ಸೋಮವಾರ, ಮಾರ್ಚ್ 1, 2021
23 °C

‘ಹಾಸ್ಯಲೋಕ’ದಲ್ಲಿ ವಿಹರಿಸಿದ ಸಭಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಹಂಪಿ ಉತ್ಸವದಿಂದ ವಾಪಸ್ಸು ಬರುವಾಗ ಬಸ್‌ ಹತ್ತಬೇಕಿತ್ತು. ಬಸ್‌ನಲ್ಲಿ ಸೀಟು ಹಿಡಿಯಲು ಜನರು ತಲೆ ಮ್ಯಾಲಿನ ಟೋಪಿ, ಟವಲ್‌, ಕರವಸ್ತ್ರ ಹಾಕುತ್ತಿದ್ದರು. ಒಬ್ಬನಂತು ಪ್ಯಾಂಟೆ ಬಿಚ್ಚಿ ಸೀಟ್‌ಗೆ ಹಾಕಿದ್ದ. ಅಲ್ಲಿಯೇ ಇದ್ದ ವಿದೇಶಿ ಪ್ರವಾಸಿಗರೊಬ್ಬರು ಕೇಳಿದರು, ‘ಇದೇನ್‌ ವಾಷಿಂಗ್‌ ಮೆಷಿನ್‌ನಾ’. ಇಲ್ಲಮ್ಮ ಇದು ಸೀಟ್‌ ರಿಜರ್ವ್‌ ಮಾಡುವ ಪದ್ಧತಿ ಅಂತ ಅರ್ಥ ಮಾಡಿಸಿದೆ.

ಮೇಷ್ಟ್ರು ಒಬ್ಬರು ವಿದ್ಯಾರ್ಥಿಗಳಿಗೆ ಹಸು ಮತ್ತು ಕೂಸು ನಡುವಿನ ವ್ಯತ್ಯಾವೆನೆಂದು ಕೇಳಿದರಂತೆ. ಕೆಲವು ವಿದ್ಯಾರ್ಥಿಗಳು ಕಾಲು, ಕೊಂಬು, ಬಾಲದ ವ್ಯತ್ಯಾಸ ಇದೆ ಎಂದು ಉತ್ತರಿಸಿದ್ದರಂತೆ. ಆಗ ಒಬ್ಬ ಕಿಲಾಡಿ ಹುಡುಗ, ‘ಸರ್‌, ಹಸುವು ನೀರು ಕುಡಿದು ಹಾಲು ಕೊಡುತ್ತದೆ. ಕೂಸು ಹಾಲು ಕುಡಿದು ನೀರು ಬಿಡುತ್ತದೆ’ ಎಂದು ಉತ್ತರಿಸಿದ್ದನಂತೆ.

ಹಾಸ್ಯ ಲೋಕ ಟ್ರಸ್ಟ್‌ ಭಾನುವಾರ ಆಯೋಜಿಸಿದ್ದ ‘ನಗೆ ಉತ್ಸವ’ ಮತ್ತು ಟ್ರಸ್ಟ್‌ನ 24ನೇ ವಾರ್ಷಿಕೋತ್ಸವದಲ್ಲಿ ಕಲಾವಿದ ಬಸವರಾಜ್‌ ಬೆಣ್ಣಿ ಅವರು ಹೇಳಿದ ಇಂತಹ ಹತ್ತಾರು ನಗೆಹನಿಗಳಿಗೆ ಸಭಿಕರು ನಗುವಿನ ಕಡಲಿನಲ್ಲಿ ತೇಲಿದರು.

ಒಮ್ಮೆ ಹೆಂಡತಿ ಸಿಟ್ಟಾದಾಗ ಗೆಳೆಯ ಹೇಳಿದ ಮಾತು ನೆನಪಿಗೆ ಬಂತು. ‘ಹೆಂಡತಿಯನ್ನು ಹೊಗಳಿದರೆ ಸಿಟ್ಟು ಇಳಿಯುತ್ತದೆ’ ಅಂತ ಆತ ಹೇಳಿದ್ದ. ಸಿಟ್ಟಿನಲ್ಲಿದ್ದ ಹೆಂಡತಿ ಸಿಡುಕಿನಿಂದಲೇ ಹೊಳಿಗೆ, ತುಪ್ಪ, ಹಾಲು ಬಡಿಸಿದಳು. ಆಕೆಯನ್ನು ಹೊಗಳಲು, ‘ಏನ್‌ ರುಚಿಕಟ್ಟಾದ ಹೊಳಿಗೆ. ನಾನು ಮದುವೆಯಾಗಿ ಹದಿನೈದು ವರ್ಷಗಳಲ್ಲಿ ಇಂತಹ ಹೊಳಿಗೇನೆ ತಿಂದಿರಲಿಲ್ಲ’ ಎಂದಿದ್ದೆ ತಡ, ಅಡುಗೆ ಮನೆಯಿಂದ ಬಂದ ಲೋಟವೊಂದು ತಲೆಗೆ ಬಡಿಯಿತು. ವಿಚಾರಿಸಿದಾಗ, ‘ಎದುರು ಮನೆಯಾಕಿ ಮಾಡಿದ ಹೊಳಿಗೆಯ ಎಷ್ಟು ಚಂದವಾಗಿ ಹೊಗಳುತ್ತಿದ್ದಿರಲ್ಲ’ ಎಂದು ಹೆಂಡತಿ ಸಿಡುಕಿದಳು.

ಇಂತಹ ಹಾಸ್ಯ ಪ್ರಸಂಗಗಳನ್ನು ಪ್ರಸ್ತಾಪಿಸಿದ ಬಸವರಾಜ್‌ ಅವರು ಸೇರಿದ್ದ ಸಭಿಕರಿಗೆ ನಗುವನ್ನು ಉಣಬಡಿಸಿದರು.

ಕಲಾವಿದ ಪ್ರಹ್ಲಾದ್‌ ಆಚಾರ್ಯ ಅವರ ಜಾದೂ ಪ್ರದರ್ಶನ ಮಾಡಿ, ನೆರಳಿನಿಂದ ವಿವಿಧ ಆಕೃತಿಗಳನ್ನು ಸೃಷ್ಟಿಸಿ ಜನರ ಗಮನ ಸೆಳೆದರು. ಹಾಸ್ಯ ಕಲಾವಿದ ಕೆ.ಎಚ್‌.ನರಸಿಂಹರಾಜು ಅವರು ಮಿಮಿಕ್ರಿ ಮಾಡಿ ರಂಜಿಸಿದರು.

ಹಾಸ್ಯಲೋಕ ಟ್ರಸ್ಟ್ ಅಧ್ಯಕ್ಷ ಎಚ್‌.ಎನ್‌.ಶಂಕರಯ್ಯ, ನಮ್ಮ ಕಾರ್ಯಕ್ರಮಕ್ಕೆ ಈ ಹಿಂದೆ ನೂರಾರು ಜನರು ಬರುತ್ತಿದ್ದರು. ಟೆಲಿವಿಷನ್‌ನಿಂದಾಗಿ ಸಭಿಕರ ಸಂಖ್ಯೆ ಕ್ಷಿಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಟ್ರಸ್ಟ್‌ ಕಾರ್ಯದರ್ಶಿ ಟಿ.ಎಚ್‌.ಪ್ರಸನ್ನ ಕುಮಾರ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.