ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ದುಬಾರಿ: ಸೈಕಲ್ ಜಾಥಾ

Last Updated 7 ಜುಲೈ 2021, 16:30 IST
ಅಕ್ಷರ ಗಾತ್ರ

ತುಮಕೂರು: ಇಂಧನ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಬುಧವಾರ ಸೈಕಲ್ ಜಾಥಾ ನಡೆಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಾಥಾ ಆರಂಭವಾಯಿತು. ಶಾಸಕ ಡಾ.ಜಿ.ಪರಮೇಶ್ವರ ಸಹ ಸೈಕಲ್ ತುಳಿದು ಪ್ರತಿಭಟನೆಗೆ ಸಾಥ್ ನೀಡಿದರು. ಎತ್ತಿನ ಬಂಡಿ ಸಹ ಮೆರವಣಿಗೆಯಲ್ಲಿ ಸಾಗಿತು. ಜಾಥಾವು ಟೌನ್‌ಹಾಲ್ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ಕೇಂದ್ರ, ರಾಜ್ಯ ಸರ್ಕಾರ, ಬಿಜೆಪಿ ವಿರುದ್ಧ ಕಾರ್ಯಕರ್ತರು ಧಿಕ್ಕಾರ, ಘೋಷಣೆ ಕೂಗಿದರು. ಬೆಲೆ ಏರಿಕೆಮಾಡಿ ಜನಸಾಮಾನ್ಯರನ್ನು ಶೋಷಣೆಮಾಡಿ, ಹಿಂಸೆ ನೀಡುತ್ತಿರುವ ಸರ್ಕಾರ ತೊಲಗಬೇಕು ಎಂದು ಒತ್ತಾಯಿಸಿದರು.

ಪರಮೇಶ್ವರ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚದಂತೆ ತಡೆಯಲು ಸಾಧ್ಯವಾಗಿಲ್ಲ. ಬಿಜೆಪಿ ದುರಾಡಳಿತವನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಪ್ರತಿಭಟನೆ, ಸೈಕಲ್ ಜಾಥಾ ನಡೆಸಲಾಗುತ್ತಿದೆ. ಜನ ವಿರೋಧಿ ಸರ್ಕಾರ ಮೊದಲು ತೊಲಗಬೇಕು’ ಎಂದು ಒತ್ತಾಯಿಸಿದರು.

ಕೇಂದ್ರದಲ್ಲಿ ಎರಡನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿದ್ದು, ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ಸೋತಿದೆ. ರಾಜ್ಯದಲ್ಲೂ ಅಧಿಕಾರಕ್ಕೆ ಬಂದು ಅಷ್ಟೇ ಸಮಯವಾಗಿದ್ದು, ಸಾರ್ವಜನಿಕರ ಹಿತವನ್ನು ಮರೆತಿದೆ. ಕೋವಿಡ್‌–19ನಿಂದ ಜನರು ಸಾವನ್ನಪ್ಪಿದರೂ ನೆರವಿಗೆ ಬರಲಿಲ್ಲ. ಸಾವನ್ನು ರಾಜ್ಯದ ಜನರು ಮರೆಯುವುದಿಲ್ಲ. ಈ ಸಾವಿಗೆ ಮುಂದೆ ತಕ್ಕ ಉತ್ತರ ನೀಡುತ್ತಾರೆ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ತತ್ತರಿಸಿದ್ದಾರೆ. ಕನಿಷ್ಠ ತರಕಾರಿ ಕೊಳ್ಳುವ ಶಕ್ತಿಯೂ ಇಲ್ಲವಾಗಿದೆ. ಪರಿಸ್ಥಿತಿ ಕೈಮೀರಿದ್ದು, ಕರುಣೆ ಮರೆತು ಆಡಳಿತ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ‘ಕೋವಿಡ್ ಚಿಕಿತ್ಸೆ ಸಿಗದೆ ಸಾವಿರಾರು ಮಂದಿ ಬಡವರು ಸಾವನ್ನಪ್ಪಿದರು. ಆದರೆ ಸಮರ್ಥವಾಗಿ ಕೋವಿಡ್ ನಿರ್ವಹಣೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೇವಲ ಹೇಳಿಕೆ, ಭರವಸೆಗೆ ಮಾತ್ರ ಸರ್ಕಾರ ಸೀಮಿತವಾಗಿದೆ’ ಎಂದು ಆರೋಪಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಇತಿಹಾಸದಲ್ಲೇ ಇಷ್ಟೊಂದು ದುಬಾರಿ ಆಗಿರಲಿಲ್ಲ. ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಪೆಟ್ರೋಲ್ ಬ್ಯಾರಲ್ ಬೆಲೆ ₹110 ಡಾಲರ್ ಇದ್ದರೂ ದೇಶದಲ್ಲಿ ಲೀಟರ್ ₹60ಕ್ಕೆ ಸಿಗುತಿತ್ತು. ಈಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿದಿದ್ದರೂ ನಮ್ಮಲ್ಲಿ ತೆರಿಗೆ ಹೆಚ್ಚಿಸಿ ದುಬಾರಿ ಬೆಲೆಗೆ ಮಾರಾಟಮಾಡಿ ಜನರನ್ನು ಶೋಷಿಸಲಾಗುತ್ತಿದೆ. ಇದೊಂದು ಬಡವರ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಮುಖಂಡರಾದ ಕೆಂಚಮಾರಯ್ಯ, ಆರ್.ನಾರಾಯಣ್, ಜೆ.ಕುಮಾರ್, ರಫೀಕ್‍ ಅಹಮದ್, ಮುರುಳೀಧರ ಹಾಲಪ್ಪ, ಇಕ್ಬಾಲ್ ಅಹಮದ್, ಮಹೇಶ್, ನಯಾಜ್ ಅಹಮದ್,ಆರ್.ರಾಮಕೃಷ್ಣ, ಅತೀಕ್ ಅಹಮದ್, ಆಟೊ ರಾಜು, ಮೆಹಬೂಬ್ ಪಾಷ, ರಾಜು, ಗೀತಾ ರುದ್ರೇಶ್, ಗೀತಮ್ಮ, ಸುಜಾತ, ದಾದಾಪೀರ್, ಅಬ್ದುಲ್ ರಹೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT