ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲಾ ಕಾಮಗಾರಿ ನಡುವೆಯೇ ಹರಿದ ಹೇಮೆ

ತಿಪಟೂರು: ಕೆಲವು ‌ಗ್ರಾಮಗಳಲ್ಲಿ ನೀರು ಸೋರಿಕೆ; ಆತಂಕದಲ್ಲಿ ಸ್ಥಳೀಯರು
Last Updated 10 ಆಗಸ್ಟ್ 2020, 4:44 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ನಾಲೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಈ ನಡುವೆಯೇ ತಡರಾತ್ರಿ ತುಮಕೂರಿನತ್ತ ಹೇಮಾವತಿ ನೀರು ಹರಿದಿದೆ.

ತುಮಕೂರು ನಾಲಾ ವ್ಯಾಪ್ತಿಯ 72 ಕಿ.ಮೀ ನಾಲೆ ಆಧುನೀಕರಣ ಕಾಮಗಾರಿಗೆ 2019ರ ಡಿಸೆಂಬರ್‌ನಲ್ಲಿ ₹ 475 ಕೋಟಿ ಮಂಜೂರಾಗಿತ್ತು. 2020ರ ಜನವರಿಯಲ್ಲಿ ಆಧುನೀಕರಣ ಕಾಮಗಾರಿಗೆ ಭೂಮಿಪೂಜೆ ನಡೆದಿತ್ತು.

70ರಿಂದ 166 ಕಿ.ಮೀ ವರೆಗಿನ ನಾಲೆ ಆಧುನೀಕರಣ ಕಾಮಗಾರಿಗೆ ₹ 550 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಹ ಸಲ್ಲಿಸಲಾಗಿದೆ.

ನಾಲೆಯಲ್ಲಿ ಹೂಳು ತುಂಬಿತ್ತು. ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದವು. ಇವುಗಳನ್ನು ತೆರವುಗೊಳಿಸಿ ನಾಲೆ ಅಭಿವೃದ್ಧಿಗೊಳಿಸಿದರೆ ನೀರು ಸರಾಗವಾಗಿ ಹರಿಯುತ್ತದೆ. ಪೋಲಾಗುವುದಿಲ್ಲ ಎನ್ನುವ ಉದ್ದೇಶದಿಂದ ನಾಲೆ ಆಧುನೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಮಳೆಗಾಲದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದುಕೊಂಡಿದ್ದರು. ಕಾಮಗಾರಿ ಪೂರ್ಣಗೊಳ್ಳದ ಕಾರಣ ಹಲವು ಗ್ರಾಮಗಳ ಬಳಿ ನಾಲೆ ಸೋರಿಕೆ ಆರಂಭವಾಗಿದೆ. ಬಿರುಕುಬಿಡುವ ಸಾಧ್ಯತೆ ಹೆಚ್ಚಾಗಿದೆ. ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಕಲ್ಲಯ್ಯನಪಾಳ್ಯ, ನಾರಸೀಕಟ್ಟೆ (ನಾಸೀಕಟ್ಟ್ಟೆ), ಹೋಗವನಘಟ್ಟ, ರಾಮಡಿಹಳ್ಳಿ, ಹುಚ್ಚನಹಳ್ಳಿ ಗ್ರಾಮದ ಬಳಿ ಕಾಮಗಾರಿ ಅಪೂರ್ಣವಾಗಿದೆ. ಈಗಾಗಲೇ ನಾಲೆಯಲ್ಲಿ ನೀರು ಹರಿಯಲು ಪ್ರಾರಂಭಿಸಿದೆ. ನೀರಿನ ಸೋರಿಕೆಯೂ ಹೆಚ್ಚಾಗಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಗುತ್ತಿಗೆದಾರರು ಮತ್ತು ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ನಾಲೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ನಾಲೆಯ ಹಲವು ಕಡೆ ಹೂಳು ತೆಗೆದಿಲ್ಲ. ಹೋಗವನಘಟ್ಟದಿಂದ ದಾಸಿಹಳ್ಳಿ ರಸ್ತೆ ಮಧ್ಯದಲ್ಲಿರುವ ಸೇತುವೆಯ ಬಲಭಾಗದಲ್ಲಿ 200 ಮೀಟರ್ ಕಾಮಗಾರಿ ಅಪೂರ್ಣಗೊಂಡಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT