ಭಾನುವಾರ, ಜೂನ್ 13, 2021
21 °C
ಬೀಜದುಂಡೆಗಳೊಡನೆ ಸಾಗುತ್ತಿರುವ ಯುವ ಸಮೂಹ

ಮದಲಿಂಗನ ಗುಡ್ಡಕ್ಕೆ ಚಾರಣಿಗರ ಲಗ್ಗೆ: ಕಾಡು ಬೆಳೆಸುವ ಕಾತರ

ಸಿ.ಗುರುಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕನಾಯಕನಹಳ್ಳಿ: ಹಚ್ಚಹಸಿರಿನ ಪರಿಸರ ಆಸ್ವಾದಿಸಲು, ಚಾರಣದ ಅನುಭವ ಪಡೆಯಲು ದಿನೇ ದಿನೇ ಮದಲಿಂಗನ ಗುಡ್ಡದತ್ತ ಚಾರಣಿಗರ ಪಯಣ ಹೆಚ್ಚಾಗುತ್ತಿದೆ. ಪರಿಸರ ಪ್ರೇಮಿಗಳಷ್ಟೇ ಅಲ್ಲದೆ, ಯುವ ಉತ್ಸಾಹಿಗಳು, ಕಾಲೇಜು ವಿದ್ಯಾರ್ಥಿಗಳು ಪ್ರತಿವಾರ ಈ ಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದಾರೆ.

ತಾಲ್ಲೂಕಿನ ಜನರಷ್ಟೇ ಅಲ್ಲದೆ ತುಮಕೂರು, ತುರುವೇಕೆರೆ, ತಿಪಟೂರಿನ ಅನೇಕ ಉತ್ಸಾಹಿಗಳು ಗುಡ್ಡಗಳನ್ನು ಹತ್ತುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ತಮ್ಮ ಊರುಗಳಿಗೆ ಬಂದ ವಿದ್ಯಾರ್ಥಿಗಳು ಗುಡ್ಡದ ಪರಿಸರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರತಿ ಭಾನುವಾರ ಮದಲಿಂಗನ ಗುಡ್ಡದತ್ತ ತೆರಳುತ್ತಿರುವ ಚಾರಣಿಗರು ಮುಂಜಾನೆ 6ಕ್ಕೆ ಗುಡ್ಡ ಹತ್ತಲು ಆರಂಭಿಸುತ್ತಾರೆ. ಕೆಲ ಚಾರಣಿಗರು ಸುಮ್ಮನೆ ಗುಡ್ಡ ಹತ್ತುವುದಿಲ್ಲ. ಅಲ್ಲಲ್ಲಿ ಬೀಜದುಂಡೆಗಳನ್ನು ಎರಚುತ್ತ ಪರಿಸರ ಸಂರಕ್ಷಣೆಗೆ ನೆರವಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚಾರಣೆಯಂದು ಕೆಲವು ನೌಕರರು ಗುಡ್ಡ ಹತ್ತಿ ಬಾವುಟ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನ ಆಚರಿಸಿದ್ದಾರೆ.

ಈಚೆಗೆ ಅರಣ್ಯ ಇಲಾಖೆಯವರು ಗುಡ್ಡದ ಬಳಿ ನಿರ್ಮಿಸಿದ ವಾಚಿಂಗ್ ಟವರ್ ಬಳಿ ನೂರಾರು ಜನರು ಸೇರುತ್ತಾರೆ. ಈ ಟವರ್ ಮೇಲೆ ನಿಂತರೆ ಸುತ್ತಮುತ್ತ ಇರುವ ಹಲವು ಗುಡ್ಡಗಳು ಮನೋಹರವಾಗಿ ಕಾಣುತ್ತದೆ. ಆದ್ದರಿಂದ ಅಲ್ಲಿಯೂ ಜನರ ಸಂಖ್ಯೆ ಹೆಚ್ಚುತ್ತಿದೆ.

ಬೀಜದುಂಡೆ ಜತೆ ಚಾರಣ

ತಾಲ್ಲೂಕಿನ ನೆರಳು ಸಂಘಟನೆಯ ಕೆಲವು ಮಂದಿ ಕಾಡು ಬೆಳೆಸಲು ಬೀಜದುಂಡೆಗಳ ಸಮೇತ ಗುಡ್ಡ ಹತ್ತಲು ಆರಂಭಿಸಿದರು. ಚಾರಣ ಮಾಡುತ್ತಾ ಬೀಜದುಂಡೆಗಳನ್ನು ಅಲ್ಲಲ್ಲಿ ಹಾಕುತ್ತಾ ಗಿಡಗಳ ಬಿತ್ತನೆ ಶುರು ಮಾಡಿದರು. ಈಗ ಬೀಜದುಂಡೆ ಹಿಡಿದು ಚಾರಣ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ.

ಮೊದಲ ವಾರ ಏಳು ಮಂದಿ ಮಾತ್ರ ಹತ್ತುತ್ತಿದ್ದರು. ನಂತರ ಪ್ರತಿ ವಾರ ಗುಡ್ಡ ಹತ್ತಲು ಆರಂಭಿಸಿದ್ದರಿಂದ ಈಗ ಇದರ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ. ಪ್ರತಿವಾರ 70ಕ್ಕೂ ಅಧಿಕ ಮಂದಿ ಮದಲಿಂಗನ ಗುಡ್ಡದತ್ತ ಹೆಜ್ಜೆ ಹಾಕುತ್ತಾ ಬೀಜದುಂಡೆಗಳನ್ನು ಚೆಲ್ಲುತ್ತಿದ್ದಾರೆ.

ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ

ಮದಲಿಂಗನ ಗುಡ್ಡ ಹಚ್ಚಹಸಿರಿನ ತಾಣ, ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಗುಡ್ಡ ಹತ್ತಿ ಪರಿಸರ ವೀಕ್ಷಿಸುವ ಜನರ ಸಂಖ್ಯೆ ಪ್ರತಿ ವಾರ ಹೆಚ್ಚುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಕೆಮ್ಮಣ್ಣಗುಂಡಿಯಂತಹ ಪ್ರದೇಶಗಳಿಗೆ ಹೋಗುವ ಜನರು ಇಲ್ಲಿನ ಹಚ್ಚ ಹಸಿರಿನ ಪರಿಸರ ಕಂಡು ಈ ಗುಡ್ಡಗಳತ್ತ ಧಾವಿಸುತ್ತಿದ್ದಾರೆ.

– ವಿಶ್ವನಾಥ್, ಚಾರಣಿಗ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು