ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಕೇಂದ್ರದಲ್ಲಿ ರೈತರಿಗೆ ಕಿರುಕುಳ

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್‌ಗೆ ಕೃಷಿಕ ಸಮಾಜ ಮನವಿ
Last Updated 3 ಜನವರಿ 2021, 3:18 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ರಾಗಿ ಖರೀದಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ರೈತರೊಂದಿಗೆ ಅನಾಗರಿಕವಾಗಿ ವರ್ತಿಸುತ್ತಿದ್ದಾರೆ ಎಂದು ತಾಲ್ಲೂಕು ಕೃಷಿಕ ಸಮಾಜ ದೂರಿದೆ.

ರೈತರು ಹೆಸರು ನೋಂದಾಯಿಸಿಕೊಳ್ಳಲು ಅರ್ಜಿಗಳನ್ನು ತೆಗೆದುಕೊಂಡು ಹೋದರೆ ವಿನಾಕಾರಣ ತಪ್ಪು ಮಾಹಿತಿ ನೀಡುವುದು, ಒರಟಾಗಿ ಮಾತನಾಡುತ್ತಾರೆ.ಪದೇ ಪದೇ ಅಲೆದಾಡಿಸುವುದು ಮಾಡುತ್ತಾರೆ ಎಂದು ತಾಲ್ಲೂಕು ಕೃಷಿಕ ಸಮಾಜ ಆರೋಪಿಸಿದೆ.

ಕೃಷಿಕ ಸಮಾಜದ ಅಧ್ಯಕ್ಷ ಎಂ. ಗೋವಿಂದಪ್ಪ ನೇತೃತ್ವದಲ್ಲಿ ಪದಾಧಿಕಾರಿಗಳ ನಿಯೋಗ ಶನಿವಾರ ತಹಶೀಲ್ದಾರ್ ಹನುಮಂತರಾಯಪ್ಪ ಅವರನ್ನು ಭೇಟಿ ಮಾಡಿ ದೂರುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಸಲ್ಲಿಸಿತು.

ಹೆಸರು ನೋದಾಯಿಸಿಕೊಳ್ಳಲು ದಾಖಲೆಗಳೊಂದಿಗೆ ಕೇಂದ್ರಕ್ಕೆ ಹೋದ ರೈತರನ್ನು ಅನಾವಶ್ಯಕವಾಗಿ ಪದೇ ಪದೇ ವಾಪಸ್ ಕಳುಹಿಸಿ ಬ್ಯಾಂಕುಗಳಿಗೆ ತೆರಳಿ ಸೀಲು ಹಾಕಿಸಿಕೊಂಡು ಬನ್ನಿ. ತಂತ್ರಾಂಶ ಕೆಲಸ ಮಾಡುವುದಿಲ್ಲ ಎಂಬ ನೆಪ ಹೇಳಿಕೊಂಡು ಪ್ರತಿದಿನ ಸಂಜೆ 4 ಗಂಟೆಗೆ ಕೇಂದ್ರದ ಬಾಗಿಲು ಮುಚ್ಚುತ್ತಾರೆ. ಮೇಲಧಿಕಾರಿಗಳು ದೂರವಾಣಿ ಮೂಲಕ ತಿಳಿಸಿದರೆ ಸ್ಥಗಿತಗೊಂಡಿದ್ದ ತಂತ್ರಾಂಶ ಪ್ರಾರಂಭವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಈ ದಿನದ ಎಲ್ಲ ರೈತರ ದಾಖಲೆಗಳನ್ನು ಪಡೆದು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮೇಲಧಿಕಾರಿಗಳು ಆದೇಶ ನೀಡಿದಾಗ ಸಂಜೆ 6 ಗಂಟೆಯಾದರೂ ಸರ್ವರ್ ಲಾಕ್ ಆಗುವುದಿಲ್ಲ. ಇಲ್ಲದಿದ್ದರೆ 4 ಗಂಟೆಗೆ ಕಂಪ್ಯೂಟರ್ ಲಾಕ್ ಅಥವಾ ಸರ್ವರ್ ಲಾಕ್ ಆಗಿದೆ ಎಂದು ನೆಪ ಹೇಳಿ ರೈತರನ್ನು ವಿನಾಕಾರಣ ಅಲೆದಾಡಿಸುತ್ತಾರೆ ಎಂದು ದೂರಿದ್ದಾರೆ.

ಕೃಷಿ ಇಲಾಖೆ ಬೆಳೆ ದರ್ಶಕದಲ್ಲಿ ರಾಗಿ ಬೆಳೆ ಚಿತ್ರ ಇದ್ದರೂ ಖರೀದಿ ಕೇಂದ್ರದ ತಂತ್ರಾಂಶದಲ್ಲಿ ಬೆಳೆ ಚಿತ್ರ ಕಾಣುತ್ತಿಲ್ಲ ಎಂದು ರಾಗಿ ತೆಗೆದುಕೊಂಡು ಹೋದ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ. ರೈತರು ರಾಗಿಯನ್ನು ವಾಪಸ್ ತೆಗೆದುಕೊಂಡು ಹೋಗಿ ಮತ್ತೆ ತರಬೇಕಾದರೆ ಎಷ್ಟು ತೊಂದರೆಯಾಗುತ್ತದೆ ಎಂಬ ಕಿಂಚಿತ್ ಕಾಳಜಿ ಇಲ್ಲ ಎಂದು ಗೋವಿಂದಪ್ಪ ಅಧಿಕಾರಿಗಳ ವರ್ತನೆಯನ್ನು ಕಟುವಾಗಿ ಟೀಕಿಸಿದರು.

ತಹಶೀಲ್ದಾರ್ ಹನುಮಂತರಾಯಪ್ಪ ಮಾತನಾಡಿ, ರೈತರನ್ನು ಗೌರವದಿಂದ ಕಾಣುವಂತೆ ಹಾಗೂ ಉತ್ತಮ ಬಾಂಧವ್ಯವನ್ನು ಏರ್ಪಡಿಸಿಕೊಂಡು ಕೆಲಸ ನಿರ್ವಹಿಸುವಂತೆ ಕೇಂದ್ರದ ಅಧಿಕಾರಿಗಳಿಗೆ ಆದೇಶ ನೀಡುವುದಾಗಿ ಭರವಸೆ ನೀಡಿದರು.

ನಿರ್ದೇಶಕರಾದ ಎಂ.ಲಕ್ಷ್ಮಣರೆಡ್ಡಿ, ಕೆ.ಎನ್. ಕೃಷ್ಣಾರೆಡ್ಡಿ, ವಿ. ರೆಡ್ಡಪ್ಪ, ಆಂಜನೇಯರೆಡ್ಡಿ, ಎಂ.ಸಿ. ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ಕೋನಪ್ಪರೆಡ್ಡಿ, ಕೆ.ಎಸ್. ವೆಂಕಟೇಶ್ ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT