ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಎಚ್.ಎಸ್.ಶಿವಪ್ರಕಾಶ್ ಆಯ್ಕೆ

Published 28 ನವೆಂಬರ್ 2023, 4:29 IST
Last Updated 28 ನವೆಂಬರ್ 2023, 4:29 IST
ಅಕ್ಷರ ಗಾತ್ರ

ತುಮಕೂರು: 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕವಿ, ನಾಟಕಕಾರ, ವಿಮರ್ಶಕ ಎಚ್.ಎಸ್.ಶಿವಪ್ರಕಾಶ್ ಅವರು ಆಯ್ಕೆ ಆಗಿದ್ದಾರೆ. ನಗರದ ಹೊರಪೇಟೆಯಲ್ಲಿ ಹುಟ್ಟಿ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಮೇರು ಸ್ಥಾನಕ್ಕೇರಿದ್ದಾರೆ.

ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಡಿ.15 ಹಾಗೂ 16ರಂದು ನಗರದ ಗಾಜಿನ ಮನೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯಲಿದೆ.

ಎಚ್.ಎಸ್.ಶಿವಪ್ರಕಾಶ್‍ ಅವರು 1954ರಲ್ಲಿ ನಗರದ ಹೊರಪೇಟೆಯಲ್ಲಿ ಶಿವಮೂರ್ತಿ ಶಾಸ್ತ್ರಿಗಳ ದ್ವಿತೀಯ ಪುತ್ರರಾಗಿ ಜನಿಸಿದರು. ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 2011ರಿಂದ 2014ರ ವರೆಗೆ ಜರ್ಮನ್ ದೇಶದ ಬರ್ಲಿನ್‍ನಲ್ಲಿರುವ ರವೀಂದ್ರನಾಥ ಠಾಗೂರ್ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕೃಷಿ: ಮಿಲೆರೆಪಾ, ಮಳೆಬಿದ್ದ ನೆಲದಲ್ಲಿ, ಅನುಕ್ಷಣ ಚರಿತೆ, ಸೂರ್ಯಜಲ, ಮಳೆಯ ಮಂಟಪ, ಮತ್ತೆ ಮತ್ತೆ, ಮಬ್ಬಿನ ಹಾಗೆ ಕಣಿವೆ ಹಾಸಿ ಪ್ರಮುಖ ಕವನ ಸಂಕಲನಗಳು. ಮಹಾಚೈತ್ರ, ಸುಲ್ತಾನ್ ಟಿಪ್ಪು, ಷೇಕ್ಸ್‌ಪಿಯರ್ ಸ್ವಪ್ನನೌಕೆ, ಮಂಟೇಸ್ವಾಮಿ ಕಥಪ್ರಸಂಗ, ಮಾದಾರಿ ಮಾದಯ್ಯ, ಮಧುರೆಕಾಂಡ, ಮಾಧವಿ, ಮಾತೃಕಾ, ಮಕರಚಂದ್ರ, ಸತಿ, ಚಸ್ಸಂದ್ರ, ಮದುವೆ ಹೆಣ್ಣು ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬತ್ತೀಸ ರಾಗ (ಆತ್ಮ ಚರಿತ್ರೆ), ಸಾಹಿತ್ಯ ಮತ್ತು ರಂಗಭೂಮಿ, ಮೊದಲ ಕಟ್ಟಿನ ಗದ್ಯ, ಯುಗಾಂತ ಕೃತಿಗಳು ಹೊರ ಬಂದಿವೆ.

ಗೌರವ: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಶಿವಪ್ರಕಾಶ್ ಅವರ ಮುಡಿಗೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT