ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ: ನೊಳಂಬರಿಗೆ ಟಿಕೆಟ್‌ ನೀಡಲು ಒತ್ತಾಯ

Published 2 ಮಾರ್ಚ್ 2024, 4:54 IST
Last Updated 2 ಮಾರ್ಚ್ 2024, 4:54 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ನೊಳಂಬ ಲಿಂಗಾಯತ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಮುದಾಯದ ಸ್ವಾಮೀಜಿಗಳು ಇಲ್ಲಿ ಶುಕ್ರವಾರ ಒತ್ತಾಯಿಸಿದರು.

ಗುಬ್ಬಿಯ ಬೆಟ್ಟದಹಳ್ಳಿ ಮಠದ ಚಂದ್ರಶೇಖರ ಸ್ವಾಮೀಜಿ, ಗೋಡೆಕೆರೆ ಮಠದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಚಿಕ್ಕನಾಯಕನಹಳ್ಳಿ ತಮ್ಮಡಿಹಳ್ಳಿ ಮಠದ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಗುಬ್ಬಿಯ ಗೊಲ್ಲಹಳ್ಳಿಯ ವಿಭವ‌ ವಿದ್ಯಾಶಂಕರ ಸ್ವಾಮೀಜಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ನೊಳಂಬ ಸಮುದಾಯದ ಮುಖಂಡರಿಗೆ ಟಿಕೆಟ್‌ ನೀಡಬೇಕು ಎಂದು ಮನವಿ ಮಾಡಿದರು.

ಸಮಾಜದ ಹಿರಿಯರಾದ ಜಿ.ಎಸ್.ಬಸವರಾಜು ತಮ್ಮ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹಲವು ಕಾರ್ಯಗಳನ್ನು ಮಾಡಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಕಳೆದ ನಲವತ್ತು ವರ್ಷಗಳು ನೊಳಂಬ ಸಮುದಾಯಕ್ಕೆ ಅವಕಾಶ ನೀಡುತ್ತಾ ಬಂದಿವೆ. ಈಗಲೂ ಇದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಚಂದ್ರಶೇಖರ ಸ್ವಾಮೀಜಿ, ‘ಜಿಲ್ಲೆಯಲ್ಲಿ ನೊಳಂಬ ಸಮುದಾಯದ ಎರಡು ಲಕ್ಷಕ್ಕೂ ಹೆಚ್ಚು ಮತಗಳಿವೆ. ಸಮುದಾಯದ ನಾಯಕರು ಈ ಹಿಂದೆ ಒಳ್ಳೆಯ ಕೆಲಸ ಮಾಡಿದ್ದಾರೆ. ಅದನ್ನು ಪರಿಗಣಿಸಬೇಕು. ಸಮರ್ಥರನ್ನು ಗಮನದಲ್ಲಿಟ್ಟುಕೊಂಡು ಪ್ರಾಮಾಣಿಕರು, ಹೊಸಬರ ಸ್ಪರ್ಧೆಗೆ ಅವಕಾಶ ನೀಡಬೇಕು. ರಾಜಕೀಯದಲ್ಲಿ ಸಾವಿರಾರು ಕೋಟಿ ದುಡಿದವರಿಗೆ ಸಮಾಜ ಬುದ್ಧಿ ಕಲಿಸಬೇಕಿದೆ’ ಎಂದರು.

ಕಾಂಗ್ರೆಸ್‌ನಲ್ಲಿ ಶಾಸಕ ಕೆ.ಷಡಕ್ಷರಿ, ಮುಖಂಡರಾದ ಗುಬ್ಬಿಯ ಲೋಕೇಶ್, ಪ್ರಸನ್ನಕುಮಾರ್‌ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಎಚ್‌.ಎಸ್‌.ರವಿಶಂಕರ್‌, ದಿಲೀಪ್‌ಕುಮಾರ್, ಚಂದ್ರಶೇಖರ್‌ ಆಕಾಂಕ್ಷಿತರ ಪಟ್ಟಿಯಲ್ಲಿದ್ದಾರೆ. ಎರಡೂ ಪಕ್ಷಗಳಲ್ಲೂ ಸಮುದಾಯದ ಮುಖಂಡರಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸಮುದಾಯದ ಮುಖಂಡ ಮಧುಸೂದನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT