ಕನ್ನಡಿಗರಿಂದಲೇ ಕನ್ನಡಕ್ಕೆ ಧಕ್ಕೆ: ನಟ ಎಸ್‌.ಶಿವರಾಂ ಕಳವಳ

7
ಊರ್ಡಿಗೆರೆ ಹೋಬಳಿ ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡಿಗರಿಂದಲೇ ಕನ್ನಡಕ್ಕೆ ಧಕ್ಕೆ: ನಟ ಎಸ್‌.ಶಿವರಾಂ ಕಳವಳ

Published:
Updated:
Deccan Herald

ತುಮಕೂರು: ‘ಕನ್ನಡಿಗರಿಂದಲೇ ಕನ್ನಡ ಭಾಷೆಗೆ ಧಕ್ಕೆ ಆಗುತ್ತಿದೆ’ ಎಂದು ಚಲನಚಿತ್ರ ನಟ ಎಸ್‌.ಶಿವರಾಂ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಊರ್ಡಿಗೆರೆ ಹೋಬಳಿ ಸೀತಕಲ್ಲು ಗ್ರಾಮದಲ್ಲಿ ತಾಲ್ಲೂಕು ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಸೀತಕಲ್ಲು ಹೊರ ನಿವಾಸಿಗಳ ಒಕ್ಕೂಟ ಶುಕ್ರವಾರ ಹಮ್ಮಿಕೊಂಡಿದ್ದ ಊರ್ಡಿಗೆರೆ ಹೋಬಳಿ ಮಟ್ಟದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ತಮಿಳುನಾಡು, ಆಂಧ್ರಪ್ರದೇಶ ಹೀಗೆ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಯನ್ನೇ ಬಳಕೆ ಮಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಜನರ ಧೋರಣೆ ವಿರುದ್ಧವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಮನೆ ಭಾಷೆ ಬೇರೆ ಆಗಿರಬಹುದು. ಆದರೆ ಕರ್ನಾಟಕದ ಭಾಷೆ ಒಂದೇ ಅದು ಕನ್ನಡ. ನಾವೆಲ್ಲ ತಾಯಿ ಭುವನೇಶ್ವರಿಯ ಮಕ್ಕಳು. ನಾವು ಕನ್ನಡಕ್ಕೆ ದ್ರೋಹ ಬಗೆದರೆ ಹೇಗೆ’ ಎಂದು ಪ್ರಶ್ನಿಸಿದರು.

ಮನೆ ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ಏನೇ ಆಗಿದ್ದರೂ ಕರ್ನಾಟಕದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡಿಗರೇ. ಕನ್ನಡ ಭಾಷೆ, ನೆಲ ಜಲದ ವಿಚಾರವಾಗಿ ತಾರತಮ್ಯ ಇರಬಾರದು. ಭಾಷೆಗೆ ಧಕ್ಕೆ ಉಂಟಾದ ಸಂದರ್ಭದಲ್ಲಿ ಒಗ್ಗಟ್ಟು ಮೆರೆಯಬೇಕು ಎಂದು ಸಲಹೆ ನೀಡಿದರು.

ರಂಗಕರ್ಮಿಯೊಬ್ಬರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಭಾಷೆಯ ಬೆಳೆವಣಿಗೆಯಲ್ಲಿ ನಾಟಕಗಳ ಪಾತ್ರ ಮಹತ್ವದ್ದು ಎಂದು ಹೇಳಿದರು.

ಸಮಾರಂಭಕ್ಕೂ ಮುನ್ನ ಭುವನೇಶ್ವರಿದೇವಿ ಮತ್ತು ಸಮ್ಮೇಳನಾಧ್ಯಕ್ಷ  ಸೀತಕಲ್ಲು ಕೃಷ್ಣಯ್ಯ ಅವರ ಮೆರವಣಿಗೆ ನಡೆಯಿತು. ವೀರಗಾಸೆ, ನಂದಿಧ್ವಜ, ಕೋಲಾಟ, ನಗಾರಿ, ಸೋಮನಕುಣಿತ, ಗಾರುಡಿಗ ಗೊಂಬೆ ಹಾಗೂ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು.

ಸಮ್ಮೇಳಾನಾಧ್ಯಕ್ಷ ಸೀತಕಲ್ಲು ಕೃಷ್ಣಯ್ಯ ಅವರ ಬದುಕು, ಬರಹ, ಜೀವನ, ಕಲಾಸೇವೆ ಕುರಿತಂತೆ ವಿಚಾರಗೋಷ್ಠಿಗಳು ನಡೆದವು.

ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ ರಾಷ್ಟ್ರೀಯ ಘಟಕದ ಅಧ್ಯಕ್ಷ ಟಿ.ಬಿ.ಶೇಖರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಿ.ಸಿ.ಶೈಲಾ ನಾಗರಾಜು, ಶಾಸಕ ಡಿ.ಸಿ.ಗೌರಿಶಂಕರ್, ಎಸ್.ಜಿ.ಚಂದ್ರಮೌಳಿ, ಜಿ.ಎಸ್.ಸೋಮಣ್ಣ, ಸೀತಕಲ್ಲು ಹೊರನಿವಾಸಿಗಳ ಸಂಘದ ಅಧ್ಯಕ್ಷ ಎಸ್.ಎಂ.ಸಿದ್ದಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !