ಕತ್ತರಿಸಿದ ಪ್ರಕರಣ; ಎಸಿ ಭರವಸೆ
Last Updated 9 ಮಾರ್ಚ್ 2020, 15:31 IST
ಅಕ್ಷರ ಗಾತ್ರ

ತುಮಕೂರು/ಗುಬ್ಬಿ: ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಸಿದ್ಧಮ್ಮ ಎಂಬುವರ ಅನುಭವದಲ್ಲಿದ್ದ 170 ಅಡಿಕೆ ಮರಗಳು ಹಾಗೂ 50ಕ್ಕೂ ಹೆಚ್ಚು ತೆಂಗಿನ ಮರಗಳನ್ನು ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆಯಲ್ಲಿ ತೊಡಗಿದ್ದವರ ಜತೆ ಸೋಮವಾರ ಸಂಜೆ ಉಪವಿಭಾಗಾಧಿಕಾರಿ ವಿ.ಅಜಯ್ ಮಾತುಕತೆ ನಡೆಸಿದರು. ‘ತಹಶೀಲ್ದಾರ್ ಸೂಚನೆಗಳನ್ನುಗ್ರಾಮ ಲೆಕ್ಕಾಧಿಕಾರಿ ಉಲ್ಲಂಘಿಸಿರುವುದು ಮೇಲುನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಮೂರು ದಿನಗಳಲ್ಲಿ ನಾನೇ ತನಿಖೆ ನಡೆಸುವೆ. ತಪ್ಪು ಸಾಬೀತಾದರೆ ಗ್ರಾಮ ಲೆಕ್ಕಾಧಿಕಾರಿ ಅಮಾನತುಗೊಳಿಸಲಾಗುವುದು. ಯಾರಿಗೆ ಅನ್ಯಾಯವಾಗಿದೆಯೊ ಅವರಿಗೆ 10 ದಿನಗಳ ಒಳಗೆ ನ್ಯಾಯದೊರಕಿಸಿಕೊಡಲಾಗುವುದು’ ಎಂದು ಅವರು ಭರವಸೆ ನೀಡಿದರು.

‘ಕಡಿದಿರುವ ಮರಗಳು ಯಾರಿಗೆ ಸಂಬಂಧಿಸಿವೆ ಎನ್ನುವ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದರೆ ಸಂಬಂಧಿಸಿದವರಿಗೆ ಪರಿಹಾರ ನೀಡಲಾಗುವುದು’ ಎಂದರು. ಉಪವಿಭಾಗಾಧಿಕಾರಿ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ವೀರಶೈವ ಸಮುದಾಯದ ಮುಖಂಡರು, ರೈತ ಸಂಘ, ಜಯಕರ್ನಾಟಕ ಸಂಘಟನೆ ಸದಸ್ಯರು ಬೆಂಬಲ ಸೂಚಿಸಿದ್ದರು. ನಂತರ ತಿಪ್ಪೂರಿನಲ್ಲಿರುವ ಜಮೀನಿಗೆ ಅಜಯ್ ಭೇಟಿ ನೀಡಿ ಪರಿಶೀಲಿಸಿದರು.

ವಿವಾದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿ ಎದುರು ಹಾಗೂ ಮರಗಳನ್ನು ತೆರವುಗೊಳಿಸಿದ ಜಮೀನಿನಲ್ಲಿ ಬೆಳಿಗ್ಗೆಯಿಂದಲೇ ನಾನಾ ಬೆಳವಣಿಗೆಗಳು ಜರುಗಿದವು.

ಜಮೀನಿನಲ್ಲಿ ವಾಲ್ಮೀಕಿ ಸಂಘಟನೆ ಸದಸ್ಯರು ಹಾಗೂ ಕೆಲ ಗ್ರಾಮಸ್ಥರು ಧರಣಿ ಆರಂಭಿಸಿದರು. ಧರಣಿ ಮಧ್ಯಾಹ್ನ ಗುಬ್ಬಿ ತಹಶೀಲ್ದಾರ್ ಕಚೇರಿ ಆವರಣಕ್ಕೆ ಸ್ಥಳಾಂತರವಾಯಿತು. ತಹಶೀಲ್ದಾರ್, ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಇವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿದ್ಧಮ್ಮ ಅಸ್ವಸ್ಥರಾದರು. ಅವರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ದು ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಯಿತು.

‘ಸ್ಥಳೀಯ ಮುಖಂಡರ ಮಾತು ಕೇಳಿ ಗ್ರಾಮ ಲೆಕ್ಕಾಧಿಕಾರಿ ಫಲಭರಿತ ಮರಗಳನ್ನು ತೆರವುಗೊಳಿಸಿದ್ದಾರೆ. ಈ ಪ್ರಕರಣದ ಹಿಂದೆ ಪ್ರಭಾವಿಗಳು ಇದ್ದಾರೆ. ಇದು ಇನಾಂ ಜಮೀನು ಆಗಿರಬಹುದು. ತೆಂಗು, ಅಡಿಕೆ ಮರಗಳನ್ನು ಕತ್ತರಿಸಬಾರದಿತ್ತು. ಗ್ರಾಮಸ್ಥರ ಸಮ್ಮುಖದಲ್ಲಿ ಸಮಸ್ಯೆಯನ್ನು ಪರಿಹರಿಸಬಹುದಿತ್ತು’ ಎಂದು ಸ್ಥಳೀಯರು ಹೇಳಿದರು.

****

ಅರ್ಚಕರ ನಡುವೆ ಭಿನ್ನಾಭಿ‍ಪ್ರಾಯ

ತಿಪ್ಪೂರಿನ ಸರ್ವೆ ನಂಬರ್ 113 ಮತ್ತು 114ರಲ್ಲಿರುವ 5.22 ಎಕರೆ ಜಮೀನು ಉಡುಸಲಮ್ಮ ದೇವಸ್ಥಾನದ ಹೆಸರಿನಲ್ಲಿದೆ. ಆರು ಅರ್ಚಕರು ಜಮೀನಿನ ಅನುಭವ ಹೊಂದಿದ್ದಾರೆ. ಇವರಲ್ಲಿ ನಾಲ್ಕು ಮಂದಿ ಜಮೀನು ಬೀಳು ಬಿಟ್ಟಿದ್ದಾರೆ. ಉಳಿದ ಇಬ್ಬರು ತೆಂಗು, ಅಡಿಕೆ ಬೆಳೆಸಿದ್ದಾರೆ. ಅರ್ಚಕರ ನಡುವಿನ ಭಿನ್ನಾಭಿಪ್ರಾಯವೇ ಈ ವಿವಾದಕ್ಕೆ ಮೂಲ ಎನ್ನಲಾಗುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಉಪವಿಭಾಗಾಧಿಕಾರಿ, ‘ಸ್ಥಳೀಯರೇ ಜೆಸಿಬಿ, ಮರ ಕತ್ತರಿಸುವ ಯಂತ್ರಗಳನ್ನು ನೀಡಿದ್ದಾರೆ. ತಾಲ್ಲೂಕು ಆಡಳಿತದಿಂದ ಯಂತ್ರಗಳನ್ನು ತರಿಸಿ ಮರಗಳನ್ನು ಕತ್ತರಿಸಿಲ್ಲ’ ಎಂದಿದ್ದಾರೆ. ಮರ ತೆರವು ವಿಚಾರದಲ್ಲಿ ಸ್ಥಳೀಯ ಪ್ರಭಾವಿಗಳ ಪಾತ್ರವೂ ಇದೆ ಎನ್ನಲಾಗುತ್ತಿದೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರು ಪರಿಹಾರಕ್ಕೆ ಆಗ್ರಹಿಸಿದರೆ, ಮತ್ತೆ ಕೆಲವರು ತಹಶೀಲ್ದಾರ್ ಅಮಾನತಿಗೆ ಒತ್ತಾಯಿಸಿದರು. ಈ ಪ್ರಕರಣದ ಒಳಸುಳಿಯಲ್ಲಿ ‘ರಾಜಕೀಯ’ವೂ ಇದೆ ಎನ್ನುತ್ತವೆ ಮೂಲಗಳು.

****

‘ಗೊಂದಲ ನಿಜ: ಜಿಲ್ಲಾಧಿಕಾರಿ

ಜಮೀನಿನ ಒಡೆತಕ್ಕೆ ಸಂಬಂಧಿಸಿದಂತೆ ಅನುಭವದಾರರು ಉಪವಿಭಾಗಾಧಿಕಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲಿ ಅರ್ಜಿ ವಜಾ ಆಗಿತ್ತು. ನಂತರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ವಿಚಾರಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿತು. ಪ್ರಕರಣವು ಈಗ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಗೊಂದಲಗಳಾಗಿರುವುದು ನಿಜ. ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಉಪವಿಭಾಗಾಧಿಕಾರಿಗೆ ಸೂಚಿಸಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT