ಭಾನುವಾರ, ಸೆಪ್ಟೆಂಬರ್ 27, 2020
26 °C
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಕಾರಣ ಹೆಚ್ಚಿದ ತರಕಾರಿ ಬೆಲೆ

ಬೀನ್ಸ್‌, ಸೊಪ್ಪಿನ ಬೆಲೆ ದುಪ್ಪಟ್ಟು

ವಿಠಲ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಮಳೆ ಕಾರಣದಿಂದ ಬೀನ್ಸ್‌ ಆವಕ ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಯಾಗಿ ಕೆ.ಜಿ.ಗೆ ₹60ರಂತೆ ಮಾರಾಟವಾಗುತ್ತಿದೆ. ಕಳೆದ ವಾರ ಬೀನ್ಸ್‌ ಕೆ.ಜಿ.ಗೆ ₹20ರಂತೆ ಮಾರಾಟವಾಗುತಿತ್ತು.

ತರಕಾರಿ, ಹಣ್ಣುಗಳಿಗೆ ಈ ವಾರ ಸ್ವಲ್ಪ ಮಟ್ಟಿನ ಬೇಡಿಕೆ ಹೆಚ್ಚಾಗಿದೆ. ಕೆಲವು ವಾರಗಳಿಂದೀಚೆಗೆ ಟೊಮೆಟೊ ಬೆಲೆ ತೀವ್ರ ಕುಸಿತ ಕಂಡಿದ್ದು, ಈ ವಾರ ಕೆ.ಜಿ ಬೆಲೆ ₹10ಕ್ಕೆ ಇಳಿದಿದೆ. ಮಳೆ ಹೆಚ್ಚಾಗುತ್ತಿರುವುದರಿಂದ ತರಕಾರಿ ಆವಕ ಕಡಿಮೆಯಾಗಿದ್ದು, ಬೆಲೆ ಏರಿಕೆಯಾಗಿದೆ. ನುಗ್ಗೆಕಾಯಿ ಕೆ.ಜಿ ₹60, ಕ್ಯಾಪ್ಸಿಕಂ ₹70ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪುಗಳ ಬೆಲೆ ಸಹ ದುಬಾರಿಯಾಗಿದ್ದು, ಕೊತ್ತಂಬರಿ ಸೊಪ್ಪಿನ ಒಂದು ಕಟ್ಟಿನ ಬೆಲೆ ₹30ರಿಂದ ಒಮ್ಮೆಲೆ ₹70ಕ್ಕೆ ಜಿಗಿದಿದ್ದು ದುಪ್ಪಟ್ಟಾಗಿದೆ. ದಂಟಿನ ಸೊಪ್ಪು ಕಟ್ಟು ₹ 40, ಮೆಂತ್ಯೆ ₹80ರಿಂದ ₹100ರ ವರೆಗೂ ಮಾರಾಟ ವಾಗುತ್ತಿದೆ. ಸತತವಾಗಿ ಮಳೆಯಾಗುತ್ತಿದ್ದು, ಜಮೀನಿನಲ್ಲೇ ಸೊಪ್ಪು ಕೊಳೆಯುತ್ತಿದ್ದು, ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ವಾರವೂ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಗಿರೀಶ್‌ ಮಾಹಿತಿ ನೀಡಿದರು.

ಸ್ಥಳೀಯವಾಗಿ ಬೆಳೆಯುವ ಕಿತ್ತಳೆ ಮಾರುಕಟ್ಟೆಗೆ ಬಂದಿದ್ದರೂ ಕೆ.ಜಿ.ಗೆ ₹120ಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬಾಳೆ ಹಣ್ಣಿನ ದರ ₹65ಕ್ಕೆ ಏರಿದೆ. ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಬೇಳೆ ಕಾಳು ಬೆಲೆ ಸ್ಥಿರ: ನಗರದ ಮಂಡಿಪೇಟೆಯಲ್ಲಿ ಬೇಳೆ ಕಾಳುಗಳ ಬೆಲೆ ಸ್ಥಿರವಾಗಿದೆ. ಬೇಳೆ ಕಾಳುಗಳನ್ನು ಕೊಳ್ಳುವವರ ಸಂಖ್ಯೆ ಸಹ ಇಳಿಮುಖವಾಗಿದೆ. ಹೋಲ್‌ಸೇಲ್‌ ವ್ಯಾಪಾರಿಗಳು ಮಾತ್ರವೇ ಹೆಚ್ಚಿನ ವ್ಯಾಪಾರ ಮಾಡುತ್ತಿದ್ದಾರೆ. ಸಾಮಾನ್ಯ ಗ್ರಾಹಕರು ಇತ್ತ ಸುಳಿಯುವುದು ಕಡಿಮೆ. ಪೂಜೆ, ಇತರ ಕಾರ್ಯಕ್ರಮಗಳು ಇದ್ದರೆ ಗ್ರಾಹಕರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಿರುತ್ತದೆ ಎನ್ನುತ್ತಾರೆ ಮಂಡಿಪೇಟೆ ನಂಜುಂಡೇಶ್ವರ ಟ್ರೇಡರ್ಸ್‌ನ ಆರ್‌.ಎನ್‌.ನಾಗೇಂದ್ರ.

ಕುರಿ ಮಾಂಸ ಬೆಲೆ ಹೆಚ್ಚಳ: ಈ ವಾರ ಕುರಿ ಮಾಂಸದ ಬೆಲೆ ಕೆ.ಜಿ.ಗೆ ₹10 ಹೆಚ್ಚಾಗಿದೆ. ಎಳೆಯ ಕುರಿ ಮಾಂಸದ ಬೆಲೆ ಕೆ.ಜಿ ₹610, ಸಾಧಾರಣ ಮಟನ್‌ ₹ 510ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆ ಒಂದಕ್ಕೆ ₹4 ಹಾಗೂ ಕೋಳಿ ಮಾಂಸ ಕೆ.ಜಿ.ಗೆ ₹170ರಂತೆ ದರವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.