ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡ ನಿರೀಕ್ಷೆಯಲ್ಲಿ ಜೆಡಿಎಸ್‌

Last Updated 22 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್‌ ಹಾಗೂ ಜೆಡಿಎಸ್‌ ಅಭ್ಯರ್ಥಿ ಬಿ.ಎಂ.ಫಾರೂಕ್‌ ನಡುವೆ ನಾಲ್ಕನೇ ಸ್ಥಾನಕ್ಕಾಗಿ ತೀವ್ರ ಹಣಾಹಣಿ ನಡೆಯುವ ನಿರೀಕ್ಷೆ ಇದೆ.

ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆ 217. ಇದರಲ್ಲಿ 7 ಸ್ಥಾನಗಳು ಖಾಲಿ ಇವೆ. ಕಾಂಗ್ರೆಸ್‌ 123, ಬಿಜೆಪಿ 43 ಹಾಗೂ ಜೆಡಿಎಸ್‌ (ಏಳು ಬಂಡಾಯ ಶಾಸಕರೂ ಸೇರಿ) 37 ಸದಸ್ಯರಿದ್ದಾರೆ. ಪ್ರತಿ ಅಭ್ಯರ್ಥಿ ಗೆಲ್ಲಲು 44 ಮತಗಳು ಬೇಕಾಗಲಿವೆ.

ಕಾಂಗ್ರೆಸ್‌ ತನಗಿರುವ ಶಾಸಕರ ಬಲದಲ್ಲಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಎಐಸಿಸಿ ವಕ್ತಾರ, ಬಳ್ಳಾರಿ ಮೂಲದ ನಾಸೀರ್‌ ಹುಸೇನ್‌ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಎಲ್‌. ಹನುಮಂತಯ್ಯ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್‌ ಮೂರನೇ ಸ್ಥಾನ ಗೆಲ್ಲಲು ಜೆಡಿಎಸ್‌ ಬಂಡಾಯ ಶಾಸಕರು ಹಾಗೂ ನಾಲ್ವರು ‍ಪಕ್ಷೇತರ ಶಾಸಕರ ಬೆಂಬಲದ ಅಗತ್ಯವಿದೆ. ಏಳು ಬಂಡಾಯಗಾರರ ಜೊತೆ ನಿರಂತರ ಸಂಪರ್ಕದಲ್ಲಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಅವರ ಮತಗಳನ್ನು ಸಂಪೂರ್ಣ ನೆಚ್ಚಿಕೊಂಡಿದ್ದಾರೆ. ಅಲ್ಲದೆ, ಕೆಜೆಪಿಯ ಬಿ.ಆರ್. ಪಾಟೀಲ, ಕೆಎಂ‍ಪಿಯ ಅಶೋಕ್‌ ಖೇಣಿ, ಪಕ್ಷೇತರ ಸದಸ್ಯ ನಾಗೇಂದ್ರ ಒಳಗೊಂಡಂತೆ ಕೆಲವು ಪಕ್ಷೇತರ ಶಾಸಕರ ಬೆಂಬಲವನ್ನೂ ನಿರೀಕ್ಷಿಸಿದ್ದಾರೆ.

ಕಾಂಗ್ರೆಸ್‌ ಪ್ರಭಾವಿ ನಾಯಕರೊಬ್ಬರು ಬುಧವಾರ ರಾತ್ರಿ ಇಲ್ಲಿಯ ಪಂಚತಾರ ಹೊಟೇಲ್‌ನಲ್ಲಿ ಪಕ್ಷೇತರ ಶಾಸಕರ ಜೊತೆ ರಹಸ್ಯ ಸಭೆ ನಡೆಸಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಮತ್ತೊಂದೆಡೆ, ಜೆಡಿಎಸ್‌ ಅಭ್ಯರ್ಥಿ ಫಾರೂಕ್‌ ರಾಜ್ಯಸಭೆ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅವರೂ ಎಂಟು ಪಕ್ಷೇತರ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಪಕ್ಷ, ಏಳು ಬಂಡಾಯ ಶಾಸಕರಿಗೆ ‘ವಿಪ್‌’ ಕೊಟ್ಟಿರುವುದರಿಂದ ಪವಾಡ ನಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಅಕಸ್ಮಾತ್‌, ಮುಂದಿನ ಪ‍ರಿಣಾಮಗಳಿಗೆ ಹೆದರಿ ಏಳು ಶಾಸಕರ ಮತಗಳು ಜೆಡಿಎಸ್‌ಗೆ ಮರಳಿ ಬರುವುದಾದರೆ ಪಕ್ಷೇತರರಿಗೆ ‘ಬೇಡಿಕೆ’ ಹೆಚ್ಚಲಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

2016ರ ಜೂನ್‌ 11ರಂದು ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲೂ ಜೆಡಿಎಸ್‌ನ ಈ ಏಳು ಶಾಸಕರು ಅಡ್ಡ ಮತದಾನ ಮಾಡಿದ್ದರು. ಪರಿಣಾಮವಾಗಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಗೆದ್ದರು. ಮೊದಲ ಬಾರಿಗೆ ಚುನಾವಣೆ ಕಣದಲ್ಲಿದ್ದ ಫಾರೂಕ್‌ ಸೋತಿದ್ದರು.

ಬಿಜೆಪಿ ಅಭ್ಯರ್ಥಿಯಾಗಿ ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಕಣದಲ್ಲಿದ್ದು, ಈ ಪಕ್ಷದ 43 ಸದಸ್ಯರ ಜೊತೆ ಇಬ್ಬರು ಬಿಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು ಹಾಗೂ ಒಬ್ಬರು ಕೆಜೆಪಿ ಸದಸ್ಯರು ಬೆಂಬಲಕ್ಕಿದ್ದಾರೆ. ಆದರೆ, ಲಿಂಗಾಯತ– ವೀರಶೈವ ಲಿಂಗಾಯತ ಧರ್ಮದ ವಿಷಯದಲ್ಲಿ ಬಿಜೆಪಿ ತುಳಿದ ಹಾದಿಯಿಂದ ಬೇಸತ್ತಿ
ರುವ ಕೆಲವರು ಬೇರೆ ಪಕ್ಷಗಳಿಗೆ ವಲಸೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಲ್ಲೂ ಕೆಲವರು ಅಡ್ಡ ಮತದಾನ ಮಾಡಿದರೆ ಆಶ್ವರ್ಯವಿಲ್ಲ ಎಂದೂ ಹೇಳಲಾಗುತ್ತಿದೆ.

ಅಡ್ಡ ಮತದಾನದ ಭೀತಿ ಕಾಂಗ್ರೆಸ್‌ ಪಕ್ಷಕ್ಕೂ ಇದೆ. ಹದಿನಾಲ್ಕನೆ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಕೊನೆಯ ಚುನಾವಣೆ ಇದಾಗಿರುವುದರಿಂದ ಅಡ್ಡ ಮತದಾನದ ಆತಂಕ ಮೂರೂ ಪ್ರಮುಖ ಪಕ್ಷಗಳಿಗೂ ಇದ್ದೇ ಇದೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT