ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್‌: ಕಾರ್ಯಾರಂಭ ಮಾಡದ ವಿದ್ಯುತ್ ಚಿತಾಗಾರ

ಯಂತ್ರ ಅಳವಡಿಕೆಗೆ ಅನುದಾನದ ಕೊರತೆ
Last Updated 3 ಸೆಪ್ಟೆಂಬರ್ 2020, 8:32 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ 19ನೇ ವಾರ್ಡ್‌ನಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ವಿದ್ಯುತ್ ಚಿತಾಗಾರದ ಕಟ್ಟಡ ನಿರ್ಮಾಣವಾಗಿ ವರ್ಷವಾದರೂ ಅನುದಾನದ ಕೊರತೆಯಿಂದ ಕಾರ್ಯಾರಂಭವಾಗಿಲ್ಲ.

ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಕುಂಬಾರಗುಂಡಿ ಸ್ಮಶಾನದಲ್ಲಿ ಜನರ ತೀವ್ರ ವಿರೋಧದ ನಡುವೆಯೂ ಕಟ್ಟಡ ನಿರ್ಮಿಸಲಾಗಿದೆ.

ಶವಸುಡಲು ಬಳಸುವ ವಿದ್ಯುತ್ ಯಂತ್ರಕ್ಕೆ ಅನುದಾನದ ಕೊರತೆಯಿಂದ ಕಟ್ಟಡ ಕಾರ್ಯ ಆರಂಭವಾಗಿಲ್ಲ. ಕಟ್ಟಡ ಸ್ಮಶಾನದಲ್ಲಿರುವುದರಿಂದ ಯಾರು ಗಮನಹರಿಸದೆ ಶಿಥಿಲಾವಸ್ಥೆ ತಲುಪುತ್ತಿದೆ.ದುಷ್ಕರ್ಮಿಗಳು ಈಗಾಗಲೇ ಕಟ್ಟಡದ ಕಿಟಕಿ ಗಾಜುಗಳನ್ನು ನಾಶ ಮಾಡಿದ್ದಾರೆ.

ವಿದ್ಯುತ್ ಚಿತಾಗಾರ ಪಟ್ಟಣದ ನಾಗರಿಕರ ಬಹುದಿನದ ಬೇಡಿಕೆ. ಕಾಮಗಾರಿ ಪೂರ್ಣಗೊಂಡು ಇನ್ನೇನೂ ಶವಸಂಸ್ಕಾರಕ್ಕೆ ಲಭ್ಯವಾಗುತ್ತದೆ ಎಂದು ಆಶಾಭಾವನೆ ಹೊಂದಿದ್ದ ಜನರಿಗೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಿರಾಸೆ ಆಗಿದೆ ಎನ್ನುತ್ತಾರೆ ಕುಣಿಗಲ್ ಅಭಿವೃದ್ಧಿ ಫೋರಂನ ರವಿಚಂದ್ರ.

‘ಪಟ್ಟಣದಲ್ಲಿ ಸ್ಮಶಾನಗಳು ಒತ್ತುವರಿ ಆಗುತ್ತಿವೆ. ಮುಂದಿನ ದಿನಗಳಲ್ಲಿ ಶವಸಂಸ್ಕಾರಕ್ಕೆ ಜಾಗವಿಲ್ಲದಂತೆ ಆಗಬಹುದು. ಪುರಸಭೆಯವರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಮುಕ್ತಿಧಾಮಗಳನ್ನು ಸಂರಕ್ಷಿಸಿ, ಸುಂದರ ಪರಿಸರ ನಿರ್ಮಿಸಬೇಕು. ಪರಿಸರ ರಕ್ಷಣೆ ದೃಷ್ಟಿಯಿಂದ ವಿದ್ಯುತ್ ಚಿತಾಗಾರ ಅಗತ್ಯವಾಗಿದೆ. ಸಂಬಂಧಪಟ್ಟವರು ಗಮನ ಹರಿಸಬೇಕು’ ಎಂದು ನಿವೃತ್ತ ಔಷಧ ಅಧಿಕಾರಿ ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಶಾಸಕ ಡಾ.ರಂಗನಾಥ್ ಪ್ರತಿಕ್ರಿಯಿಸಿ, ‘ಅತ್ಯಾಧುನಿಕ ವಿದ್ಯುತ್ ಚಿತಾಗಾರವನ್ನು ತಾಲ್ಲೂಕಿನ ಜನರಿಗೆ ಸಮರ್ಪಿಸಬೇಕು ಎನ್ನುವುದು ಸಂಸದ ಡಿ.ಕೆ.ಸುರೇಶ್ ಆಶಯವಾಗಿದೆ. ಕೇಂದ್ರ ಸರ್ಕಾರ ಸಂಸದರ ಅನುದಾನ ಕಡಿತಗೊಳಿಸಿದೆ. ವಿದ್ಯುತ್ ಯಂತ್ರ ಅಳವಡಿಕೆ ಸೇರಿದಂತೆ ವಿವಿಧ ವ್ಯವಸ್ಥೆಗೆ ₹85 ಲಕ್ಷ ಅಗತ್ಯವಿದೆ. ಅನುದಾನ ಸದ್ಬಳಕೆ ಮಾಡಿಕೊಂಡು ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

ವರ್ಷಾಂತ್ಯಕ್ಕೆ ಆರಂಭ
ಸಂಸದ ಡಿ.ಕೆ.ಸುರೇಶ್ ಅತ್ಯಾಧುನಿಕ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಸೂಚನೆ ನೀಡಿದ್ದ ಮೇರೆಗೆ, ತಾಲ್ಲೂಕಿನಲ್ಲಿ ₹ 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ವಿದ್ಯುತ್ ಯಂತ್ರ ಅಳವಡಿಕೆಗೆ ಸಂಸದರ ನಿಧಿಯಿಂದ ₹ 65 ಲಕ್ಷ ಮಂಜೂರಾತಿ ನಿರೀಕ್ಷೆಯಲ್ಲಿದ್ದು, ಶೀಘ್ರ ಯಂತ್ರ ಅಳವಡಿಸಲಾಗುವುದು. ವರ್ಷದ ಅಂತ್ಯದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ರಾಮನಗರ ಜಿಲ್ಲೆ ಯೋಜನಾ ನಿರ್ದೇಶಕ ಗೋವಿಂದರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT