ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ತವರಿನಲ್ಲೇ ‘ಸಕಾಲ’ ಸೇವೆ ಇಲ್ಲ!

ತಿಪಟೂರು ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆರೋಪ
Last Updated 14 ಸೆಪ್ಟೆಂಬರ್ 2021, 7:03 IST
ಅಕ್ಷರ ಗಾತ್ರ

ತಿಪಟೂರು: ‘ನಗರಸಭೆಯಲ್ಲಿ ಸಕಾಲ ವಿಭಾಗವನ್ನೇ ಇಲ್ಲಿಯವರೆವಿಗೂ ತೆರೆದಿಲ್ಲ. ಸಾರ್ವಜನಿಕರಿಂದ ವಿವಿಧ ವಿಭಾಗದಲ್ಲಿ ಮಾತ್ರವೇ ಅರ್ಜಿ ಪಡೆಯುತ್ತಿದ್ದು, ಸಚಿವರ ತವರಿನಲ್ಲಿಯೇ ಸಕಾಲ ಸೇವೆ ದೊರೆಯದಿದ್ದರೆ ಸಾರ್ವಜನಿಕರ ಗತಿ ಏನಾಗಬೇಕು’ ಎಂದು ಸದಸ್ಯ ಟಿ.ಎನ್. ಪ್ರಕಾಶ್‌ ಪ್ರಶ್ನಿಸಿದರು.

ನಗರದ ನಗರಸಭೆಯ ನೂತನ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಪಿ.ಜೆ. ರಾಮಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆ ಆವರಣದಲ್ಲಿ ಸಾರ್ವಜನಿಕರಿಂದ ಹಲವು ವಿಭಾಗಗಳ ಕೆಲಸ, ಕಾರ್ಯಗಳಿಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಸರ್ಕಾರದ ಆದೇಶದಂತೆ ಇದೀಗ ಸಕಾಲದಲ್ಲಿಯೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಯೂ ಅರ್ಜಿ ಸ್ವೀಕರಿಸಬೇಕು. ಆದರೆ, ತಿಪಟೂರು ನಗರಸಭೆಯಲ್ಲಿ ಇದುವರೆವಿಗೂ ಸಕಾಲ ವಿಭಾಗವನ್ನೇ ತೆರೆಯದೆ ಅಧಿಕಾರಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂದು ದೂರಿದರು.

ತಾಲ್ಲೂಕಿನ ಶಾಸಕ ಬಿ.ಸಿ. ನಾಗೇಶ್ ಅವರೇಸಕಾಲ ಸಚಿವರೂ ಆಗಿದ್ದಾರೆ. ತವರು ಕ್ಷೇತ್ರದ ಕಚೇರಿಯಲ್ಲಿಯೇ ಸಕಾಲ ಸೇವೆ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಎಂದರೆ ಇಡೀ ರಾಜ್ಯದ ಗತಿ ಏನು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ರಾಮಮೋಹನ್‌, ‘ಕೂಡಲೇ ನಗರಸಭೆ ಆವರಣದಲ್ಲಿಯೇ ಪ್ರತ್ಯೇಕವಾಗಿ ಸಕಾಲ ಸೇವಾ ವಿಭಾಗ ತೆರೆಯಲಾಗುವುದು’ ಎಂದು ಭರವಸೆ ನೀಡಿದರು.

ಆಸ್ತಿಗಳಿಗೆ ಇ-ಖಾತೆ ನೀಡುವಲ್ಲಿ ತುಂಬಾ ವಿಳಂಬವಾಗುತ್ತಿದೆ. ಸಾರ್ವಜನಿಕರು ನಗರಸಭೆಯ ತಪ್ಪಿನಿಂದಾಗಿ ಪರಿತಪಿಸುವಂತಾಗಿದೆ. 2016ನೇ ಸಾಲಿನಲ್ಲಿ ಇ-ಖಾತೆ ವಿಚಾರವಾಗಿ ಸರ್ಕಾರ ಸುತ್ತೋಲೆ ಹೊರಡಿಸಿದೆ. 2000ನೇ ಸಾಲಿಗಿಂತ ಮುಂಚಿತವಾಗಿ ನಗರಸಭೆಯಲ್ಲಿ ದಾಖಲಾಗಿರುವಂತಹ ಆಸ್ತಿಗಳನ್ನು ಅಧಿಕೃತ ಎಂದು ಘೋಷಿಸಿ ಇ-ಖಾತೆ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.

2000ನೇ ಸಾಲಿಗಿಂತ ಮುಂಚಿತವಾಗಿ ನಗರಸಭೆಯಿಂದಲೇ ಎಂ.ಆರ್.19ರಲ್ಲಿ ದಾಖಲಿಸಿರುವ ಆಸ್ತಿಗಳನ್ನು ‘ನೀವು ಅಧಿಕೃತ’ ಎಂದು ನೀಡಬೇಕು. ಆದರೆ, ಸರ್ಕಾರ ಸುತ್ತೋಲೆಯನ್ನು ಉಲ್ಲಂಘನೆ ಮಾಡಿ ಆ ಆಸ್ತಿಗಳಿಗೆ ಅನಧಿಕೃತ ಎಂದು ನಮೂದಿಸಿ ಕೊಡಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರಿಗೆ ಬ್ಯಾಂಕ್‍ನಿಂದ ಸಾಲ ಸೌಲಭ್ಯ ಸೇರಿದಂತೆ ಇನ್ನಿತರ ಸೌಲಭ್ಯ ದೊರೆಯದೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಪೌರಾಯಕ್ತ ಉಮಾಕಾಂತ್, ‘2017ನೇ ಸಾಲಿನಲ್ಲಿ ಆಸ್ತಿಯ ಇ–ಖಾತೆ ಬಗ್ಗೆ ಮತ್ತೊಂದು ಸುತ್ತೋಲೆ ಬಂದಿದೆ. ಅದರ ಅಡಿಯಲ್ಲಿ ಇ-ಖಾತೆ ಮಾಡಲು ಸಾಧ್ಯವಾಗುವುದಿಲ್ಲ. ಇಡೀ ಜಿಲ್ಲೆಯಲ್ಲಿಯೇ ಈ ಸಮಸ್ಯೆ ಎದುರಾಗಿದೆ. ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸೆ. 17ರಂದು ಜಿಲ್ಲೆಯಲ್ಲಿ ಸಭೆ ಕರೆಯಲಾಗಿದೆ. ಅಲ್ಲಿ ಚರ್ಚೆಯಾದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಸದಸ್ಯೆ ಯಮುನಾ ಧರಣೀಶ್ ಮಾತನಾಡಿ, ‘ವಾರ್ಡ್ 13ರಲ್ಲಿ ಕಳೆದ ಹಲವಾರು ಬಾರಿ ಬೋರ್‌ವೆಲ್ ಸಮಸ್ಯೆ ಎದುರಾಗಿದೆ. ಅದನ್ನು ಸರಿಪಡಿಸಲು ಅಧಿಕಾರಿ ಮುನಿಸ್ವಾಮಿ 15 ದಿನಗಳ ವರೆಗೆ ಸಮಯ ತೆಗೆದುಕೊಳ್ಳುತ್ತಾರೆ. ವಾರ್ಡ್‍ನ ಜನರು ನೀರು ಇಲ್ಲದೇ ಪರಿತಪಿಸುವಂತಾಗಿದೆ’ ಎಂದರು.

‘ಗಾಂಧಿನಗರದ ವಾರ್ಡ್‍ಗಳ ಜನರನ್ನು ಕಡೆಗಣಿಸಿದ್ದು ಮೂಲಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಸದಸ್ಯೆ ನೂರ್‍ಬಾನು ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಮುನ್ನಾ, ಆಶ್ರಿಫಾ ಬಾನು, ಹಬ್ಬದ ಸಂದರ್ಭದಲ್ಲಿ ಹೇಮಾವತಿ ನೀರು ಬಿಡದೇ ಪರಿತಪಿಸುವಂತಾಯಿತು ಎಂದು ಆರೋಪಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಸೊಪ್ಪು ಗಣೇಶ್, ಎಇಇ ನಾಗೇಶ್‌ ಎನ್., ಪರಿಸರ ಎಂಜಿನಿಯರ್‌ ರಾಘವೇಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT