ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥ ಮಕ್ಕಳ ‘ದಯಾಕಿರಣ’

ಕುಣಿಗಲ್‌: ವಾಣಿಗೆರೆಯ ಆಶ್ರಯ ತಾಣಕ್ಕೀಗ ಪ್ರಥಮ ವರ್ಷದ ಸಂಭ್ರಮ
Last Updated 13 ಮಾರ್ಚ್ 2020, 11:23 IST
ಅಕ್ಷರ ಗಾತ್ರ

ಕುಣಿಗಲ್: ಅನಾಥ ಮಕ್ಕಳನ್ನು ರಕ್ಷಿಸಿ, ಪಾಲನೆ– ಪೋಷಣೆ ಮಾಡುತ್ತಿರುವ ತಾಲ್ಲೂಕಿನ ವಾಣಿಗೆರೆಯ ದಯಾಕಿರಣಕ್ಕೀಗ ಪ್ರಥಮ ವರ್ಷದ ವಾರ್ಷಿಕೋತ್ಸವ ಸಂಭ್ರಮ.

ಜಿಲ್ಲೆಯಲ್ಲೇ ಮೊದಲಿಗೆ ಆರಂಭವಾದ ದಯಾಕಿರಣ ಒಂದು ವರ್ಷದಲ್ಲಿ 42 ಮಕ್ಕಳನ್ನು ರಕ್ಷಿಸಿ, ಪಾಲನೆ ಮಾಡಿದೆ. 21 ಮಕ್ಕಳನ್ನು ದತ್ತು ನೀಡಿದ ಹೆಗ್ಗಳಿಕೆಗೂ ಪಾತ್ರವಾಗಿದೆ.

ಹುಟ್ಟುತ್ತಲೇ ಪೋಷಕರಿಗೆ ಬೇಡವಾಗಿ, ಪೊದೆಗಳಲ್ಲಿ, ಚರಂಡಿಯ ಮಗ್ಗುಲಲ್ಲಿ, ಬೇಲಿಯ ಮುಳ್ಳುಗಿಡದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಮಕ್ಕಳು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

ಕೇಂದ್ರದಲ್ಲಿನ ಒಂದೊಂದು ಮಗುವಿನ ಹಿಂದೆಯೂ ಮನಕಲಕುವ ಕತೆಗಳಿವೆ. ತುಮಕೂರಿನ ಆರ್‌ಟಿಒ ಕಚೇರಿ ಗಣೇಶ ದೇವಾಲಯದ ಮುಂದೆ ಬಿದ್ದಿದ್ದ ಆ ಕಂದಮ್ಮನನ್ನು ಕೆಂಪಿರುವೆಗಳು ಮುತ್ತಿದ್ದವು. ದಾಬಸ್‌ಪೇಟೆಯ ಕೈಗಾರಿಕಾ ವಲಯದ ಶೆಡ್ ಮುಂಭಾಗದ ಕಾರ್ಖಾನೆ ತ್ಯಾಜ್ಯದ ಡಬ್ಬದಲ್ಲಿ ಬಿದ್ದು, ಉಸಿರಾಡಲಾಗದೆ ಅರಚುತ್ತಿದ್ದ ಮಗುವಿಗೆ ದಯಾಕಿರಣ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಮದ್ಯವ್ಯಸನಿಯಾಗಿದ್ದ ತಾಯಿಗೆ ವಾಸಿಸಲು ಯೋಗ್ಯ ಮನೆಯಿಲ್ಲ. ರಸ್ತೆ ಬದಿಯ ಗುಡಿಸಿಲಿನಲ್ಲಿ ವಾಸವಿದ್ದ ಆಕೆ ಮಗುವಿನ ಆರೈಕೆಗೆ ಗಮನ ನೀಡಲಾಗದೆ ಕುಡಿದು ಮಲಗುತ್ತಿದ್ದಳು. ಆರೈಕೆ ಇಲ್ಲದ ಮಗು ಚಿಂತಾಜನಕ ಸ್ಥಿತಿಯಲ್ಲಿತ್ತು. ಹಠಬಿಡದ ತಾಯಿಯಿಂದ ಮಗುವನ್ನು ಬೇರ್ಪಡಿಸಿ ತರುವಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದರು. ಆರು ಹೆಣ್ಣು ಮಕ್ಕಳೆಂದು ಏಳನೆಯ ಹೆಣ್ಣು ಶಿಶುವನ್ನು ಪೋಷಕರೆ ತಂದು ಕೇಂದ್ರಕ್ಕೆ ಒಪ್ಪಿಸಿದ ಮಗು ಇಲ್ಲಿದೆ. ಒಂದು ವರ್ಷದಲ್ಲಿ ಇಂತಹ ಅನೇಕ ಮಕ್ಕಳಿಗೆ ರಕ್ಷಣೆ ನೀಡಿದ ಹೆಮ್ಮೆ ಕೇಂದ್ರಕ್ಕಿದೆ.

ಸಮಾಜಕ್ಕೆ ಹೆದರಿಯೊ, ಆರೋಗ್ಯ ಸಮಸ್ಯೆಯಿಂದಲೊ ಅಥವಾ ಬಡತನದ ಕಾರಣದಿಂದಲೊ ಅನಾಥವಾಗುವ ಮಕ್ಕಳ ರಕ್ಷಣೆಗೆ ದಯಾಭವನ ಬದ್ಧವಾಗಿದೆ ಎನ್ನುತ್ತಾರೆ ಕೇಂದ್ರದ ವ್ಯವಸ್ಥಾಪಕ ರಮೇಶ್‌.

ಮಕ್ಕಳನ್ನು ತೊಟ್ಟಿಯಲ್ಲಿ ಎಸೆಯುವುದನ್ನು ನಿಯಂತ್ರಿಸಲೆಂದು ಸರ್ಕಾರ ಮಮತೆಯ ತೊಟ್ಟಿಲು ಕಾರ್ಯಕ್ರಮ ಪ್ರಾರಂಭಿಸಿ ‘ಮಕ್ಕಳು ತೊಟ್ಟಿಗಲ್ಲ- ತೊಟ್ಟಿಲಿಗೆ’ ಎಂದು ಫಲಕ ಅಳವಡಿಸಿದ್ದರೂ, ತೊಟ್ಟಿಯಲ್ಲಿ ಸಿಕ್ಕುವ ಮಕ್ಕಳ ಸಂಖ್ಯೆ ಕಡಿಮೆಯಾಗಿಲ್ಲ. ಅಂತಹ ಮಕ್ಕಳ ಪೋಷಣೆಗೆ ದುಯಾಭವನ ಪಣತೊಟ್ಟಿದೆ ಎಂದು ಅವರು ತಿಳಿಸಿದರು.

ದಾನಿಗಳ ನೆರವಿನಿಂದ ನಡೆಯುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳ ಸಹಕಾರವಿದೆ. ಮಕ್ಕಳಿಗೆ ಬಟ್ಟೆ, ಆಹಾರ ನೆರವಿನ ರೂಪದಲ್ಲಿ ನಿರಂತರವಾಗಿ ಹರಿದುಬರುತ್ತಿದೆ.

***

ಅನಾಥ ಮಕ್ಕಳನ್ನು ಪೋಷಿಸಿ, ಎಲ್ಲವಿಧದಲ್ಲೂ ಸಮರ್ಥರಾದ ಪೋಷಕರಿಗೆ ಸರ್ಕಾರದ ನಿಯಾಮಾವಳಿ ಪ್ರಕಾರ ದತ್ತು ನೀಡುತ್ತೇವೆ

ಫಾ. ಜೀನೇಶ್‌ ಕೆ. ವರ್ಕಿ, ದಯಾಭವನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT