ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ ವೈದ್ಯಕೀಯ ಕಾಲೇಜು: ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

71ನೇ ಗಣರಾಜ್ಯೋತ್ಸವದ ಭಾಷಣದಲ್ಲಿ ಹೇಳಿಕೆ
Last Updated 27 ಜನವರಿ 2020, 2:42 IST
ಅಕ್ಷರ ಗಾತ್ರ

ತುಮಕೂರು: ಉದ್ಯೋಗಸೃಷ್ಟಿಗಾಗಿ ಜಿಲ್ಲೆಯ ಇನ್ನೂ ಮೂರು ತಾಲ್ಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪಿಸಲು ಚಿಂತನೆ ನಡೆದಿದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಜಿಲ್ಲಾಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಭಾನುವಾರ ಆಯೋಜಿಸಿದ್ದ ‘71ನೇ ಗಣರಾಜ್ಯೋತ್ಸವ’ದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಈಗಾಗಲೇ ಅಂತರಸನಹಳ್ಳಿ ಮತ್ತು ವಸಂತನರಸಪುರದಲ್ಲಿ ಕೈಗಾರಿಕಾ ಪ್ರದೇಶಗಳಿವೆ. ಗುಬ್ಬಿಯಲ್ಲಿನ ಎಚ್‌.ಎ.ಎಲ್‌. ಘಟಕವೂ ಕಾರ್ಯನಿರ್ವಹಣೆಗೆ ಸಿದ್ಧವಾಗುತ್ತಿದೆ. ಮುಂದೆ ಇನ್ಫೋಸಿಸ್‌ನ ಘಟಕವನ್ನು ತರುವ ಚಿಂತನೆ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ 6 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮತಿ ಸಿಕ್ಕಿದೆ. ಅವಕಾಶ ಒದಗಿದರೆ ಕೇಂದ್ರದ ಶೇ 50 ಮತ್ತು ರಾಜ್ಯದ ಶೇ 50 ಅನುದಾನದಲ್ಲಿ ತುಮಕೂರಿನಲ್ಲಿಯೂ ಕಾಲೇಜು ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದರು.

ಗಾರ್ಮೆಂಟ್‌ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಬಸ್‌ಗಳ ವ್ಯವಸ್ಥೆಯನ್ನು ಚಿಕ್ಕನಾಯಕನಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಮಾಡಿದ್ದೇವೆ. ಅದನ್ನು ಇಡಿ ಜಿಲ್ಲೆಯಾದ್ಯಂತ ವಿಸ್ತರಿಸುತ್ತೇವೆ ಎಂದು ಅವರು ತಿಳಿಸಿದರು.

ಭೂ ಜಲ ಅನುಷ್ಠಾನಗೊಂಡರೆ ಹೆಚ್ಚುವರಿ ಹಣ: ಕೇಂದ್ರ ಸರ್ಕಾರದ ಅಟಲ್‌ ಭೂ ಜಲ ಯೋಜನೆಯಡಿ ರಾಜ್ಯದ 14 ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರ್ಯಯೋಜನೆ ಸಿದ್ಧವಾಗುತ್ತಿದೆ. ಈ ಯೋಜನೆಯಡಿ ರಾಜ್ಯಕ್ಕೆ₹1,200 ಕೋಟಿ ಬಂದಿದೆ. ಭೂ ಜಲ ಯೋಜನೆ ಅನುಷ್ಠಾನಕ್ಕೆ ತುಮಕೂರಿನ 7 ತಾಲ್ಲೂಕುಗಳು ಆಯ್ಕೆ ಆಗಿವೆ. ಈ ಮೊತ್ತವನ್ನು 5 ವರ್ಷಗಳಲ್ಲಿ ಸಮರ್ಪಕವಾಗಿ ವೆಚ್ಚ ಮಾಡಿದರೆ, ಅನುದಾನದ ಶೇ 15ರಷ್ಟು ಹಣ ಹೆಚ್ಚುವರಿಯಾಗಿ ಬರಲಿದೆ. ಹಾಗಾಗಿ ಅನುಷ್ಠಾನಕ್ಕೆ ಒತ್ತು ಕೊಡುತ್ತಿದ್ದೇವೆ ಎಂದರು.

ಕೊಳವೆಬಾವಿಗಳಿಗೆ ಸೌರ ವಿದ್ಯುತ್‌ ಘಟಕ ಅಳವಡಿಸಿಕೊಳ್ಳಲು ಕೇಂದ್ರ ಸರ್ಕಾರದ ಶೇ 30 ಸಹಾಯಧನದೊಂದಿಗೆ ರಾಜ್ಯವೂ ಶೇ 30 ಸಹಾಯಧನ ನೀಡಲಿದೆ. ಘಟಕ ಅಳವಡಿಸಿಕೊಳ್ಳಲು ಅಗತ್ಯವಿರುವ ರೈತರಿಗೆ ನಬಾರ್ಡ್‌ನಿಂದ ಸಾಲ ಕೊಡಿಸುತ್ತೇವೆ ಎಂದು ಸಚಿವರು ಹೇಳಿದರು.

ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್‌, ತುಮಕೂರು ಮೇಯರ್‌ ಲಲಿತಾ ರವೀಶ್‌ ಇದ್ದರು.

ಸಚಿವರ ಭಾಷಣದ ಪ್ರಮುಖಾಂಶಗಳು

ಹೇಮಾವತಿಯ 7 ಟಿ.ಎಂ.ಸಿ.ಅಡಿ ಬರುವುದು ಬಾಕಿಯಿದೆ.

ಎಪ್ರಿಲ್‌ ಅಥವಾ ಮೇ ನಲ್ಲಿ ಮತ್ತೊಮ್ಮೆ ನಾಲೆಗಳಿಗೆ ಕುಡಿಯುವ ಉದ್ದೇಶಕ್ಕೆ ನೀರು ಹರಿಸುತ್ತೇವೆ.

ಜಿಲ್ಲೆಯಲ್ಲಿ 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ.

ತುಮಕೂರು ನಗರದಲ್ಲಿನ ಎಲ್ಲ ರೈಲ್ವೆ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸುತ್ತೇವೆ.

ನಾಲೆಗಳ ವಿಸ್ತರಣೆ ಮತ್ತು ನವೀಕರಣಕ್ಕೆ ಮೊದಲ ಹಂತದಲ್ಲಿ ₹250 ಕೋಟಿ, ಎರಡನೇ ಹಂತದಲ್ಲಿ ₹509 ಕೋಟಿ ವ್ಯಯಿಸುತ್ತಿದ್ದೇವೆ.

ಮಕ್ಕಳ ಹೆಜ್ಜೆನಾದಕ್ಕೆ ನಲಿದ ಮನ

ವಿವಿಧ ಶಾಲೆಗಳ ಮಕ್ಕಳು ನಡೆಸಿಕೊಟ್ಟ ದೇಶಭಕ್ತಿಯ ಭಾವ ಉಕ್ಕಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಕಣ್ಮನ ಸೆಳೆದವು.

ಸಿದ್ಧಗಂಗಾ ಶಾಲೆಯ ಮಕ್ಕಳು ‘ನಮ್ಮ ಬಾವುಟದ ಬಣ್ಣ ಮೂರು’ ಹಾಡಿಗೆ ಹೆಜ್ಜೆ ಹಾಕಿದರು. ಸರ್ವೋದಯ ಪ್ರೌಢಶಾಲೆ ಮತ್ತು ಸೋಮೇಶ್ವರ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿಗಳು ‘ಕಹತೆ ಹೈ ಹಮ್ ಕೋ ಪ್ಯಾರ್ ಸೇ ಇಂಡಿಯಾ ವಾಲೆ...'(ನಮ್ಮನ್ನು ಪ್ರೀತಿಯಿಂದ ಭಾರತೀಯರೆಂದು ಕರೆಯುತ್ತಾರೆ) ಎಂಬ ಹಿಂದಿ ಹಾಡಿಗೆ ಮೈ–ಮನ ತಣಿಸುವ ರೀತಿ ಆಕರ್ಷಕವಾಗಿ ಕುಣಿದಾಡಿದರು.

ಚೈತನ್ಯ ಟೆಕ್ನೋ ಶಾಲೆಯವರು ‘ಭಾರತಾಂಬೆ ನಿನ್ನ ಜನಮ ದಿನ’ ಗೀತೆಗೆ, ಕಿಡ್ಸ್‌ ಇಂಟರ್‌ನ್ಯಾಷನಲ್‌ ಶಾಲೆಯ ಮಕ್ಕಳು ‘ಮೇರಾ ಭಾರತ್‌ ಮಹಾನ್‌’ ರಚನೆಯ ಮಾಧುರ್ಯದ ಧ್ವನಿಗೆ ತಕ್ಕಂತೆ ನೃತ್ಯ ಮಾಡಿದರು. ಈ ಗೀತೆ–ನೃತ್ಯಗಳು ಸಭಿಕರ ಮನದ ಕಡಲಿನಲ್ಲಿ ದೇಶಭಕ್ತಿಯ ಅಲೆಯನ್ನು ಎಬ್ಬಿಸಿದವು.

ಹೆದ್ದಾರಿ ಗಸ್ತು ವಾಹನ ಹಸ್ತಾಂತರ: ಹೆದ್ದಾರಿ ಗಸ್ತು ಪಡೆಗೆ ನಾಲ್ಕು ಹೊಸ ವಾಹನಗಳನ್ನು ಇದೇ ವೇಳೆ ಹಸ್ತಾಂತರಿಸಲಾಯಿತು. ಅದರಲ್ಲಿ ವಾಹನಗಳ ಸಂಚಾರದ ಮೇಲೆ ಕಣ್ಣಿಡಲು ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಧ್ವನಿ ವರ್ಧಕದ ವ್ಯವಸ್ಥೆ ಇದೆ.

***

ಹೇಮಾವತಿ ನೀರು ಇದ್ದಾಗ ಬೆಳೆಗಾಗಿ ನಾಲೆಗಳಿಗೆ ಎರಡನೇ ಬಾರಿ ಹರಿಸುತ್ತೇನೆ ಎಂದೇಳಿದ್ದೆ. ಅದೇ ಮಾತನ್ನು ಈಗ ಹೇಳಕಾಗಲ್ಲ.

– ಜೆ.ಸಿ.ಮಾಧುಸ್ವಾಮಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT