ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ: ರಾಹುಲ್‌ ವಿರುದ್ಧ ಬಿಜೆಪಿ ವಾಗ್ದಾಳಿ

Last Updated 21 ಜನವರಿ 2023, 6:02 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿಯು ನಗರದಲ್ಲಿ ಶುಕ್ರವಾರ ಆರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ. ವಿವಿಧ ರಾಜ್ಯಗಳ ಮೋರ್ಚಾದ ಮಹಿಳಾ ಘಟಕದ ಅಧ್ಯಕ್ಷೆಯರು ಭಾಗವಹಿಸಿದ್ದಾರೆ.

ಉದ್ಘಾಟನೆ ನೆರವೇರಿಸಿದ ರಾಷ್ಟ್ರೀಯ ಮಹಿಳಾ ಮೋರ್ಚಾ ಉಸ್ತುವಾರಿ ದುಷ್ಯಂತ ಕುಮಾರ್ ಗೌತಮ್, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ದೇಶವನ್ನು ಇಬ್ಭಾಗ ಮಾಡಿದ್ದು ಕಾಂಗ್ರೆಸ್‌. ನೆಹರೂ ಅಂತಹವರನ್ನು ಪಡೆದಿದ್ದು ದೇಶದ ದುರಂತ ಎಂದು ಕುಟುಕಿದರು.

‘ನಾವು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುತ್ತಿದ್ದು, ದೇಶದ ಜನ ಬಿಜೆಪಿ ಮೇಲೆ ವಿಶ್ವಾಸ ಹೊಂದಿದ್ದಾರೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಕಮಲ ಅರಳುತ್ತಿದೆ. ಪಕ್ಷದ ತಳಮಟ್ಟದ ಕಾರ್ಯಕರ್ತರಿಗೂ ಅಧಿಕಾರ ಸಿಕ್ಕಿದೆ. ಬಿಜೆಪಿಯಲ್ಲಿ ಚಹಾ ಮಾರುತ್ತಿದ್ದವರು ಪ್ರಧಾನಿಯಾಗಿದ್ದಾರೆ. ನಮಗೆ ದೇಶ ಮುಖ್ಯ. ನಂತರ ಪಕ್ಷ ಎಂಬ ಸಿದ್ಧಾಂತ ಹೊಂದಿದ್ದೇವೆ. ಅವರಿಗೆ (ಕಾಂಗ್ರೆಸ್) ದೇಶದ ಹಿತಕ್ಕಿಂತ ಪಕ್ಷ, ಕುಟುಂಬ ರಾಜಕಾರಣವೇ ಮುಖ್ಯವಾಗಿದೆ’ ಎಂದು ಆರೋಪಿಸಿದರು.

ಜಮ್ಮು ಹಾಗೂ ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದು, ತ್ರಿವರ್ಣ ಧ್ವಜ ಹಾರಿಸಿದ್ದೇವೆ. ಆದರೆ, ರಾಹುಲ್ ಗಾಂಧಿ ಲಾಲ್‌ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಲಿಲ್ಲ. ರಾಮಸೇತು ಕೇವಲ ಕಲ್ಪನೆ ಎಂದರು. ರಾಮಾಯಣವೇ ಸುಳ್ಳು ಎನ್ನುತ್ತಾರೆ. ನಾವು ರಾಮಮಂದಿರ ನಿರ್ಮಿಸಿದ್ದೇವೆ ಎಂದರು.

ಕಾಂಗ್ರೆಸ್ ಆಡಳಿತ ನಡೆಸಿದ ಸಮಯದಲ್ಲಿ ಪೋಲಿಯೊ ಲಸಿಕೆ ಬರಲು ಹತ್ತಾರು ವರ್ಷಗಳೇ ಬೇಕಾದವು. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಕೋವಿಡ್‌ಗೆ ಒಂದೇ ವರ್ಷದಲ್ಲಿ ಲಸಿಕೆ ಬಂತು. ಇತರೆ ರಾಷ್ಟ್ರಗಳಿಗೂ ಲಸಿಕೆ ಕೊಟ್ಟಿದ್ದೇವೆ. ಜಿ20 ಸಮ್ಮೇಳನ ನಡೆಸಲು ಭಾರತಕ್ಕೆ ಪ್ರಾತಿನಿಧ್ಯ ಸಿಕ್ಕಿರುವುದು ಹೆಮ್ಮೆಯ ವಿಚಾರ ಎಂದು
ಹೇಳಿದರು.

ರಾಷ್ಟ್ರೀಯ ಮಹಿಳಾ ಮೋರ್ಚಾ ಅಧ್ಯಕ್ಷೆ ವಾನತಿ ಶ್ರೀನಿವಾಸ್, ‘ಮುಂದಿನ ಒಂದು ವರ್ಷದಲ್ಲಿ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ಎದುರಾಗಲಿದೆ. ಕಾರ್ಯಸೂಚಿಯನ್ನು ಸಿದ್ಧಪಡಿಸಿಕೊಂಡು ಪಕ್ಷವನ್ನು ಗೆಲ್ಲಿಸಲು ಈಗಿನಿಂದಲೇ ಕೆಲಸ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ ಮಹಿಳೆಯರಿಗೂ ಅವಕಾಶ ಸಿಕ್ಕಿದೆ. ಪಕ್ಷದಲ್ಲಿ ಪುರುಷ– ಮಹಿಳೆಯರ ನಡುವಿನ ಅಂತರ ಕಡಿಮೆಯಾಗಿದ್ದು, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಎಲ್ಲೆಡೆ ಪಕ್ಷವನ್ನು ಅಧಿಕಾರಕ್ಕೆ ತರಬಹುದು ಎಂದು ತಿಳಿಸಿದರು.

ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಸಂಸದ ಜಿ.ಎಚ್. ಬಸವರಾಜು, ಶಾಸಕ ಜಿ.ಬಿ. ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT