ಗುರುವಾರ , ಮಾರ್ಚ್ 23, 2023
29 °C

ಹಾಗಲವಾಡಿ ಕೆರೆಯಲ್ಲಿ ಆಂಜನೇಯ ಸ್ವಾಮಿ ವಿಗ್ರಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಗಲವಾಡಿ: ಗ್ರಾಮದ ದೊಡ್ದ ಕೆರೆಯಲ್ಲಿ ಆಂಜನೇಯ ಸ್ವಾಮಿ ವಿಗ್ರಹ ಸಿಕ್ಕಿದೆ. ತೋಟಕ್ಕೆ ಮಣ್ಣು ತೆಗೆಯುವಾಗ ಈ ವಿಗ್ರಹ ಪತ್ತೆಯಾಗಿದೆ.

ಈ ಆಂಜನೇಯ ಸ್ವಾಮಿ ವಿಗ್ರಹವು ಹಾಗಲವಾಡಿ ಪಾಳೇಗಾರ ರಾಮಪ್ಪ ನಾಯಕನ ಕಾಲದ್ದಾಗಿರಬಹುದು. 15ನೇ ಶತಮಾನ ಅಂದರೆ ಇನ್ನೂರು ವರ್ಷಗಳ ಹಳೆಯ ವಿಗ್ರಹ ಇದಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಸಂಶೋಧಕ ಅಮ್ಮನಘಟ್ಟ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

ಈ ವಿಗ್ರಹವು ಸುಮಾರು 3 ಅಡಿ ಎತ್ತರ, 2 ಅಡಿ ಅಗಲವಿದೆ. ಶಿಲ್ಪದ ರಚನೆಗೆ ಬಣ್ಣದ ಬಳಪದ ಕಲ್ಲು ಬಳಸಲಾಗಿದೆ. ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದೆ.

ವಿಗ್ರಹ ಆಕರ್ಷಣೀಯವಾಗಿದ್ದು, ಅಲ್ಲಲ್ಲಿ ಚಕ್ಕೆಗಳು ಎದ್ದು ಭಿನ್ನವಾಗಿದೆ. ಆಂಜನೇಯ ದಕ್ಷಿಣಕ್ಕೆ ಮುಖ ಮಾಡಿದ್ದು, ಎಡಗಾಲನ್ನು ಮುಂದಕ್ಕಿಟ್ಟು ಬಲಗಾಲನ್ನು ಹಿಂದೆ ಇಟ್ಟು ಭದ್ರವಾಗಿ ಪೀಠದ ಮೇಲೆ ಊರಿದ್ದಾನೆ. ಬಲಗೈಯನ್ನು ಮೇಲೆತ್ತಿ ಎಡಗೈಯಲ್ಲಿ ಸೌಗಂಧಿಕ ಪುಷ್ಪ ಹಿಡಿದಿದ್ದಾನೆ. ಕಂಠಿಹಾರ, ಕೊರಳಹಾರ ಧರಿಸಿದ್ದಾನೆ. ಬಾಲವು ಹಿಂದಿನಿಂದ ಬಲಗೈಯನ್ನು ಒಳಮುಖ ಮಾಡಿಕೊಂಡು ತಲೆಯನ್ನು ಬಳಸಿಕೊಂಡು ಹಣೆಯ ಭಾಗದವರೆಗೂ ಬಂದಿದೆ. ಬಾಲದ ತುದಿಯಲ್ಲಿ ಗಂಟೆಯಿದೆ. ಶಿಲ್ಪದ ಸುತ್ತಲೂ ಆಕರ್ಷಕ ಪ್ರಭಾವಳಿ ಇದ್ದು ಭಗ್ನಗೊಂಡಿದೆ. ಅಲಂಕಾರಿಕ ಮಾಲೆಯನ್ನು ಹೊಂದಿದ್ದು ಕೆಳಭಾಗದಲ್ಲಿ ಕಾಲುಗಳ ಮಧ್ಯದಲ್ಲಿ ಅಕ್ಷಯ ಕುಮಾರದಿದ್ದಾನೆ.

ಪಾಳೇಗಾರರ ಕಾಲದಲ್ಲಿ ರಾಜಧಾನಿಯಾಗಿದ್ದ ಹಾಗಲವಾಡಿಯಲ್ಲಿ ಕೋಟೆ ಕೊತ್ತಲಗಳು, ದೇವಾಲಯ, ಕಲ್ಯಾಣಿ, ಶಾಸನಗಳಿವೆ. ಈ ಹಿಂದೆ ಸಿಕ್ಕಿದ್ದ ಹೊಯ್ಸಳರ ಕಾಲದ ಜನಾರ್ದನ ಮೂರ್ತಿಯನ್ನು ಸಂರಕ್ಷಿಸಲಾಗಿದೆ. ಈಗ ಸಿಕ್ಕಿರುವ ಹನುಮನ ಮೂರ್ತಿಯನ್ನು ಸಂರಕ್ಷಿಸಬೇಕಿದೆ. ಇಲ್ಲಿ ಇನ್ನೂ ಹೆಚ್ಚಿನ ಪ್ರಾಚ್ಯ ಅವಶೇಷ ಸಿಗುವ ಸಾಧ್ಯತೆಯಿದ್ದು, ಪುರಾತತ್ವ ಇಲಾಖೆ ಗಮನ ಹರಿಸಬೇಕು ಎಂದು ಅಮ್ಮನಘಟ್ಟ ಶ್ರೀನಿವಾಸ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು