ಒಂದೂವರೆ ತಿಂಗಳಲ್ಲಿ ಮಾರ್ಕಂಡಯ್ಯ ಯೋಜನೆ ಪೂರ್ಣ: ಕೃಷ್ಣಬೈರೇಗೌಡ

7
ಜಿಲ್ಲಾ ಉಸ್ತವಾರಿ ಸಚಿವರಿಂದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಒಂದೂವರೆ ತಿಂಗಳಲ್ಲಿ ಮಾರ್ಕಂಡಯ್ಯ ಯೋಜನೆ ಪೂರ್ಣ: ಕೃಷ್ಣಬೈರೇಗೌಡ

Published:
Updated:
Deccan Herald

ಮಾಲೂರು: ತಾಲ್ಲೂಕಿನ 165 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಾರ್ಕಂಡಯ್ಯ ಕುಡಿಯುವ ನೀರಿನ ಯೋಜನೆಯನ್ನು ಒಂದೂವರೆ ತಿಂಗಳೊಳಗೆ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಪಟ್ಟಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ತಾಲ್ಲೂಕು ಆಡಳಿತ ಶನಿವಾರ ಹಮ್ಮಿಕೊಂಡಿದ್ದ ₹ 25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಾಸಕ ಕೆ.ವೈ.ನಂಜೇಗೌಡ ಅವರು, ನನ್ನನ್ನು ಸೇರಿದಂತೆ ಎಲ್ಲ ಇಲಾಖೆಗಳ ಸಚಿವರ ಬಳಿ ತಾಲ್ಲೂಕಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಒತ್ತಾಯಿಸಿದ್ದಾರೆ. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾರ್ಕಂಡಯ್ಯ ಕುಡಿಯುವ ನೀರಿನ ಯೋಜನೆಗೆ ಚಾಲನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದರು.

‘ಸುಮಾರು ₹ 40 ಕೋಟಿ ಈ ಯೋಜನೆಗೆ ವೆಚ್ಚವಾಗಲಿದೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ನೆನಪಿನಲ್ಲಿ ಮಾಸ್ತಿ ಗ್ರಾಮದಲ್ಲಿ ಮಾಸ್ತಿ ವಸತಿ ಶಾಲೆ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಕೋಚಿಮುಲ್ ಅಧ್ಯಕ್ಷರು ಆಗಿರುವ ಶಾಸಕ ನಂಜೇಗೌಡರು ರಾಜ್ಯದಲ್ಲೆ ₹ 2.50 ಕೋಟಿ ವೆಚ್ಚದಲ್ಲಿ ತಾಲ್ಲೂಕು ಮಟ್ಟದಲ್ಲಿ ಶಿಬಿರ ಕಚೇರಿ ಹಾಗೂ ವಿಶಾಲವಾದ ಉದ್ಯಾನ ನಿರ್ಮಿಸಿರುವುದು ಅವರ ಅಭಿವೃದ್ಧಿಯ ಆಸಕ್ತಿಗೆ ನಿರ್ದಶನವಾಗಿದೆ’ ಎಂದು ಪ್ರಶಂಸಿಸಿದರು. 

‘ಜಿಲ್ಲೆಯ ಜನರ ಜೀವ ನಾಡಿಯಾಗಿರುವ ಹೈನುಗಾರಿಕೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ನಂಜೇಗೌಡ ಅವರು ದೇಶದ ಇತರ ರಾಜ್ಯಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚು ಹಾಲು ಸರಬರಾಜು ಮಾಡುವ ಮೂಲಕ ಉತ್ಪಾದಕರರನ್ನು ಆರ್ಥಿಕವಾಗಿ ಸದೃಢರಾಗುವಂತೆ ನೋಡಿಕೊಳ್ಳಬೇಕು’ ಎಂದರು.

ಸಂಸದ ಕೆ.ಎಚ್. ಮುನಿಯಪ್ಪ ಮಾತನಾಡಿ, ‘ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಕೆಸಿ ವ್ಯಾಲಿ ಯೋಜನೆಯಲ್ಲಿ 3ನೇ ಹಂತದಲ್ಲಿ ಶುದ್ಧೀಕರಣ ಮಾಡಬೇಕು ಎಂದು ಮುಖ್ಯಮಂತ್ರಿ ಅವರ ಬಳಿ ಈಗಾಗಲೇ ಮನವಿ ಮಾಡಲಾಗಿದೆ. ಇದರಿಂದ ಜಾನವಾರುಗಳು ಕೆರೆಗಳಲ್ಲಿ ನೀರು ಕುಡಿಯಲು ಅನುಕೂಲವಾಗುತ್ತದೆ’ ಎಂದು ನುಡಿದರು.

‘ನಗರ ಪ್ರದೇಶದ ಮಕ್ಕಳ ಜೊತೆ ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಸ್ಪರ್ಧೆ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕು ಎಂದು ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಕೋಲಾರ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಆಶ್ರಮ ಶಾಲೆಗಳನ್ನು ತೆರೆಯಲು ಅನುದಾನ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ತಾಲ್ಲೂಕಿನ ಯಲವಳ್ಳಿ ಗ್ರಾಮ ಮತ್ತು ರಾಜೇನಹಳ್ಳಿ ಗ್ರಾಮದಲ್ಲಿ ಶಾಲೆಗಳು ಉದ್ಘಾಟನೆಯಾಗಿವೆ’ ಎಂದರು.

ಜಿಲ್ಲಾಧಿಕಾರಿ ಮಂಜುನಾಥ್ , ಶಾಸಕ ಕೆ.ವೈ.ನಂಜೇಗೌಡ , ಜಿ.ಪಂ.ಅಧ್ಯಕ್ಷೆ ಗೀತಾ ಆನಂದರೆಡ್ಡಿ, ಉಪಾಧ್ಯಕ್ಷೆ ಯಶೋದಮ್ಮ, ಸದಸ್ಯರಾದ ಗೀತಮ್ಮ, ಭಾಗ್ಯವತಿ , ತಾ.ಪಂ.ಅಧ್ಯಕ್ಷೆ ತ್ರಿವರ್ಣ, ಉಪಾಧ್ಯಕ್ಷೆ ನಾಗವೇಣಿ, ಪುರಸಭೆ ಅಧ್ಯಕ್ಷ ಸಿ.ಪಿ.ನಾಗರಾಜ್, ಸದಸ್ಯರಾದ ಸಿ.ಲಕ್ಷ್ಮೀನಾರಾಯಣ್, ಮುರಳೀಧರ್, ಅಶ್ವತರೆಡ್ಡಿ, ಕೋಚಿಮುಲ್ ನಿರ್ದೇಶಕರಾದ ಕೆ.ವಿ.ನಾಗರಾಜ್, ಬಾಬು, ಮುನಿಯಪ್ಪ,ರಾಜೇಂದ್ರ, ಚೈತ್ರಾರೆಡ್ಡಿ, ಸುಬ್ಬರೆಡ್ಡಿ, ಶಿಬಿರ ಕಚೇರಿ ನಿರ್ವಾಹಕ ಡಾ.ವಿಶ್ವನಾಥ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !