ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ ಪಟ್ಟಣದ ತುಂಬೆಲ್ಲಾ ಕಸದ ರಾಶಿ

ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ– ಆರೋಪ
Last Updated 26 ಮೇ 2020, 2:23 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದ ಎಲ್ಲೆಡೆ ಕಸದ ರಾಶಿ ಕಣ್ಣಿಗೆ ರಾಚುತ್ತಿದ್ದರೂ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

10ನೇ ವಾರ್ಡ್‌ ಮಹಾಲಕ್ಷ್ಮಿ ನಗರದ 4ನೇ ತಿರುವು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಉದ್ಯಾನದ ಸುತ್ತ, 9ನೇ ವಾರ್ಡ್‌ನ ಮಾರುತಿ ನಗರ, ವಿದ್ಯಾನಗರದ ಸಾಲುಮರದ ತಿಮ್ಮಕ್ಕ ಉದ್ಯಾನದ ಸುತ್ತ, ಪಂಚಮುಖಿ ಆಂಜನೇಯಸ್ವಾಮಿ, ದೇವಸ್ಥಾನ ರಸ್ತೆ, ವಿನಾಯಕ ನಗರ ಮತ್ತು ಪೊಲೀಸ್ ವಸತಿನಿಲಯ ರಸ್ತೆ ಬದಿಯ ಚರಂಡಿಗಳು ಕಟ್ಟಿಕೊಂಡಿವೆ.

ವಿದ್ಯಾನಗರ ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಬದಿಯ ಆಲದ ಮರದ ಕೆಳಗೆ, ಬಾಬು ಜಗಜೀವನರಾಂ ನಗರ, ಹಳೇ ಎ.ಕೆ.ಕಾಲೊನಿ, ಟಿಪ್ಪು ವೃತ್ತ, ಶಾದಿ ಮಹಲ್ ರಸ್ತೆಯಲ್ಲಿ ಕಸದ ರಾಶಿ ಜನರನ್ನು ಸ್ವಾಗತಿಸುತ್ತದೆ. ಪದವಿ ಕಾಲೇಜು ಪಕ್ಕದ ಒಳಚರಂಡಿ ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಪಟ್ಟಣದ ಕೆಲ ನಿವಾಸಿಗಳು ಹಸಿಕಸ ಮತ್ತು ಒಣಕಸ ವಿಂಗಡಿಸುವ ಗೋಜಿಗೆ ಹೋಗದೆ ಸೀರೆ ಮತ್ತು ಉಡುಪಿನಿಂದ ಗಂಟು ಕಟ್ಟಿ ರಸ್ತೆ ಬದಿಗಳಲ್ಲಿ ಎಸೆಯುತ್ತಿರುವುದು ಕಸ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

‘ಕಸದ ವಾಹನಗಳು ಕೆಲವು ವಾರ್ಡ್‌ಗಳಲ್ಲಿ ಮುಂಜಾನೆ ಬರುತ್ತದೆ. ಮತ್ತೆ ಕೆಲವೆಡೆ ಮಧ್ಯಾಹ್ನ ಬರುತ್ತವೆ. ಕೆಲಸಕ್ಕೆ ಹೋಗುವವರು ಮಧ್ಯಾಹ್ನ ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ವಾಹನಕ್ಕೆ ಕಸ ಹಾಕಲು ಸಾಧ್ಯವಾಗುವುದಿಲ್ಲ. ಪ್ರತಿ ವಾರ್ಡ್‌ಗೂ ಪ್ರತ್ಯೇಕ ವಾಹನ ಮತ್ತು ನಿರ್ದಿಷ್ಟ ಸಮಯ ನಿಗದಿ ಮಾಡಬೇಕು’ ಎನ್ನುತ್ತಾರೆ ಮಾರುತಿ ನಗರದ ಜ್ಯೋತಿಲಕ್ಷ್ಮಿ.

ಪೌರಕಾರ್ಮಿಕರ ಕೊರತೆ

ನಗರದಲ್ಲಿ ನಾಲ್ಕು ಸಾವಿರ ಮನೆಗಳಿದ್ದು, ಕೇವಲ 3 ಕಸ ತುಂಬುವ ವಾಹನಗಳಿವೆ. ಸರ್ಕಾರದ ನಿಯಮದ ಪ್ರಕಾರ ಒಂದು ಸಾವಿರ ಮನೆಗೆ ಒಂದರಂತೆ ಕಸ ತುಂಬುವ ವಾಹನಗಳಿರಬೇಕು. ಪಟ್ಟಣದಲ್ಲಿ ಸದ್ಯ 24,462 ಜನಸಂಖ್ಯೆಯಿದೆ. 700 ಮಂದಿಗೆ ಒಬ್ಬ ಕಾರ್ಮಿಕರಿರಬೇಕು ಎಂಬ ನಿಯಮದ ಪ್ರಕಾರ 35ರಿಂದ 36 ನೌಕರರ ಅಗತ್ಯವಿದೆ. ಆದರೆ ಹಳೆಯ ಜನಗಣತಿ ಪ್ರಕಾರ 18,462 ಜನಸಂಖ್ಯೆಗನುಗುಣವಾಗಿ 28 ಮಂದಿ ಪೌರ ಕಾರ್ಮಿಕರಿದ್ದಾರೆ. ಅವರಲ್ಲಿ ಒಬ್ಬರಿಗೆ ಅನಾರೋಗ್ಯವಿದೆ. ಎರಡು, ಮೂರು ನೌಕರರು ರಜೆ ಪಡೆದರೆ ಉಳಿದ 23 ಅಥವಾ 24 ಮಂದಿ ಕೆಲಸಕ್ಕೆ ಹಾಜರಾಗುತ್ತಾರೆ. ಇನ್ನೂ 10 ಮಂದಿ ನೌಕರರ ಕೊರತೆಯಿದೆ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕಿ ವಿದ್ಯಾಶ್ರೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT