ಸೋಮವಾರ, ಸೆಪ್ಟೆಂಬರ್ 16, 2019
27 °C
ಪೋಷಣ ಅಭಿಯಾನ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಹೇಳಿಕೆ

ಗ್ರಾಮೀಣರ ಅಪೌಷ್ಟಿಕತೆ ನಿವಾರಣೆಗೆ ‘ಪೋಷಣ’

Published:
Updated:
Prajavani

ತುಮಕೂರು: ಗ್ರಾಮೀಣ ಜನರ ಅಪೌಷ್ಟಿಕತೆ ನಿವಾರಣೆಗೆ ಪೋಷಣ ಅಭಿಯಾನವು ಪೂರಕವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಹೇಳಿದರು.

ಕೇಂದ್ರ ಸರ್ಕಾರದ ಬಳ್ಳಾರಿ ಕ್ಷೇತ್ರ ಜನ ಸಂರ್ಪಕ ಕಾರ್ಯಾಲಯ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಪಂಚಾಯಿತಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಶಿರಾ ಗ್ರಾಮ ಪಂಚಾಯಿತಿ,  ತಾವರೆಕೆರೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಆಯೋಜಿಸಿದ್ಧ ಪೋಷಣ ಅಭಿಯಾನ ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

’ಸರ್ಕಾರವು ಅಪೌಷ್ಟಿಕತೆಯ ನಿವಾರಣೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಹಲವಾರು ಯೋಜನೆಗಳನ್ನು ರೂಪಿಸಿದೆ. ಗ್ರಾಮೀಣ ಪ್ರದೇಶದ ಜನರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ ಮಾತನಾಡಿ ‘ಸ್ಥಳೀಯವಾಗಿ ಹೇರಳವಾಗಿ ದೊರೆಯುವ ಧಾನ್ಯ, ತರಕಾರಿ, ಸೊಪ್ಪು, ಹಣ್ಣು, ಹಂಪಲುಗಳನ್ನು ಗರ್ಭಿಣಿ- ಬಾಣಂತಿಯರು ಹಾಗೂ ಮಕ್ಕಳು ಸೇವಿಸಿ ಅಪೌಷ್ಟಿಕತೆಯಿಂದ ಮುಕ್ತರಾಗಬೇಕು ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಟಿ ಚಂದ್ರಪ್ಪ, ಮಾತನಾಡಿ, ಸ್ವಚ್ಛತೆ ಇಲ್ಲದಿರುವ ಜಂಕ್ ಫುಡ್ ಮತ್ತು ಬೇಕರಿ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮಕ್ಕಳಲ್ಲಿ ಕಬ್ಬಿಣಾಂಶ, ಸೂಕ್ಷ್ಮ ಪೋಷಕಾಂಶಗಳ ಕೊರತೆಗೆ ಕಾರಣವಾಗಿದೆ. ಇದರಿಂದ ಜಂತು ಹುಳುಗಳ ಬಾಧೆ, ರಕ್ತಹೀನತೆಗೊಳಗಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ’ ಎಂದರು.

ಜಾಗೃತಿ ಜಾಥಾ ಕಾರ್ಯಕ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜು ಚಾಲನೆ ನೀಡಿದರು.

ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ವಿವಿಧ ಪೌಷ್ಟಿಕಾಂಶದ ಆಹಾರ ಪದಾರ್ಥಗಳ ಪ್ರದರ್ಶನ, ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಹಾಗೂ ಚಿತ್ರಕಲೆ ಸ್ವರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ರೇಣುಕಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಲೋಚನಮ್ಮ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬಸವರಾಜು, ಅಂಬಿಕಾ, ಮೇಲ್ವಿಚಾರಕಿ, ಸುರೇಖ, ಅಂಗನವಾಡಿ ಕಾಯಕರ್ತೆಯರು ಮತ್ತು ಅಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Post Comments (+)