ಗುರುವಾರ , ಆಗಸ್ಟ್ 22, 2019
27 °C

ತಂದೆಗೆ ಲಿವರ್ ದಾನ ಮಾಡಿ ಮಾನವೀಯತೆ ಮೆರೆದ ಮಗ

Published:
Updated:
Prajavani

ಕೊಡಿಗೇನಹಳ್ಳಿ (ಮಧುಗಿರಿ ತಾ.): ಹೃದಯ ಸಂಬಂಧಿ ಹಾಗೂ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ತಂದೆಗೆ ತನ್ನ ಲಿವರ್‌ ನೀಡಿ ಪ್ರಾಣ ಕಾಪಾಡಿ ಮಾನವೀಯತೆ ಮೆರದಿದ್ದಾನೆ ಯುವಕ ಅರ್ಜುನ್ ಕುಮಾರ್.

ಹೋಬಳಿಯ ಪೊಲೀಸ್ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಆರ್.ಎನ್.ನಾಗರಾಜು (55) ಅವರು ಹೃದಯ ಸಂಬಂಧಿ ಹಾಗೂ ಲಿವರ್ ವೈಫಲ್ಯದಿಂದ ಈಚೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಸಂದರ್ಭದಲ್ಲಿ ಅವರ ಪುತ್ರ ಅರ್ಜುನ್ ಕುಮಾರ್ (22) ತಂದೆಗೆ ತನ್ನ ಅರ್ಧ ಭಾಗದಲ್ಲಿರುವ ಲಿವರನ್ನು ನೀಡಿದ್ದಾನೆ. ತಂದೆ ಚಿಕಿತ್ಸೆಗೆ ದಾಖಲಾದಾಗ  ಲಿವರ್ ಸಂಪೂರ್ಣವಾಗಿ ಹಾಳಾಗಿರುವುದು ತಿಳಿದು ಬಂದಿತ್ತು. ಆಗ ವೈದ್ಯರು ಹೊಸದಾಗಿ ಲಿವರ್ ಅಳವಡಿಸಿದರೆ ಮಾತ್ರ ಅವರ ಪ್ರಾಣ ಉಳಿಯುತ್ತದೆ ಎಂದು ಕುಟುಂಬದವರಿಗೆ ತಿಳಿಸಿದರು. ಆಗ ಅರ್ಜುನ್‌ ತಂದೆಗೆ ಲಿವರ್‌ ನೀಡಲು ಮುಂದಾದರು. ಅದಕ್ಕೆ ಒಪ್ಪಿದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅಂಜನ್ ಕುಮಾರ್ ಅವರ ದೇಹದಲ್ಲಿನ ಅರ್ಧ ಭಾಗ ಲಿವರನ್ನು ತೆಗೆದು ನಾಗರಾಜು ಅವರಿಗೆ ಅಳವಡಿಸಿದರು.

ನಾಗರಾಜು ಮೂಲತಃ ಕೊರಟಗೆರೆ ತಾಲ್ಲೂಕಿನ ಅಕ್ಕಿರಾಂಪುರದವರು. ಕೆಲ ವರ್ಷಗಳಿಂದ ನಾಗರಾಜು ಅವರು ಹೆಡ್‌ಕಾನ್ಟೇಬಲ್ ಆಗಿ ಕೊಡಿಗೇನಹಳ್ಳಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವರ ಕುಟುಂಬ ಕೊಡಿಗೇನಹಳ್ಳಿ ಪೊಲೀಸ್ ವಸತಿ ಗೃಹದಲ್ಲೇ ವಾಸಿಸುತ್ತಿದೆ. ಅಂಜನ್ ಕುಮಾರ್ ಬಿ.ಇ. (ಕಂಪ್ಯೂಟರ ಸೈನ್ಸ್) ಓದಿದ್ದು, ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ.

ನಾಗರಾಜು ಅವರಿಗೆ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಬೆಂಗಳೂರಿನ ಡಿ.ಎಸ್.ಪಿ. ಅಬ್ದುಲ್ ಖಾದರ್ (ಎಸಿಬಿ ಬ್ರಾಂಚ್), ಕೊಡಿಗೇನಹಳ್ಳಿ ಪಿಎಸ್ಐ ಮೋಹನ್ ಕುಮಾರ್ ನೆರವಿನ ಹಸ್ತ ನೀಡಿದ್ದಾರೆ. 

Post Comments (+)