ಶನಿವಾರ, ಮೇ 15, 2021
24 °C
ಅಭಿವೃದ್ಧಿ ನೆಪ, ವ್ಯಾಪಾರಿಗಳ ಸ್ವಾರ್ಥ: ನೆರಳು ನೀಡುತ್ತಿವೆ ಬೆರಳೆಣಿಕೆ ವೃಕ್ಷಗಳು

ಕುಣಿಗಲ್‌: ರಸ್ತೆಬದಿಯ ಮರಗಳು ಕಣ್ಮರೆ

ಟಿ.ಎಚ್.ಗುರುಚರಣ್ ಸಿಂಗ್ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಪುರಸಭೆ ವ್ಯಾಪ್ತಿಯಲ್ಲಿ ಹಾದುಹೋಗಿರುವ ಹಳೆ ರಾಷ್ಟ್ರೀಯ ಹೆದ್ದಾರಿ 48ರಲ್ಲಿದ್ದ ಸಾಲುಮರಗಳು ಅಭಿವೃದ್ಧಿ ಹೆಸರಿನಲ್ಲಿ ಹಾಗೂ ವ್ಯಾಪಾರಿಗಳ ಸ್ವಾರ್ಥಕ್ಕೆ ಬಲಿಯಾಗಿವೆ. ಬೆರಳೆಣಿಕೆಯ ಮರಗಳು ಮಾತ್ರ ಬಿಸಿಲ ಬೇಗೆಯಲ್ಲಿ ಬಳಲುತ್ತಿರುವವರಿಗೆ ನೆರಳು ನೀಡುತ್ತಿವೆ.

ತಾಲ್ಲೂಕು ಕಚೇರಿ ಆವರಣದಲ್ಲಿರುವ ಎರಡು ಮಳೆಮರಗಳು (ರೇನ್ ಟ್ರೀ) ಇಡೀ ಆವರಣವನ್ನು ಆವರಿಸಿ ನಿತ್ಯ ಸಾವಿರಾರು ಜನ ಮತ್ತು ವಾಹನಗಳಿಗೆ ಆಶ್ರಯ ನೀಡುತ್ತಿವೆ. ‘ಈ ಮರಗಳು ರಸ್ತೆ ಬದಿಯಲ್ಲಿದ್ದರೆ ಯಾವುದಾದರೂ ಒಂದು ಕಾರಣಕ್ಕೆ ನೆಲಕ್ಕೆ ಉರುಳುತ್ತಿದ್ದವು ಸಧ್ಯಕ್ಕೆ ಯಾರ ದೃಷ್ಟಿಯೂ ಬಿದ್ದಿಲ್ಲ’ ಎನ್ನುತ್ತಾರೆ ನಟೇಶ್.

ಹುಚ್ಚಮಾಸ್ತಿಗೌಡ ವೃತ್ತ ತುಮಕೂರು– ಮದ್ದೂರು- ಮೈಸೂರು- ಮಾಗಡಿ ಕಡೆಗೆ ಸಾಗುವ ನೂರಾರು ವಾಹನಗಳ ಸಂಗಮಸ್ಥಳ. ಇಲ್ಲಿರುವ ಮಳೆಮರ ನಿತ್ಯ ನೂರಾರು ಪ್ರಾಯಾಣಿಕರಿಗೆ ಆಶ್ರಯ ತಾಣವಾಗಿದೆ. ನಿರೀಕ್ಷಣಾ ಮಂದಿರದ ಬಳಿಯ ಎರಡು ಮರಗಳು, ತಾಲ್ಲೂಕು ಪಂಚಾಯಿತಿ ಆವರಣದ ಒಂದು ಮರ ನೆರಳು ನೀಡುತ್ತಿದೆ.

ಹತ್ತು ವರ್ಷಗಳ ಹಿಂದೆ ಪುರಸಭೆ ವ್ಯಾಪ್ತಿಯ ಹಳೇ ಹೆದ್ದಾರಿಯಲ್ಲಿ ಸಾಲುಮರಗಳಿದ್ದವು. ಈ ಪೈಕಿ ರಸ್ತೆ ಅಭಿವೃದ್ಧಿಯ ನೆಪದಲ್ಲಿ 115 ಮರಗಳನ್ನು ತೆರವು ಮಾಡುವ ನಿರ್ಣಯ ಕೈಗೊಂಡಿದ್ದರೂ, ಅರಣ್ಯ ಇಲಾಖೆಯವರು 65 ಮರಗಳನ್ನು ತೆರವುಗೊಳಿಸಲು ಸೂಚಿಸಿದ್ದರು. ಉಳಿದಂತೆ ರಸ್ತೆಬದಿಯ ಅಂಗಡಿಗಳ ಮಾಲೀಕರು ತಮ್ಮ ಮಳಿಗೆಗಳು ಕಾಣುವುದಿಲ್ಲ ಎಂಬ ಕಾರಣಕ್ಕೆ ನಾನಾ ಕಾರಣಗಳನ್ನು ನೀಡಿ ಸುಮಾರು 60ಕ್ಕೂ ಹೆಚ್ಚು ಮರಗಳನ್ನು ಇಲಾಖೆಯ ಅಪ್ಪಣೆ ಪಡದೇ ಉರುಳಿಸಿದ್ದಾರೆ. ಇನ್ನೂ ಕೆಲವರು ರಾತ್ರೋರಾತ್ರಿ ಮರಗಳನ್ನು ಉರುಳಿಸಿದ ಉದಾಹರಣೆಗಳು ಇವೆ. ಬಸ್ ನಿಲ್ದಾಣದಲ್ಲಿದ್ದ ಮರಗಳನ್ನು ಕಡಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಗಿದೆ ಎನ್ನುತ್ತಾರೆ ವ್ಯಾಪಾರಿ ಉದಯರವಿ.

ಬೇಸಿಗೆ ಪ್ರಾರಂಭವಾಗಿದೆ. ಉಷ್ಣಾಂಶ 38 ಡಿಗ್ರಿಗೇರುತ್ತಿದೆ. ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಪಟ್ಟಣದ ಯಾವರಸ್ತೆಯಲ್ಲೂ ಜನ ಓಡಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯವರು ರಸ್ತೆ ಬದಿ ಹೊಂಗೆ ಗಿಡಗಳನ್ನು ನೆಟ್ಟಿದ್ದಾರೆ. ನಿರ್ವಹಣೆಯ ಲೋಪದಿಂದ ಗಿಡಗಳು ಸಾಯುತ್ತಿವೆ. ಸ್ಥಳೀಯ ಸಂಘಸಂಸ್ಥೆಗಳು ರಸ್ತೆಬದಿಯ ಮರಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ನೆರಳು ನೀಡಬೇಕು ಎಂದು ಸೇವಾ ಭಾಗ್ಯ ಸಂಸ್ಥೆಯ ವಿನೋದ್ ಗೌಡ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.