ಗುರುವಾರ , ಡಿಸೆಂಬರ್ 5, 2019
22 °C
14ರಂದು ಸಹಕಾರಿ ಸಪ್ತಾಹ ಉದ್ಘಾಟನೆ; ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ

‘ಯಶಸ್ವಿನಿ’ ಮುಂದುವರಿಕೆ; ಸಿ.ಎಂ ಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ನಗರದಲ್ಲಿ ನ.14ರಂದು ನಡೆಯಲಿರುವ ಸಹಕಾರಿ ಸಪ್ತಾಹ ಉದ್ಘಾಟನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ‘ಯಶಸ್ವಿನಿ’ ಆರೋಗ್ಯ ವಿಮೆ ಯೋಜನೆಯನ್ನು ಮತ್ತೆ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿ ಅವರನ್ನು ಕೋರಲಾಗುವುದು ಎಂದು ಅಪೆಕ್ಸ್ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಶಸ್ವಿನಿ ಜಾರಿಯಿಂದ ಹಳ್ಳಿಗಾಡಿನ ರೈತರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಲಾಗುವುದು. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸುವರು ಎನ್ನುವ ಭರವಸೆ ಇದೆ’ ಎಂದರು.

ರಾಜ್ಯ ಮಟ್ಟದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದವರನ್ನು ಗುರುತಿಸಿ ‘ಸಹಕಾರಿ ರತ್ನ’ ಪ್ರಶಸ್ತಿ ನೀಡಲಾಗುತ್ತದೆ. ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಕಾರ್ಯಕ್ರಮ ನಡೆಯುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವಷ್ಟೇ ಅಲ್ಲದೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸೇರಿದಂತೆ ಜಿಲ್ಲೆಯ ಸಹಕಾರಿ ಕ್ಷೇತ್ರದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯಿಂದಲೇ 17ರಿಂದ 20 ಸಾವಿರ ಸಹಕಾರಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.

ಮೆಗಾ ಡೇರಿ: ಜಿಲ್ಲೆಯಲ್ಲಿ ನಿತ್ಯ 6ರಿಂದ 7 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಯಲ್ಲಿ ಮೆಗಾ ಡೇರಿ ಸ್ಥಾಪಿಸಬೇಕು. ಇದರಿಂದ ರೈತರ ಆರ್ಥಿಕ ಅಭಿವೃದ್ಧಿ ಸಾಧ್ಯ. ಕಾರ್ಯಕ್ರಮದಲ್ಲಿ ಮೆಗಾ ಡೇರಿ ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಈ ವಿಚಾರವಾಗಿ ಅವರು ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

164 ಕೋಟಿ ಬಾಕಿ: ಸಾಲ ಮನ್ನಾ ಯೋಜನೆಯಡಿ ಡಿಸಿಸಿ ಬ್ಯಾಂಕ್‌ಗೆ ಇನ್ನೂ 164 ಕೋಟಿ ಬಾಕಿ ಬರಬೇಕಾಗಿದೆ. ಜಿಲ್ಲೆಯಲ್ಲಿ 4 ಲಕ್ಷ ರೈತ ಕುಟುಂಬಗಳು ಇವೆ. ಇದರಲ್ಲಿ ಈಗಾಗಲೇ 1.31 ಲಕ್ಷ ರೈತ ಕುಟುಂಬಗಳು ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದಿವೆ. ಸಾಲ ಪಡೆಯದ ಬಹುತೇಕ ರೈತರ ಪಹಣಿ, ಖಾತೆಯಲ್ಲಿ ಅವರ ಅಜ್ಜಂದಿಗೆ ಹೆಸರು ಇದೆ. ಈ ಕಾರಣಕ್ಕೆ ಅವರಿಗೆ ಸಾಲ ನೀಡಲು ವಿಳಂಬವಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಹಳ್ಳಿಗಳಲ್ಲಿ ವಾಯಿದೆ ಸಾಲ ಎಂದು ಕೊಡುತ್ತಿದ್ದರು. ಮರುಪಾವತಿಯ ಗಡುವು ಮುಗಿದರೆ ಅಡ ಇಟ್ಟುಕೊಂಡಿದ್ದ ವಸ್ತು, ಜಮೀನು ಹಣ ನೀಡಿದವನ ಪಾಲಾಗುತ್ತಿತ್ತು. ಇಂತಹವುಗಳು ಬಡವರಿಗೆ ಮಾತ್ರ ಗೊತ್ತು. ಇಂತಹದ್ದನ್ನೆಲ್ಲ ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕೆ ಎಲ್ಲ ಬಡವರಿಗೂ ಸಾಲ ದೊರೆಯಬೇಕು ಎನ್ನುವುದು ನನ್ನ ಉದ್ದೇಶ ಎಂದು ವಿವರಿಸಿದರು.

ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ, ರಾಜೇಂದ್ರ ಗೋಷ್ಠಿಯಲ್ಲಿ ಇದ್ದರು.

**

‘ಪ್ರಜಾವಾಣಿ’ ನೋಡಿ

ಡಿಸಿಸಿ ಬ್ಯಾಂಕ್‌ನಿಂದ ಈ ಹಿಂದೆ ಹಕ್ಕಿ‍ಪಿಕ್ಕಿ ಸಮುದಾಯಗಳು ಸೇರಿದಂತೆ ಕೆಲ ಸಣ್ಣ ಪುಟ್ಟ ಸಮುದಾಯಗಳಿಗೂ ಸಾಲ ನೀಡಿದ್ದೀರಿ. ಇದು ಸದುಪಯೋಗವಾಗಿದೆಯೇ ಎನ್ನುವ ಪ್ರಶ್ನೆಗೆ ಕೆ.ಎನ್.ರಾಜಣ್ಣ ಅವರು, ‘ಪ್ರಜಾವಾಣಿ’ ಓದಿ ಎಂದು ಉತ್ತರಿಸಿದರು.

ಸಾಲ ಕೊಟ್ಟಿದ್ದು ಮತ್ತು ಅದು ಅನುಕೂಲವಾದ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸುದ್ದಿ ಮತ್ತು ಲೇಖನಗಳು ಬಂದಿವೆ. ಬೇಕಿದ್ದರೆ ನಾನೇ ವಾಹನ ವ್ಯವಸ್ಥೆ ಮಾಡಿಕೊಡುವ ನೀವು ಆ ಸ್ಥಳಕ್ಕೆ ಹೋಗಿ ನೋಡಿಕೊಂಡು ಬರಬಹುದು ಎಂದು ಹೇಳಿದರು.

***

ಚಿನ್ನಾಭರಣ; ಡಿಸಿಸಿ ಸಾಲ

ಹಳ್ಳಿಗಳಲ್ಲಿ ವಿವಿಧ ಖಾಸಗಿ ಬ್ಯಾಂಕುಗಳಿಂದ ಸಾಲ ಪಡೆದು ರೈತರು ಶೋಷಣೆಗೆ ಒಳಗಾಗುತ್ತಿದ್ದಾರೆ. ಖಾಸಗಿಯವರು ಬಡವರ ಬಂಗಾರ ಅಡವಿಟ್ಟುಕೊಂಡು ಶೇ 30ರಿಂದ 36 ರಷ್ಟು ಬಡ್ಡಿ ವಿಧಿಸುತ್ತಿದ್ದಾರೆ. ಭೂಮಿ ಹೊಂದಿರುವ ರೈತರು ಡಿಸಿಸಿ ಬ್ಯಾಂಕಿನಿಂದ ಸಾಲ ಪಡೆದರೆ ಶೇ 11 ಮತ್ತು ಭೂಮಿ ಇಲ್ಲದವರಿಗೆ ಶೇ 12ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಿದೆ ಎಂದು ರಾಜಣ್ಣ ತಿಳಿಸಿದರು.

ಮುತ್ತೂಟ್, ಮಣಪ್ಪುರಂ ಖಾಸಗಿ ಬ್ಯಾಂಕುಗಳು ರೈತರಿಗೆ ಹೆಚ್ಚು ಬಡ್ಡಿ ವಿಧಿಸುತ್ತಿವೆ. ಡಿಸಿಸಿ ಬ್ಯಾಂಕುಗಳೇ ರೈತರಿಗೆ ಚಿನ್ನ ಅಡವಿಟ್ಟುಕೊಂಡು ಸಾಲ ನೀಡುವುದರಿಂದ ಈ ಬ್ಯಾಂಕುಗಳು ಜಿಲ್ಲೆಯಿಂದ ಕದಲುತ್ತವೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)