ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕೆಟ್ಟು ನಿಂತಿದೆ ಮೆಕ್ಯಾನಿಕ್‌ಗಳ ಬದುಕು

ಲಾಕ್‌ಡೌನ್‌ನಿಂದ ಕೈಗಳಿಗೆ ಇಲ್ಲ ಕೆಲಸ; ಲಾಕ್‌ಡೌನ್‌ನಿಂದ ಬಿಡುಗಡೆಗಾಗಿ ಕಾತರ
Last Updated 3 ಮೇ 2020, 2:48 IST
ಅಕ್ಷರ ಗಾತ್ರ

ತುಮಕೂರು: ತಮ್ಮ ಕರ ಕೌಶಲಗಳಿಂದ ಕೆಟ್ಟುನಿಂತ ವಾಹನಗಳು ಸರಾಗವಾಗಿ ಓಡುವಂತೆ ಮಾಡುತ್ತಿದ್ದ ಗ್ಯಾರೇಜ್‌ಗಳ ಕಾರ್ಮಿಕರ ಬದುಕು ಈಗ ನಿಂತಲ್ಲೇ ನಿಂತಿದೆ.

ಲಾಕ್‌ಡೌನ್‌ ಅವರ ಕೆಲಸವನ್ನು ಕಿತ್ತುಕೊಂಡು, ಕೈಗಳನ್ನು ಕಟ್ಟಿಹಾಕಿದೆ. ದುಡಿಮೆಯ ದಾರಿಯಿಲ್ಲದೆ, ಬಂದ್‌ನ ಬಂಧನದಿಂದ ಬಿಡುಗಡೆ ಆಗುವುದು ಎಂದು ಎದುರು ನೋಡುತ್ತಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಪಂಕ್ಚರ್‌ ಅಂಗಡಿ, ಆಟೊಮೊಬೈಲ್‌ ವರ್ಕ್‌, ಗ್ಯಾರೇಜ್‌, ಸರ್ವಿಸ್‌ ಸೆಂಟರ್‌ಗಳ ಕಾರ್ಮಿಕರಿಗೆ ಕೈ ತುಂಬ ಕೆಲಸ ಇರುತ್ತಿತ್ತು. ಈಗ ಮಾಡಲು ಕೆಲಸ ಇಲ್ಲದೆ, ಜೇಬು ಹಗುರವಾಗಿ, ಹೊಟ್ಟೆ–ಬಟ್ಟೆಗೆ ಸಾಲಸೋಲ ಮಾಡುವ ಪರಿಸ್ಥಿತಿ ಎದುರಾಗಿದೆ.

‘ಸಾಮಾನ್ಯ ದಿನಗಳಲ್ಲಿ ನಿತ್ಯ 40 ಬೈಕ್‌ಗಳನ್ನು ರಿಪೇರಿ ಮಾಡುತ್ತಿದ್ದೆವು. ಅದರಲ್ಲಿ ಕನಿಷ್ಠ 20 ಬೈಕ್‌ಗಳನ್ನು ಸರ್ವಿಸ್‌ ಮಾಡುತ್ತಿದ್ದೆವು. ಇದರಿಂದ ನಮ್ಮ ಅಂಗಡಿಯಲ್ಲಿನ ಆರು ಜನರ ಬದುಕು ನಡೆಯುತ್ತಿತ್ತು. ಈಗ ಎಲ್ಲವೂ ನಿಂತಿದೆ’ ಎಂದು ಬೇಸರದಿಂದ ಹೇಳಿದರುಶಿರಾ ಗೇಟ್‌ನ ಲಕ್ಷ್ಮಿ ರಂಗನಾಥ್‌ ಮೋಟಾರ್ಸ್‌ ಕಾರ್ಮಿಕ ಎನ್‌.ಶಶಿಧರ್‌.

ನಿತ್ಯ ಕನಿಷ್ಠ ₹500ರಿಂದ ಗರಿಷ್ಠ ₹1,500 ವರೆಗೆ ಕೈಗೆ ಸಿಗುತ್ತಿತ್ತು. ಲಾಕ್‌ಡೌನ್‌ ಘೋಷಣೆ ಬಳಿಕ ಒಂದೂ ಕಾಸು ಹುಟ್ಟುತ್ತಿಲ್ಲ ಎಂದು ಅಳಲು ಹೇಳಿಕೊಂಡರು.

‘ನಾನು ಮತ್ತು ನನ್ನ ಸಹಾಯಕ ದಿನಕ್ಕೆ ಮೂರ್ನಾಲ್ಕು ಗಾಡಿಗಳನ್ನು ರಿಪೇರಿ ಮಾಡಿ ತಲಾ ₹ 800 ಗಳಿಸುತ್ತಿದ್ದೆವು. ಈಗ ಮನೆ ನಿರ್ವಹಣೆಯೂ ಕಷ್ಟವಾಗಿದೆ’ ಎಂದು ಬಿ.ಎಚ್‌.ರಸ್ತೆ ಲಕ್ಷ್ಮಿ ಆಟೊ ವರ್ಕ್ಸ್‌ನ ಬಿ.ಚಂದ್ರಶೇಖರ್‌ ಹೇಳಿದರು.

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸರ್ಕಾರ ನಿರ್ದಿಷ್ಟ ಮೊತ್ತದ ಪರಿಹಾರ ನೀಡಲು ಮುಂದಾಗಿದೆ. ಅದೇ ರೀತಿ ನಮ್ಮಂಥ ಅಸಂಘಟಿತ ಕಾರ್ಮಿಕರ ಕಡೆಗೂ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಉಚಿತವಾಗಿ ವಾಹನ ರಿಪೇರಿ

ಲಾಕ್‌ಡೌನ್‌ ವೇಳೆ ಕರ್ತವ್ಯದಲ್ಲಿರುವ ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರ ವಾಹನಗಳು ಕೆಟ್ಟು ನಿಂತರೆ, ಉಚಿತವಾಗಿ ರಿಪೇರಿ ಮಾಡಿಕೊಡಲು ಲಕ್ಷ್ಮಿ ರಂಗನಾಥ್‌ ಮೋಟಾರ್ಸ್‌ನ ಕಾರ್ಮಿಕರು ಮುಂದಾಗಿದ್ದಾರೆ. ಸಂಪರ್ಕ: 9019816333

ಅಂಕಿ–ಅಂಶ

200

ತುಮಕೂರಿನಲ್ಲಿನ ಪಂಕ್ಚರ್‌ ಅಂಗಡಿ, ಆಟೊಮೊಬೈಲ್‌ ವರ್ಕ್‌, ಗ್ಯಾರೇಜ್‌, ಸರ್ವಿಸ್‌ ಸೆಂಟರ್‌ಗಳ ಅಂದಾಜು ಸಂಖ್ಯೆ

1,000

ವಾಹನಗಳ ರಿಪೇರಿ ಅಂಗಡಿಗಳಲ್ಲಿನ ಕಾರ್ಮಿಕರ ಅಂದಾಜು ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT