ಬುಧವಾರ, ಜೂನ್ 16, 2021
28 °C
ಕುಣಿಗಲ್‌: ಇಲಾಖೆ ಹೊಣೆ ಜತೆಗೆ 4 ಪಂಚಾಯಿತಿಗಳ ಜವಾಬ್ದಾರಿ

ಅಧಿಕಾರಿಗಳಿಗೆ ಹೊರೆಯಾದ ಆಡಳಿತಾಧಿಕಾರ

ಟಿ.ಎಚ್.ಗುರುಚರಣ್ ಸಿಂಗ್ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರ ಜೂನ್‌ 25ರಂದೇ ಆಡಳಿತಾಧಿಕಾರಿಗಳನ್ನು ನೇಮಿಸಿದೆ. ಆದರೆ ಕೆಲ ಅಧಿಕಾರಿಗಳಿಗೆ 4–5 ಪಂಚಾಯಿತಿಗಳ ಹೊಣೆ ನೀಡಿರುವುದರಿಂದ ಅಧಿಕಾರಿಗಳು ಜವಾಬ್ದಾರಿವಹಿಸಿಕೊಳ್ಳಲು ಉತ್ಸಾಹ ತೋರುತ್ತಿಲ್ಲ. 

ಕೆಲವೆಡೆ ಅಧಿಕಾರಿಗಳು ಅಧಿಕಾರ ಸ್ವೀಕರಿಸಿಲ್ಲ. ಕೆಲವರು ತಮ್ಮ ಪ್ರಭಾವ ಬಳಸಿ ನುಣಚಿಕೊಂಡಿದ್ದರೆ, ಇನ್ನೂ ಕೆಲವರು ಶಾಸ್ತ್ರಕ್ಕೆ ಎಂಬಂತೆ ಅಧಿಕಾರ ವಹಿಸಿಕೊಂಡ ಪರಿಣಾಮ ಗ್ರಾಮ ಪಂಚಾಯಿತಿಗಳ ಆಡಳಿತ ವ್ಯವಸ್ಥೆ ಕುಸಿದಿದೆ.

ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರು, ಪಿಎಂಜಿಎಸ್‌ವೈ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ, ಹೇಮಾವತಿ ನಾಲಾ ವಲಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮತ್ತು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಿಗೆ ತಲಾ 4 ಪಂಚಾಯಿತಿಗಳ ಆಡಳಿತಾಧಿಕಾರಿ ಜವಾಬ್ದಾರಿ ನೀಡಲಾಗಿದೆ.

ತಾಲ್ಲೂಕು ಕೇಂದ್ರದಲ್ಲಿ ನೆಪಮಾತ್ರಕ್ಕೆ ವಾಸವಿರುವ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರಿಗೆ ಮಡಿಕೆಹಳ್ಳಿ, ಯಲಿಯೂರು ಮತ್ತು ಹುಲಿಯೂರುದುರ್ಗ ಪಂಚಾಯಿತಿಗಳ ಹೊಣೆ ನೀಡಲಾಗಿದೆ. 5 ಪಂಚಾಯಿತಿಗಳ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಬೂಬು ಹೇಳಿ ಕರ್ತವ್ಯದಿಂದ ನುಣಿಚಿಕೊಂಡಿದ್ದಾರೆ. ಹಾಗಾಗಿ ಬೇರೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮಿಕಾಂತ ವರ್ಗಾವಣೆ ಆಗಿದ್ದಾರೆ. ಗುಬ್ಬಿ ತಾಲ್ಲೂಕಿನ ಮೀನುಗಾರಿಕೆ ಅಧಿಕಾರಿ ಕಾವ್ಯಾ ಅವರಿಗೆ ಇಲ್ಲಿನ ಪ್ರಭಾರ ಅಧಿಕಾರಿಯ ಜವಾಬ್ದಾರಿ ವಹಿಸಲಾಗಿದೆ. ಈಗಾಗಲೇ ಗುಬ್ಬಿ ತಾಲ್ಲೂಕಿನ ಮೂರು ಪಂಚಾಯಿತಿಗಳ ಅಡಳಿತಾಧಿಕಾರಿ ಆಗಿರುವ ಕಾವ್ಯಾ ಅವರು, ಕುಣಿಗಲ್ ತಾಲ್ಲೂಕಿನ 4 ಪಂಚಾಯಿತಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕೂಲಿ ಹಣ ಪಾವತಿಗೆ ಕಷ್ಟವಾಗುತ್ತಿದೆ. ಕುಡಿಯುವ ನೀರಿನ ವ್ಯವಸ್ಥೆ , ನೈರ್ಮಲ್ಯ ಮತ್ತು ಬೀದಿ ದೀಪಗಳ ನಿರ್ವಹಣೆಗೆ ಸಮಸ್ಯೆ ಆಗುತ್ತಿದೆ. 30 ಗ್ರಾಮ ಪಂಚಾಯಿತಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದೆ. ಪಿಡಿಒಗಳು ಮತ್ತು ಆಡಳಿತಾಧಿಕಾರಿಗಳ ನಡುವಿನ ಸಾಮರಸ್ಯದ ಕೊರತೆಯಿಂದ ಸಮಸ್ಯೆ ಹೆಚ್ಚಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎನ್ನುವುದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರ ಒತ್ತಾಯ.

‘ಕನಿಷ್ಠ ಎರಡು ಪಂಚಾಯಿತಿಗೆ ಒಬ್ಬ ಆಡಳಿತಾಧಿಕಾರಿ ನೇಮಕ ಆಗಬೇಕು. ನರೇಗಾ ಉದ್ಯೋಗ ಚೀಟಿ ಹೆಚ್ಚಾಗಬೇಕು. ನರೇಗಾ ಯೋಜನೆ ಕೂಲಿ ಆಧಾರಿತ ಯೋಜನೆ ಆಗಬೇಕು. ಕೊರೊನಾ ನಿಯಂತ್ರಣಕ್ಕೆ ಆಡಳಿತಾಧಿಕಾರಿಗಳು ಶ್ರಮಿಸಬೇಕು’ ಎನ್ನುವುದು ಸಂಸದ ಡಿ.ಕೆ. ಸುರೇಶ್ ಅವರ ಅಭಿಪ್ರಾಯ.

ರೇಷ್ಮೆ ಇಲಾಖೆಯಲ್ಲಿ 7 ಪ್ರಭಾರ ಹುದ್ದೆಗಳನ್ನು ನಿರ್ವಹಿಸುತ್ತಿರುವ ರೇಷ್ಮೆಗೂಡಿನ ಮಾರುಕಟ್ಟೆ ಸಹಾಯಕ ನಿರ್ದೇಶಕ ಕೃಷ್ಣಪ್ಪ ಅವರಿಗೆ ಮತ್ತೂ ಹೇರೂರ್, ಬೇಗೂರ್,ಟಿ.ಹೊಸಹಳ್ಳಿ, ಕಿತ್ತನಾಮಂಗಲ ಮತ್ತು ಸಂತೆಮಾವತ್ತೂರು ಪಂಚಾಯಿತಿಗಳ ಜವಾಬ್ದಾರಿ ನೀಡಲಾಗಿದೆ.

ಕೃಷ್ಣಪ್ಪ ಈಗಾಗಲೇ ಕುಣಿಗಲ್ ರೇಷ್ಮೆಗೂಡು ಮಾರುಕಟ್ಟೆ, ರೇಷ್ಮೆಕೃಷಿ ಕ್ಷೇತ್ರ ಕುಣಿಗಲ್, ಬಿಳಿದೇವಾಲಯ ಮತ್ತು ಸೀಗೇಹಳ್ಳಿ, ಕುಣಿಗಲ್ ಮತ್ತು ಎಡೆಯೂರಿನ ತಾಂತ್ರಿಕ ಸೇವಾ ಕೇಂದ್ರ, ರೇಷ್ಮೆ ಸಹಾಯಕ ನಿರ್ದೇಶಕರು ಮತ್ತು ಉಪನಿರ್ದೇಶಕ ಬಿಳಿದೇವಾಲಯಗಳ ಪ್ರಭಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿ, ಪರ್ಯಾಯ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.