ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಹೊಟ್ಟೆಪಾಡಿಗಾಗಿ ರಾಜಕೀಯಕ್ಕೆ ಬಂದಿಲ್ಲ: ಶಾಸಕ ಎಸ್‌.ಆರ್ ಶ್ರೀನಿವಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ: ‘ನಾನು ಹೊಟ್ಟೆಪಾಡಿಗಾಗಿ ರಾಜಕೀಯಕ್ಕೆ ಬಂದಿಲ್ಲ. ಜನಸೇವೆಯ ಉದ್ದೇಶದಿಂದ ರಾಜಕೀಯದಲ್ಲಿದ್ದೇನೆ. ರಾಜಕೀಯಕ್ಕೆ ಬರುವ ಮೊದಲೂ ಆದಾಯ ತೆರಿಗೆ ಪಾವತಿಸುತ್ತಿದ್ದೆ’ ಎಂದು ಶಾಸಕ ಎಸ್‌.ಆರ್ ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟರ ಭೂಮಿ ಕಬಳಿಸಿದ ಸಂಸದ ಬಸವರಾಜು ಹಾಗೂ ಅವರ ಹಿಂಬಾಲಕ ಕುಂದರನಹಳ್ಳಿ ರಮೇಶ್ ರಾಜಕಾರಣವನ್ನೇ ಉದ್ಯೋಗ ಮಾಡಿಕೊಂಡು ಹೊಟ್ಟೆಪಾಡು ನಡೆಸುವ ಭೂಗಳ್ಳರು ಎಂದು ಆರೋಪಿಸಿದರು.

‘ಎಚ್‌ಎಎಲ್ ಮತ್ತು ಎಳನೀರು ಕಾರ್ಖಾನೆ ಹೆಸರಿನಲ್ಲಿ ಪರಿಶಿಷ್ಟರ ಭೂಮಿ ಕಬಳಿಸಿದ್ದಾರೆ. ಡೆವೆಲಪ್‌ಮೆಂಟ್‌ ರೆವ್ಯುಲ್ಯುಷೇನ್ ಫೋರಂ ಹೆಸರಿನಲ್ಲಿ ಲೂಟಿ ಮಾಡಿದ್ದಾರೆ. ಇಂತಹವರ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂಸದರು ನಂದಿಹಳ್ಳಿಯಲ್ಲಿ ಚರ್ಚಿಸಿದ ವಿಚಾರವೇ ಬೇರೆ, ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ದಾಖಲೆಯೇ ಬೇರೆ. ಕೆಆರ್‌ಎಸ್ ಮಾದರಿ ಡ್ಯಾಂ ನಿರ್ಮಿಸಿ ಭೂಮಿ ಬಿಟ್ಟುಕೊಟ್ಟ ರೈತರಿಗೆ ಎಕರೆಗೆ ₹1 ಕೋಟಿ ಪರಿಹಾರ ನೀಡುವ ಬಗ್ಗೆ ಅವರು ಮಾತನಾಡುತ್ತಿದ್ದಾಗ ನಾನು ಆಕ್ಷೇಪಿಸಿ, ರೈತರಿಗೆ ಆ ಮಟ್ಟದ ಪರಿಹಾರ ದಕ್ಕದು ಎಂದು ಗೌರವಯುತವಾಗಿ ಹೇಳಿದ್ದೆ. ಆದರೆ ನನ್ನ ಮೇಲೆ ಹರಿಹಾಯ್ದ ಸಂಸದರು ಏಕವಚನ ಪ್ರಯೋಗಿಸಿದ್ದರು. ಜಟಾಪಟಿಗೆ ಯಾರು ಕಾರಣ ಎನ್ನುವುದು ಎಲ್ಲರಿಗೂ ತಿಳಿದಿದೆ’ ಎಂದು ಸ್ಪಷ್ಟಪಡಿಸಿದರು.

‘ಸ್ವಜಾತಿಯ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಸಂಸದರು, ಲಿಂಗಾಯತರ ಮನೆಗಳ ಮೇಲೆಯೇ ಕಲ್ಲು ಎಸೆದು ಗುಂಪು ರಾಜಕಾರಣ ಮಾಡುತ್ತಿದ್ದಾರೆ. ನಾನು ಶಾಸಕನಾದ ಬಳಿಕ ಗುಂಪು ಮತ್ತು ದ್ವೇಷ ರಾಜಕಾರಣಕ್ಕೆ ಆಸ್ಪದ ನೀಡಿಲ್ಲ’ ಎಂದು ಹೇಳಿದರು.

‘ಇಲ್ಲಸಲ್ಲದ ಯೋಜನೆ ಹೆಸರು ಹೇಳಿ ಚುನಾವಣೆ ನಡೆಸುವ ಸಂಸದರ ಮಾತು ಕೇಳಿ ಭೂಮಿ ಕಳೆದುಕೊಂಡ ಬಡ ರೈತರು ಕೋಟಿ ರೂಪಾಯಿ ಪರಿಹಾರಕ್ಕೆ ನನ್ನ ಮನೆ ಬಳಿ ಬರುತ್ತಾರೆ. ಈ ಬಗೆಯ ಸುಳ್ಳು ಭರವಸೆ ವಿಚಾರಕ್ಕೆ ವಿರೋಧ ಮಾಡಿದ್ದೆ. ರೈತರಿಗೆ ಸಲ್ಲದ ಆಸೆ ತೋರಿಸುವುದು ತರವಲ್ಲ. ಮಂಕುಬೂದಿ ಎರಚುವ ಕಾಯಕ ಅವರಿಗೆ ಕರಗತವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು