ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಬ್ಬಿ ಎಪಿಎಂಸಿಗೆ ಬೇಕು ಮೂಲಸೌಕರ್ಯ

ಶಾಂತರಾಜು ಎಚ್.ಜಿ.
Published 18 ಮಾರ್ಚ್ 2024, 6:59 IST
Last Updated 18 ಮಾರ್ಚ್ 2024, 6:59 IST
ಅಕ್ಷರ ಗಾತ್ರ

ಗುಬ್ಬಿ: ರೈತರು ಬೆಳೆದ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಪಟ್ಟಣದ ಬಸ್‌ನಿಲ್ದಾಣದ ಸಮೀಪ ನಿರ್ಮಿಸಲಾಗಿರುವ ಕೃಷಿ ಉತ್ಪನ್ನ ಮಾರುಟಕ್ಟೆ ಸಮಿತಿ (ಎಪಿಎಂಸಿ) ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಇರುವ ಎಪಿಎಂಸಿಯ  ಆವರಣದಲ್ಲಿ ಗಿಡ- ಗೆಂಟೆಗಳು ಬೆಳೆದು ಸ್ವಚ್ಛತೆ ಮರೀಚಿಕೆಯಾಗಿದೆ. 

ಪ್ರತಿ ಸೋಮವಾರವೂ ಎಪಿಎಂಸಿ ಆವರಣದಲ್ಲಿ ರೈತರು ತೆಂಗಿನಕಾಯಿ, ಅಡಿಕೆ, ದವಸ, ಧಾನ್ಯಗಳ ಜೊತೆಗೆ ಕುರಿ, ಮೇಕೆಗಳನ್ನು ಮಾರಾಟ ಮಾಡುತ್ತಾರೆ. ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿರ್ಮಿಸಿರುವ ಕುರಿ, ಮೇಕೆ ಶೆಡ್ ಇದುವರೆಗೂ ರೈತರ ಉಪಯೋಗಕ್ಕೆ ಬಾರದಾಗಿದೆ. ಶೆಡ್‌ ನಿರ್ಮಾಣದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿಯೇ ಇಲ್ಲ. ಹಾಗಾಗಿ, ಶೆಡ್ ಇದ್ದರೂ  ಬಳಕೆಗೆ ಬಾರದೇ ಹಣ ಪೋಲಾಗಿದೆ. 

ಎಪಿಎಂಸಿಯ ಆವರಣದಲ್ಲಿರುವ ತೆರೆದಮಳಿಗೆ ಪ್ರಾಂಗಣವು ಹಳೆಯದಾಗಿದ್ದು, ಅಲ್ಲಿನ ಮೇಲ್ಛಾವಣಿ ಕಿತ್ತು ಬೀಳುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂಬುದು ರೈತರ ದೂರು.

ಸೋಮವಾರ ವಹಿವಾಟು ಹೆಚ್ಚಾಗಿ ನಡೆಯುವುದರಿಂದ ಎಪಿಎಂಸಿಗೆ ಬರುವ ರೈತರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ. ಎಪಿಎಂಸಿಯಲ್ಲಿ ಚುನಾಯಿತ ಮಂಡಳಿ ಇಲ್ಲದಿರುವುದರಿಂದ, ಅಧಿಕಾರಿಗಳೇ ಜವಾಬ್ದಾರಿ ವಹಿಸಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸ ಬೇಕಾಗಿತ್ತು. ಆದರೆ, ಅಧಿಕಾರಿಗಳ ನಿರಾಸಕ್ತಿಯಿಂದಾಗಿ ರೈತರಿಗೆ ಅಗತ್ಯ ಸೌಲಭ್ಯಗಳು ದೊರೆಯದಂತಾಗಿವೆ. ಆವರಣದಲ್ಲಿರುವ ಕುಡಿಯುವ ನೀರಿನ ಘಟಕವು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೇ ಕುಡಿಯುವ ನೀರಿಗೂ ಪರದಾಡುವಂತಾಗಿದೆ.

ಕೃಷಿ ಉತ್ಪನ್ನಗಳನ್ನುಕಾಪಾಡುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಅನೇಕ ವರ್ಷಗಳಿಂದ ಮನವಿ ಮಾಡಲಾಗಿದೆ. ಆದರೆ, ಇಲ್ಲಿನ ಆಡಳಿತ ವರ್ಗ ಇದುವರೆಗೂ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ರೈತರು ಆರೋಪಿಸುತ್ತಾರೆ.

ನಿತ್ಯವೂ ಇಲ್ಲಿಗೆ ಬರುವ ರೈತರು ಮತ್ತು ವ್ಯಾಪಾರಿಗಳಿಗಾಗಿ ನಿರ್ಮಿಸಿರುವ ಶೌಚಾಲಯಗಳು ಹಾಳಾಗಿ ಬಹಳ ದಿನಗಳೇ ಕಳೆದಿವೆ. ಇವು ಉಪಯೋಗಿಸದ ಸ್ಥಿತಿಯನ್ನು ತಲುಪಿರುವುದರಿಂದ ಅವುಗಳನ್ನು ಮುಚ್ಚಲಾಗಿದ್ದು, ರೈತರ  ಮತ್ತು ವ್ಯಾಪಾರಿಗಳಿಗೆ  ಬಯಲು ಶೌಚಾಲಯವೇ ಅನಿವಾರ್ಯವಾಗಿದೆ. ಶೌಚಾಲಯದಂಥ ಮೂಲಸೌಕರ್ಯ ಇಲ್ಲದಿರುವುದರಿಂದ ರೈತ ಮಹಿಳೆಯರ ಪಾಡು ಹೇಳತೀರದಾಗಿದೆ. ಪುರುಷರು ಹೇಗೋ ಬಯಲಿಗೆ ಹೋಗುತ್ತಾರೆ. ಆದರೆ, ನಮಗಾದರೂ ತಾತ್ಕಾಲಿಕವಾಗಿಯಾದರೂ ಶೌಚಾಲಯದ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಾರೆ ರೈತ ಮಹಿಳೆಯರು.

ಆವರಣದಲ್ಲಿ ಗಿಡ–ಗೆಂಟೆಗಳನ್ನು ತೆರವುಗೊಳಿಸದೆ ಇರುವುದರಿಂದ ಮಳಿಗೆಗಳ ಸುತ್ತ-ಮುತ್ತ ಓಡಾಡುವುದೇ ಕಷ್ಟವಾಗಿದೆ. ಅವರಣದಲ್ಲಿ ನೀರಿನ ಸೈಫನ್ ಹಾಗೂ ಕಿರುತೊಟ್ಟಿ ಇದ್ದರೂ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ. ರೈತರಿಗಾಗಿಯೇ ನಿರ್ಮಿಸಲಾಗಿದ್ದ ಭವನದಲ್ಲಿ ಅಧಿಕಾರಿಗಳು ಸಲಕರಣೆಗಳನ್ನು ತುಂಬಿಸಿದ್ದಾರೆ. ಇದರಿಂದ  ರೈತರಿಗೆ ವಿಶ್ರಾಂತಿ ಪಡೆಯಲು ಅಗತ್ಯ ಜಾಗವಿಲ್ಲದಂತಾಗಿದೆ. ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ತೆರವುಗೊಳಿಸಿ, ರೈತರ ಉಪಯೋಗಕ್ಕೆ ಅನುವು ಮಾಡಿಕೊಡಬೇಕಿದೆ. ಅಂತೆಯೇ ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ನಿಯಂತ್ರಿಸಿ, ಅಮಾಯಕ ರೈತರ ಸಹಾಯಕ್ಕೆ ಅಧಿಕಾರಿಗಳು ನಿಲ್ಲಬೇಕಿದೆ.

ಎಪಿಎಂಸಿಯ ಸ್ವಲ್ಪಭಾಗ ಅನೇಕ ವರ್ಷಗಳಿಂದ ತಕರಾರು ಇದ್ದರೂ, ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಬಗೆಹರಿಸದೆ ಇರುವುದರಿಂದ ಹಾಗೆ ಉಳಿದು ಕೊಂಡಿದೆ. ತಾಲ್ಲೂಕಿನಲ್ಲಿ ಕೇವಲ ಎರಡು ಎಪಿಎಂಸಿ ಮಾರುಕಟ್ಟೆಗಳು ಇದ್ದು,ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕು ಕೇಂದ್ರದಲ್ಲಿರುವ ಆವರಣದಲ್ಲಿ ಇನ್ನೂ ವಿಶಾಲವಾದ ಗೋದಾಮು ನಿರ್ಮಿಸುವ ಅಗತ್ಯವಿದೆ. ಸರ್ಕಾರ ಹಾಗೂ ಅಧಿಕಾರಿಗಳು ತುರ್ತುಕ್ರಮ ಕೈಗೊಂಡು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕಿದೆ. 

ಗುಬ್ಬಿ ಎಪಿಎಂಸಿಯಲ್ಲಿ ನಿರ್ಮಿಸಲಾಗಿರುವ ಕುರಿ ಮೇಕೆ ಶೆಡ್
ಗುಬ್ಬಿ ಎಪಿಎಂಸಿಯಲ್ಲಿ ನಿರ್ಮಿಸಲಾಗಿರುವ ಕುರಿ ಮೇಕೆ ಶೆಡ್
ಎಪಿಎಂಸಿಗೆ ತಕ್ಷಣವೇ ಚುನಾವಣೆ ನಡೆಸಬೇಕಿದೆ. ಅಗತ್ಯವಿರುವ ಮೂಲಸೌಕರ್ಯ ಕೈಗೊಂಡು ರೈತರಿಗೆ ಅನುಕೂಲ ಮಾಡಬೇಕು. ಇಲ್ಲದಿದ್ದರೆ ಬರದಿಂದ ತತ್ತರಿಸುತ್ತಿರುವ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ
- ಲಕ್ಷ್ಮಿರಂಗಯ್ಯ ಮಾಜಿ ಅಧ್ಯಕ್ಷ ಎಪಿಎಂಸಿ 
ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಮೂಲಸೌಕರ್ಯದ ಜೊತೆಗೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರೈತರಲ್ಲಿ ಧೈರ್ಯವನ್ನು ತುಂಬಬೇಕಿದೆ‌
ರೂಪ ಕುಮಾರಸ್ವಾಮಿ ರೈತ ಮಹಿಳೆ 
ಕೊಬ್ಬರಿ ಖರೀದಿಸಿ ರೈತರ ಎಲ್ಲಾ ಉತ್ಪನ್ನಗಳನ್ನು ಎಪಿಎಂಸಿ ಮೂಲಕ ಖರೀದಿ ಮತ್ತು ಮಾರಾಟಕ್ಕೆ ಅವಕಾಶವಿದ್ದರೂ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಉತ್ತಮ ಧಾರಣೆ ಸಿಗುವುದು ಎಂಬ ಆಸೆಯಲ್ಲಿ ರೈತರು ಈಗಾಗಲೇ ಕೊಬ್ಬರಿಯನ್ನು ಒಡೆದು ಸಿದ್ಧಮಾಡಿಕೊಂಡಿದ್ದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಜಿಲ್ಲಾಡಳಿತ ಎಪಿಎಂಸಿಯ ಸಮಸ್ಯೆಗಳನ್ನು ಬಗೆಹರಿಸಿ ಕೊಬ್ಬರಿ ಖರೀದಿಗೆ ಮುಂದಾಗ ಬೇಕಿದೆ
ಲೋಕೇಶ್ ಕಾರ್ಯದರ್ಶಿ ತಾಲ್ಲೂಕು ರೈತ ಸಂಘ
ಎಪಿಎಂಸಿಯಲ್ಲಿ ಇರುವ ಸಮಸ್ಯೆಗಳನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ.ಶೀಘ್ರವಾಗಿ ಕ್ರಮ ಕೈಗೊಂಡು ಹೊಸ ಶೌಚಾಲಯ ನಿರ್ಮಾಣ ಗಿಡ-ಗೆಂಟೆ ತೆರವು ಹಾಗೂ ಆವರಣದಲ್ಲಿನ ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ. ರೈತಪರವಾಗಿದ್ದು ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಇಲಾಖೆ ಸದಾ ಸಿದ್ಧವಾಗಿದೆ
-  ವಿಜಯಲಕ್ಷ್ಮಿ ಕಾರ್ಯದರ್ಶಿ ಎಪಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT