ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಎಚ್ಎಎಲ್‌’ ಉಳಿವಿಗೆ ಸಂಸತ್‌ನಲ್ಲಿ ಚರ್ಚೆ: ಸಂಸದ ಮುದ್ದಹನುಮೇಗೌಡ

ನಿಧಾನ ಗತಿಯಲ್ಲಿ ಎಚ್ಎಎಲ್ ಸಾಯಿಸಲು ಕೇಂದ್ರ ಸರ್ಕಾರದ ಹುನ್ನಾರ, ಸಾರ್ವಜನಿಕ ಉದ್ದಿಮೆ ಉಪೇಕ್ಷಿಸಿ ಖಾಸಗಿಯವರಿಗೆ ಮಣೆ
Last Updated 20 ಅಕ್ಟೋಬರ್ 2018, 15:22 IST
ಅಕ್ಷರ ಗಾತ್ರ

ತುಮಕೂರು: ‘ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಕಂಪನಿಯನ್ನು ಮುಚ್ಚುವ ಹುನ್ನಾರವನ್ನು ಕೇಂದ್ರ ಸರ್ಕಾರ ನಡೆಸಿದ್ದು, ಯಾವುದೇ ಕಾರಣಕ್ಕೂ ಅದಕ್ಕೆ ನಮ್ಮ ಪಕ್ಷ ಅವಕಾಶ ಕೊಡುವುದಿಲ್ಲ. ನವೆಂಬರ್‌ನಲ್ಲಿ ನಡೆಯುವ ಸಂಸತ್ ಚಳಿಗಾಲ ಅಧಿವೇಶನದಲ್ಲಿ ನಾನು ಚರ್ಚಿಸಲಿದ್ದೇನೆ’ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಚ್ಎಎಲ್ ವಿಷಯ ಪ್ರಮುಖವಾಗಿ ಚರ್ಚೆಯಾಗುವುದರಿಂದ ಚಳಿಗಾಲದ ಅಧಿವೇಶನ ಈ ಬಾರಿ ಹೆಚ್ಚು ಬಿಸಿಯಾಗಿರುತ್ತದೆ’ ಎಂದು ಮುನ್ಸೂಚನೆ ನೀಡಿದರು.

ಎಚ್‌ಎಎಲ್ ಸಂಸ್ಥೆಯು ರಕ್ಷಣಾ ಇಲಾಖೆಯ ಆಧೀನ ಸಂಸ್ಥೆ. ಯುದ್ಧ ವಿಮಾನ, ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸಿ ಪೂರೈಸುವ ಪ್ರಧಾನ ಸಂಸ್ಥೆ. ಜಾಗತಿಕ ಮಟ್ಟದಲ್ಲಿ ತನ್ನದೇ ಉನ್ನತ ಸ್ಥಾನಮಾನ, ಹಿರಿಮೆ ಗರಿಮೆ ಹೊಂದಿರುವ ಉತ್ಕೃಷ್ಟ ಸಂಸ್ಥೆಯಾಗಿದೆ. ಆದರೆ, ನಮ್ಮ ಕೇಂದ್ರ ಸರ್ಕಾರವು ರಫೆಲ್ ಯುದ್ಧ ವಿಮಾನ ತಯಾರಿಕೆ ವಹಿಸಿ ಕೊಡದೇ ರಿಲಯನ್ಸ್‌ ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟಿರುವುದು ಖಂಡನೀಯ ಎಂದು ಟೀಕಿಸಿದರು.

ಇದರಿಂದ ಎಚ್ಎಎಲ್ ಜಾಗತಿಕ ಮಟ್ಟದಲ್ಲಿ ಗಳಿಸಿದ ಘನತೆ, ಗೌರವಕ್ಕೆ ಧಕ್ಕೆಯಾಗಿದೆ. ನಮ್ಮ ದೇಶದ ಪ್ರತಿಷ್ಠಿತ ಸಂಸ್ಥೆಯ ಗೌರವವನ್ನು ನಾವೇ ಕಳೆದಂತೆ ಆಗಿದೆ. ಒಂದು ಕಡೆ ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ ಪ್ರಚಾರ ಮಾಡುತ್ತದೆ. ಮತ್ತೊಂದೆಡೆ ಸಾರ್ವಜನಿಕ ಬೃಹತ್ ಉದ್ದಿಮೆಗಳನ್ನು ಕ್ರಮೇಣ ಸಾಯಿಸುತ್ತಿದೆ. ಎಚ್ಎಎಲ್ ಅಷ್ಟೇ ಅಲ್ಲ. ಬಿಎಚ್ಇಎಲ್ ಸಂಸ್ಥೆಯನ್ನೂ ಮುಚ್ಚಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಫ್ರಾನ್ಸ್ ಕಂಪನಿ ತಯಾರಿಸುವ ರಫೆಲ್ ಯುದ್ಧ ವಿಮಾನಗಳಿಗಿಂತ ಉತ್ಕೃಷ್ಟ ಗುಣಮಟ್ಟದ ಯುದ್ಧ ವಿಮಾನಗಳನ್ನು ನಮ್ಮ ಎಚ್ಎಎಲ್ ತಯಾರಿಸಲಿದೆ. ಆದರೆ, ಅದರ ಶಕ್ತಿಯ ಅರಿವು ಈಗಿನ ಕೇಂದ್ರ ಸರ್ಕಾರಕ್ಕೆ ಇಲ್ಲ. ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಫ್ರಾನ್ಸ್‌ನ ಡೆಸಾಲ್ಟ್ ಕಂಪನಿ ಜೊತೆ ಪಾಲುದಾರ ಕಂಪನಿಯಾಗಿ ಎಚ್ಎಎಲ್ ಸೇರಿಸಬೇಕಿತ್ತು. ಅದನ್ನೂ ಮಾಡಿಲ್ಲ. ಭಾರತೀಯ ವಾಯುಸೇನೆ ಸದೃಢವಾಗಿರಬೇಕಾದರೆ ಎಚ್ಎಎಲ್ ಉಳಿಯಲೇಬೇಕು. ಇಲ್ಲದೇ ಇದ್ದ ಯುದ್ಧ ವಿಮಾನಕ್ಕೆ ವಿದೇಶಗಳಿಗೆ ಅಂಗಲಾಚುವ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಕೆ ನೀಡಿದರು.

ಕೇವಲ ಸಾವಿರ ಕೋಟಿ ಮಾತ್ರ

’2004ರಲ್ಲಿ ಎಚ್ಎಎಲ್ ಬಳಿ ₹ 4,841 ಕೋಟಿ ಹಣ ಇತ್ತು. ಈಗ ಕೇವಲ ₹ 1000 ಕೋಟಿ ಮಾತ್ರ ಇದೆ. ದೇಶದಲ್ಲಿ ಕರ್ನಾಟಕದ ಬೆಂಗಳೂರು, ತುಮಕೂರು, ಉತ್ತರ ಪ್ರದೇಶದ ನಾಸಿಕ್, ಲಕ್ನೊ, ಕಾನ್ಪುರ, ಕೊರ್ವಾ, ಆಂಧ್ರಪ್ರದೇಶದ ಹೈದರಾಬಾದ್, ಕೇರಳದ ಕಾಸರಗೋಡ ಹಾಗೂ ಪಶ್ಚಿಮ ಬಂಗಾಳದ ಬರೇಕ್‌ಪುರ ಸೇರಿದಂತೆ ದೇಶದ 9 ಕಡೆ ಎಚ್ಎಎಲ್ ಘಟಕಗಳು ಇವೆ’ ಎಂದರು.

’ಈ 9 ಘಟಕಗಳಲ್ಲಿ 29,035 ಎಂಜಿನಿಯರ್‌ಗಳು ಸೇರಿ ಕೆಲಸಗಾರರು ಇದ್ದಾರೆ. ಪ್ರತಿ ತಿಂಗಳು ಈ ನೌಕರರಿಗೆ ₹ 358 ಕೋಟಿ ವೇತನ ಪಾವತಿ ಮಾಡಲಾಗುತ್ತಿದೆ. ಸದ್ಯ ಕೇವಲ ₹ 1000 ಕೋಟಿ ಮಾತ್ರ ಇರುವುದರಿಂದ ಮೂರು ತಿಂಗಳಿಗಷ್ಟೇ ವೇತನ ಮಾಡಲು ಸಾಧ್ಯ ಎನ್ನುಂತಹ ಸ್ಥಿತಿ ತಲುಪಿದೆ. ಇದಕ್ಕೆಲ್ಲ ಕೇಂದ್ರ ಸರ್ಕಾರವು ಮಾಡಿದ ನಿಧಾನಗತಿಯಲ್ಲಿ ಎಚ್ಎಎಲ್ ಸಾಯಿಸುವ ಹುನ್ನಾರವೇ ಕಾರಣ’ ಎಂದು ಹರಿಹಾಯ್ದರು.

’ಸದ್ಯ ₹ 61 ಸಾವಿರ ಕೋಟಿ ಮೊತ್ತದ ಯುದ್ಧ ವಿಮಾನ ಸೇರಿದಂತೆ ಯುದ್ಧ ಸಾಮಗ್ರಿ ತಯಾರಿಕೆ ಎಚ್ಎಎಲ್ ಮಾಡುತ್ತಿದ್ದು, ಇದು 2020ರವರೆಗೆ ನಡೆಯಲಿದೆ. ಬಳಿಕ ಕೆಲಸವೇ ಇಲ್ಲ. ಸಂಸ್ಥೆ ಉಳಿಯಬೇಕಾದರೆ, ಕೆಲಸಗಾರರಿಗೆ ಕೆಲಸ ನಿರಂತರ ಲಭಿಸಬೇಕಾದರೆ 5 ವರ್ಷದ ದೂರದೃಷ್ಟಿ ಯೋಜನೆ ಬೇಕು. ಅದಕ್ಕೆ ತಕ್ಕ ಹಾಗೆ ಕೆಲಸಗಳನ್ನು ರಕ್ಷಣಾ ಇಲಾಖೆ ವಹಿಸಿಕೊಡಬೇಕು. ಅದನ್ನು ಈಗಿನ ಕೇಂದ್ರ ಸರ್ಕಾರ ಮಾಡುತ್ತಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT